ನಂ ಊರ್‍ನಾಗ್ ಒಂದ್ ದೊಡ್ಡ್ ಕಟ್ಟೇಯ್ತೆ –
ಲಸ್ಮಪ್ಪನ್ ಕಟ್ಟೇಂತ;
ಅಂಗೇ ನೋಡ್ತೀನ್ ನಮ್ಮೂರ್‌ ಕಟ್ಟೇಗ್
ಈ ಯೆಸರ್‌ ಯಾಕ್ ಬಂತೂಂತ. ೧

ಲಸ್ಮಪ್ಪೇನೋ ಲಸ್ಸಾದ್ಕಾರಿ !
ಕಟ್ಟೇಗ್ ಔನ್ದೇನ್ ಅಂಗು ?
ಪೈಸಾ ಕೊಟ್ಟೋರ್ ಪ್ರಜೆಗೋಳ್ ನಾವು !
ಅದೇ ಅನುಮಾನ್ ನಂಗು ! ೨

ಇಂಜ್ನೀರ್ ಸಾಬ್ರು ಉಸ್ತ್ವಾರೀಗೆ,
ಕೆಲಸಕ್ ಮೇಸ್ತ್ರಿ ಗ್ಯಾಂಗು !
ಯೆಸರ್ ಈಸ್ಕೊಳ್ಳಾಕ್ ಮಾತ್ರ ಲಸ್ಮ !
ಫೌಲ್ ಮಾಡ್ ಕೊಟ್ಟ ಟಾಂಗು ! ೩

ಯಿಂಗೇ ಸೌಕಾರ್ ರಂಗೈನ್ ಎಸರೀಗ್
ನಮೂರ್ ಬೀದಿ ಬಿಡದಿ !
ರಸ್ತೇನ್ ಔನೇನ್ ತೋಟ ತಿಮ್ನಂಗ್
ಗುಡಿಸ್ಯಾನ್ ಪೊರ್‍ಕೆ ಇಡದಿ? ೪

ಅಂಗೇ ಸುಂಕೆ ನೋಡ್ತಾನೀವ್ನಿ
ನಾನೂ ವುಟ್ದಾಗ್ಲಿಂದ-
ಚಿಕ್ಕೋರ್ ಕಸ್ಟ್ ಬಿದ್ ಬೆಳಸಿದ್ ನುಂಗಾಕ್
ದೊಡ್ಡೋನ್ ಸಿದ್ಧ ಅಂದ ! ೫

ದೊಡ್ಡೋನ್ ವೊಟ್ಟೆ ಬಲೆ ದೊಡ್ದಣ್ಣ !
ಕಂಡಿದ್ ಗುಳುಂ ! ಸ್ವಾಹ !
ತಿಂದಿ ತೇಗ್ತ ಕುಡಿತಿದ್ದಸ್ಟೂ
ಏರ್‍ತೈತ್ ಅಸುವು ದಾಹ ! ೬

ಲಕ್ಸ ಚಿಕ್ಕೋರ್ ಮಾಡಿದ್ ಕೆಲಸ
ದೊಡ್ಡೋನ್ ಒಬ್ಬಂಗ್ ಎಸರು !
ಇಂತಾ ದೊಡ್ಡೋರ್ ದೊಡ್ದ್ ಎಸರೂಂದ್ರೆ-
ಲಗ್ನ್ ಆಗ್ದೇನೆ ಬಸರು | ೭
*****