ಐತಿಹಾಸಿಕ ಪೌರಾಣಿಕ ಕಥೆಗಳಿಂದ ಒಂದು ಪಾತ್ರವನ್ನೆತ್ತಿಕೊಂಡು ಸನ್ನಿವೇಶವನ್ನು ವೈಭವೀಕರಿಸಿ ಡೈಲಾಗ್ಗಳಿಂದ ಶೃಂಗರಿಸಿ ಅಬ್ಬರದಿಂದ ಆಡಿ ಕುಣಿವ ನಟರನ್ನು ನಾವು ಬಲ್ಲೆವು. ರಾವಣ, ದುರ್ಯೋಧನ, ಕಂಸ, ಕೀಚಕ ಇಂತಹ ಪಾತ್ರಗಳನ್ನು ಏಕಪಾತ್ರಾಭಿನಯಕ್ಕಾಗಿ ಅನೇಕರು ಅನೇಕ ರೀತಿ ಬಳಸಿಕೊಂಡಿದ್ದಾರೆ. ಇಷ್ಟಕ್ಕೆಲಾ ಐದಾರು ನಿಮಿಷಗಳಲ್ಲಿ ಭಾವಾಭಿನಯವನ್ನು ಅಭಿವ್ಯಕ್ತಿಸುವ ತಾಕತ್ತಿದ್ದರಾಯಿತು. ಆದರೆ ಏಕಪಾತ್ರವನ್ನಿಟ್ಟುಕೊಂಡು ಇಡೀ ನಾಟಕಾಭಿನಯಿಸಿದ ಬಗ್ಗೆಯಂತೂ ಪುರಾವೆಯಿಲ್ಲ. ಅಂತದ್ದರಲ್ಲಿ ಒಂದೇ ಪಾತ್ರವನ್ನು ಇಟ್ಟುಕೊಂಡು ಎರಡು ಗಂಟೆಗಳ ಕಾಲ ದೃಶ್ಯರೂಪದಲ್ಲಿ ಸಿನೆಮಾ ತಯಾರಿಸುವುದು ಸುಲಭ ಸಾಧ್ಯವಲ್ಲ – ಅಲ್ಲವೆ? ಅಸಾಧ್ಯವಾದುದನ್ನು ಸಾಧಿಸುವುದರಲ್ಲಿ ತಾನೇ ಖುಷಿ. ಸೃಜನಶೀಲ ಮನಸ್ಸುಗಳ ತುಡಿತವೇ ಹಾಗೆ ಬೆಂಕಿ, ಸೂರ್ಯ, ಕ್ಷಾಮ ಇತ್ಯಾದಿ ಚಿತ್ರಗಳನ್ನು ಮಾಡಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಲೆಕ್ಕವಿಲ್ಲದಷ್ಟು ಸಲ ಬಾಚಿಕೊಂಡಿರುವ ಮಿತ್ರ ಬರಗೂರು ಸಾಹಿತ್ಯದಲ್ಲಿ ಮೌಲಿಕವಾದುದನ್ನು ನೀಡಿದಂತೆಯೇ ಸಿನೆಮಾದಲ್ಲೂ ಹೊಸ ಹೆಜ್ಜೆಗಳನ್ನು ಸಮರ್ಥವಾಗಿ ಮೂಡಿಸಿದವರು. ‘ಜನುಮದ ಜೋಡಿ’ ಯಂತಹ ಸರ್ವಕಾಲಿಕ ಕಮರ್ಷಿಯಲ್ ಚಿತ್ರಕ್ಕೆ ಸಾಹಿತ್ಯ ರಚಿಸಿ ಸಾಹಿತ್ಯ ವಲಯ ಹುಬ್ಬೆರುವಂತೆ ಮಾಡಿದ್ದಲ್ಲದೆ, ಜನಪ್ರಿಯ ನಾಯಕ ನಟ ಶಿವರಾಜಕುಮಾರ್ ನಾಯಕತ್ವದಲ್ಲಿ ‘ಹಗಲು ವೇಷ’ ನಿರ್ದೇಶಿಸಿದ ಬರಗೂರು ಕಮರ್ಷಿಯಲ್ ಕಲಾತ್ಮಕತೆಗಳ ಸಂಗಮವಾದರು. ವ್ಯಾಪಾರಿ ಸಿನಿಮಾಗಳಲ್ಲೆಲ್ಲಿ ಬರಗೂರು ಕಳೆದು ಹೋಗುತ್ತಾರೋ ಎಂದವರ ಅಭಿಮಾನಿಗಳು ಆತಂಕಕ್ಕೀಡಾದಾಗಲೆ ಪಕ್ಕಾ ವ್ಯಾಪಾರಿ ನಟಿಯರಾದ ತಾರಾ, ಭಾವನಾರಂತಹ ಬೆಡಗಿಯರ ಜೊತೆಗೂಡಿ ಕಲಾತ್ಮಕ ಚಿತ್ರವನ್ನು ನೇಯ್ದು ಗಿಟ್ಟಿಸಿದ ಪ್ರಶಸ್ತಿಗಳು ಅವರ ಎದೆಗಾರಿಕೆ ಅವರಲ್ಲಡಗಿರುವ ಕಲಾತ್ಮಕತೆಗೆ ಸಿಕ್ಕ ಪ್ರತಿಫಲ. ಇದರಿಂದಾಗಿ ಅವರ ಅಭಿಮಾನಿಗಳ ಕಣ್ಣುಗಳಲ್ಲಿ ಮತ್ತೆ ಮಿನುಗಿತು ಜೀವಜಲ. ಟೀಕಾಕಾರರಿಗೆ ತಮ್ಮ ಚಿತ್ರಗಳ ಮೂಲಕ ಉತ್ತರಿಸುವ ಛಲವೇ ಅವರಲ್ಲಿನ ಬೌದ್ಧಿಕಬಲ. ಈ ಮಾತಿಗೆ ಸಾಕ್ಷಿ ಎಂಬಂತೆ ಅವರ ನಿರ್ದೆಶನದ ಹೊಸ ಚಿತ್ರ ‘ಶಾಂತಿ’ ತೆರೆ ಕಾಣಲಿದೆ.

ಮೊನ್ನೆ ತಮ್ಮ ಖಾಸಗಿ ಮಿತ್ರರಿಗಾಗಿ ‘ಬಾದಾಮಿ ಹೌಸ್’ನಲ್ಲಿ ‘ಶಾಂತಿ’ಯ ಪ್ರೋಜಕ್ಷನ್ ಇಟ್ಟುಕೊಂಡಿದ್ದರು. ಹೀಗಾಗಿ ಚಿತ್ರ ನೋಡುವಂತಹ ಅವಕಾಶ ದೊರೆಯಿತು. ಚಿತ್ರದಲ್ಲಿ ಏಕಪಾತ್ರದ ಅಭಿನಯ ಚಾತುರ್ಯವನ್ನು ಮಾತ್ರ ವಿಶೇಷವಾಗಿ ಅನುಭವಿಸುತ್ತೇವೆಂಬುದೇ ಚಿತ್ರದ ವೈಶಿಷ್ಟ್ಯ. ಇಂತಹ ಒಂದು ಪ್ರಯೋಗ ಯಾವ ಭಾಷೆಯಲ್ಲೂ ಆಗದಿರುವುದನ್ನು ನಾವಿಲ್ಲಿ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಅಭಿಮಾನದಿಂದ ಕುಳಿತು ನೋಡಿದರೆ ಚಿತ್ರ ಖಂಡಿತ ಮನಸ್ಸಿಗೆ ಮುದ ನೀಡಬಲ್ಲದು. ಆಗಾಗ ಚಿತ್ರರಂಗವನ್ನು ಕಾಡುವ ಏಕತಾನತೆಯನ್ನು ತಪ್ಪಿಸಲು ಕ್ರಿಯಾಶೀಲ ನಿರ್ದೇಶಕರು ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವ ಸಾಹಸಕ್ಕಿಳಿಯುವುದನ್ನು ನಾವು ೧೯೭೦ ರಿಂದಲೂ ಗಮನಿಸುತ್ತಾ ಬಂದಿದ್ದೇವೆ. ಹಣ ಮಾಡುವ ದುರಾಸೆಗಿಂತ ಪ್ರಶಸ್ತಿ ಗಿಟ್ಟಿಸುವ ಚಾಪಲ್ಯ ಅಷ್ಟೇನು ಕೆಡುಕಲ್ಲವೆನ್ನಿಸುವುದಲ್ಲದೆ, ಕನ್ನಡ ಚಿತ್ರರಂಗ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಸಂಪಾದಿಸಲು ಸಹಕಾರಿ ಕೂಡ ಎಂಬುದೂ ಗಮನಾರ್ಹ.

ಸಿಂಗೀತಂ ಶ್ರೀನಿವಾಸರಾವ್ ಅವರು ನಟ ಕಮಲಹಾಸನ್ ಹಾಕಿಕೊಂಡು ‘ಪುಷ್ಪಕ ವಿಮಾನ’ ವೆಂಬ ಒಂದೂ ಮಾತಿಲ್ಲದ ಸಿನೆಮಾ ಮಾಡಿ ದಾಖಲೆಯನ್ನೇ ನಿರ್ಮಿಸಿದರು. ಇದರಲ್ಲಿ ಕಮಲ್ ನ ಕಮಾಲ್ ಬಿಟ್ಟರೆ ಮೂಕಿ ಸಿನೆಮಾ ನಮಗೇನು ಹೊಸತಲ್ಲ. ಸಿನೆಮಾ ರಂಗ ಆರಂಭ ಕಂಡದ್ದೇ ಮೂಕಿ ಸಿನೆಮಾಗಳಿಂದ ಚಿತ್ರದ ಯಶಸ್ಸಿನಿಂದ ಪ್ರೇಕ್ಷಕ ಮಾರು ಹೋದ. ಇದೇ ಚಿತ್ರ ಅಪಯಶಸ್ಸು ಕಂಡಿದ್ದರೆ? ಹಾಗಾಗದಿರಲೆಂದೇ ಕಮಲ್ ನಂತಹ ಅದ್ಭುತ ನಟನನ್ನೇ ದಿಗ್ದರ್ಶಕ ಆರಿಸಿದ್ದ, ಮತ್ತೊರ್ವ ನಿರ್ದೆಶಕ ದಿನೇಶ್ ಬಾಬು ವಿಷ್ಣುವಿನಂತಹ ನಟನಿಂದ ‘ಸುಪ್ರಭಾತ’ ಚಿತ್ರದಲ್ಲಿ ಏಕಪಾತ್ರಾಭಿನಯ ತೆಗೆದರೂ ಮುಂದೆ ಅದರೊಂದಿಗೆ ಇತರೆ ಪಾತ್ರಗಳೂ ಬೆರತು ಕಮರ್ಷಿಯಲ್ ದಾರಿ ಹಿಡಿಯಿತು. ಆದರೆ ಬರಗೂರರ ದಾರಿ ಇವೆಲ್ಲವುಗಳಿಗಿಂತ ಭಿನ್ನ. ಅಷ್ಟೇನು ಹೆಸರು ಮಾಡದ ಸುರಸುಂದರಿಯಲ್ಲದ ಅಭಿನಯದಿಂದ ಮಾತ್ರ ಸಾಟಿಯಿಲ್ಲದ ಪ್ರತಿಭಾನ್ವಿತೆ ಭಾವನಾಳಂತಹ ಸರಳ ಸೊಬಗಿಯನ್ನು ಇಟ್ಟುಕೊಂಡು ಶಾಂತಿ ಮಂತ್ರವನ್ನು ಪ್ರೇಕ್ಷಕರಿಗೆ ಬರಗೂರು ಉಣಬಡಿಸುತ್ತಾರೆ. ಚಿತ್ರದ ನಾಯಕಿಯಷ್ಟೇ ಚಿತ್ರದ ಕಥೆ ಕೂಡ ಸರಳ.

ಪೇಂಟಿಂಗ್ ಮಾಡುವ ಶಾಂತಿ ಎಂಬ ಕಲಾವಿದೆಗೆ ದೆಹಲಿಯಲ್ಲಿ ನಡೆವ ವಿಶ್ವಶಾಂತಿ ಸಮ್ಮೇಳನದಲ್ಲಿ ಶಾಂತಿಯನ್ನು ಕುರಿತಂತೆ ಪೇಂಟಿಂಗ್ಸ್ ಪ್ರದರ್ಶಿಸಲು ಆಹ್ವಾನ ಬರುತ್ತದೆ. ಅದಕ್ಕೆಂದೇ ವಿಶೇಷವಾದ ಚಿತ್ರಗಳನ್ನು ರಚಿಸಲು ಪ್ರಶಾಂತವಾದ ಮಡಿಕೇರಿಯ ಗೆಸ್ಟ್‌ಹೌಸ್ ಒಂದಕ್ಕೆ ಹೋಗುತ್ತಾಳೆ. ಅಲ್ಲಿ ಆಕೆಯ ಯೋಗಕ್ಷೇಮ ವಿಚಾರಿಸಿಕೊಳ್ಳುವ ಸಮರಸಿಂಹ (ತೆರೆಯ ಮೇಲೆ ಮಾತಾಗಿ ಮಾತ್ರ ಕಾಣುವ) ತಾನಾಕೆಯ ಅಭಿಮಾನಿ ಎಂದು ಪದೆ ಪದೆ ಹೇಳುತ್ತಾ ಚುಡಾಯಿಸುತ್ತಾ ಬೆದರಿಸುತ್ತಾ ನಗಿಸುತ್ತಾ ಬೇಸರವನ್ನು ನೀಗಿಸುತ್ತಾ ಸ್ನೇಹವನ್ನು ಕುದುರಿಸಿಕೊಳ್ಳಲು ಯತ್ನಿಸುತ್ತಾನೆ. ಹೀಗಾಗಿ ಶಾಂತಿಯನ್ನರಸಿ ಬಂದ ಶಾಂತಿ ಅಶಾಂತಳಾದರೂ ಚಿತ್ರರಚನೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ಇಷ್ಟನ್ನು ವಿರಾಮದವರೆಗೂ ಬೋರ್ ಆಗದಂತೆ ಬೋರ್ ಆಯಿತೆನ್ನುವ ಕ್ಷಣದಲ್ಲೆ ಒಂದಿಷ್ಟು ತಿರುವುಗಳನ್ನು ನೀಡುತ್ತಾ, ಅಲ್ಲಲ್ಲಿ ಸಮರಸಿಂಹನ ವಾಣಿಯಲ್ಲಿ ಹಾಸ್ಯ ಬೆರಸುತ್ತಾ ಭಾವನಾಳಿಂದ ಕಡಿಮೆ ಮಾತಾಡಿಸಿ ಹೆಚ್ಚು ಭಾವನೆಗಳನ್ನು ಚಿಮ್ಮಿಸುತ್ತಾ ನೋಡುಗರಿಗೆ ಆಕೆ ತಲೆ ತಿನ್ನುತ್ತಾಳೆಂಬ ಹಿಂಸೆಯಿಂದ ಪಾರು ಮಾಡುತ್ತಲೆ ಚಿತ್ರಕ್ಕೊಂದು ವೇಗ ತಂದುಕೊಡಲೆತ್ನಿಸುವ ಬರಗೂರರೊಂದಿಗೆ ಸಂಕಲನಕಾರ ಸುರೇಶ್ ಅರಸ್, ಸಂಗೀತಗಾರ ಹಂಸಲೇಖ ಚಿತ್ರದ ಸೊಬಗನ್ನು ಹೆಚ್ಚಿಸಿರುವ ಛಾಯಾಗ್ರಾಹಕ ಇವರೆಲ್ಲಾ ಕೈಜೋಡಿಸಿ ಬರಗೂರರ ಅಂತಃ ಸತ್ವವನ್ನರಿತು ಕೆಲಸ ಮಾಡಿದ್ದಾರೆ. ವಿರಾಮದವರೆಗೂ ಒಂದು ತೆರನಾದ ಲವಲವಿಕೆಯಿಂದ ಸಾಗುವ ಚಿತ್ರ ನಂತರ ಸಸ್ಪೆನ್ಸ್ ತಿರುವು ಪಡೆಯುತ್ತದೆ. ಶಾಂತಿ ತನ್ನೊಂದಿಗೆ ಸಮ್ಮೇಳನಕ್ಕೆ ಮೂವರು ಡೆಲಿಗೇಟ್ಸ ಕರೆದೊಯ್ಯುವ ಅವಕಾಶವಿರುತ್ತದೆ. ಅದೇ ಅವಳಿಗೆ ಕುತ್ತಾಗುತ್ತದೆ. ಸಮರಸಿಂಹ ಅದರ ಲಾಭ ಪಡೆದು ತಾನು ಉಗ್ರಗಾಮಿಗಳ ಕಡೆಯವನೆಂದೂ ಅವಳೊಂದಿಗೆ ಡೆಲಿಗೇಟ್ಸ್‌ಗಳಾಗಿ ತಮ್ಮ ಕಡೆಯ ಮೂವರನ್ನು ಕರೆದೊಯ್ಯಲೇಬೇಕೆಂದು ಬೆದರಿಕೆಯೊಡ್ಡುತ್ತಾನೆ. ಅವಳ ಜೊತೆಗೆ ದೆಹಲಿಗೆ ಹೋದ ಉಗ್ರರು ವಿಶ್ವಶಾಂತಿ ಸಮ್ಮೇಳನದಲ್ಲಿ ಬಾಂಬ್ ಉಡಾಯಿಸಿ ಗಣ್ಯಾತಿಗಣ್ಯರನ್ನು ಹತ್ಯೆಗೈವ ಸಂಚನ್ನು ಶಾಂತಿಯ ಮೂಲಕ ಈಡೇರಿಸಿಕೊಳ್ಳುವ ಹುನ್ನಾರ ಮಾಡುತ್ತಾರೆ. ಅದಕ್ಕೊಪ್ಪದ ಅವಳನ್ನು ಪಾಳುಬಿದ್ದ ಭವನ ಒಂದರಲ್ಲಿ ಬಂಧನದಲ್ಲಿಟ್ಟು ಕೊಲ್ಲುವುದಾಗಿ ಬೆದರಿಸುತ್ತಾರೆ. ಸಮರಸಿಂಹನೇ ಈಗವಳನ್ನು ಪಾರು ಮಾಡಲು ಮುಂದಾಗುತ್ತಾನೆ. ಮೊಬೈಲ್‌ನ ಮಾತುಗಳಲ್ಲೇ ಸ್ನೇಹ ಪ್ರೇಮವಾಗುತ್ತದೆ. ಶಾಂತಿಯನ್ನುಳಿಸಲು ಸಮರ ಉಗ್ರಗಾಮಿಗಳ ವಿರುದ್ದವೇ ಪ್ರತಿತಂತ್ರ ಹೂಡುತ್ತಾರೆ. ಶಾಂತಿ ಪಾರಾದ? ಹೇಗೆ ಪಾರಾದಳು? ನೀವೂ ಚಿತ್ರ ನೋಡಬೇಕು. ವಿರಾಮದ ನಂತರ ಸಾಮಾನ್ಯವಾಗಿ ನಮ್ಮ ಚಿತ್ರಗಳು ಮಕಾಡೆ ಮಲಗುವುದೇ ಹೆಚ್ಚು. ಅವರ ಕಲಾತ್ಮಕ ಚಿತ್ರವಾದ ‘ಶಾಂತಿ’ ವಿರಾಮದ ನಂತರವೇ ‘ಬುಸ್’ ಅಂತ ಹೆಡೆ ಎತ್ತುತ್ತದೆ (ಗಾಂಧಿನಗರಿಗರ ಭಾಷೆ).

ಇದೇ ಕಥೆ ನಮ್ಮ ತೆಲುಗಿನ ಖ್ಯಾತ ನಿರ್ದೇಶಕ ರಾಘವೇಂದ್ರರಾವ್ ಅವರ ಕೈಗೆ ಸಿಕ್ಕಿದ್ರೆ ಶಾಂತಿಯಾಗಿ ರಂಭಾ, ಸಮರಸಿಂಹನಾಗಿ ನಟ ಅರ್ಜುನಸರ್ಜಾನಿದ್ದು ದೆಹಲಿಯಲ್ಲಿ ವಿಶ್ವ ಶಾಂತಿ ಸಮ್ಮೇಳನ ಭವನವನ್ನೇ ಉಗ್ರಗಾಮಿಗಳು ಉಡಾಯಿಸುವುದನ್ನು ಅದ್ದೂರಿಯಾಗಿ ಅತ್ಯದ್ಭುತ ಹೊಡೆದಾಟಗೆಳಿಂದ ತೆರೆ ತುಂಬಿಸಿ ಸಖತ್ ಕಾಸು ದೋಚುತ್ತಿದ್ದರೆನ್ನಿ. ಅದರೆ ಚಾಟಿ ಇಲ್ಲದ ಬುಗರಿ ಆಡಿಸುವ ನಿಪುಣ ಬರಗೂರು, ಹೊಡೆದಾಟ ಬಡಿದಾಟವಿಲ್ಲದ ಶಾಂತಿಯ ವರ್ಣಚಿತ್ತಾರ ಬಿಡಿಸುವಲ್ಲಿ ಏಕೈಕ ಪಾತ್ರವನ್ನೇ ನೆಚ್ಚಿಕೊಂಡು ಎರಡು ಗಂಟೆಯ ಸಿನೆಮಾ ಮಾಡುವ ಸಾಹಸದಲ್ಲೂ ಅಚ್ಚುಕಟ್ಟು ಮೆರೆದಿದ್ದಾರೆ. ಇದೇ ಚಿತ್ರ ಬೇರೆ ಭಾಷಾ ನಿರ್ದೇಶಕನೊಬ್ಬ ನಿರ್ದೇಸಿದ್ದರೆ ಅತನಿಗೆ ದೊರಕುತ್ತಿದ್ದ ಪ್ರೋತ್ಸಾಹ ಪ್ರಚಾರದ ಮಾತೇ ಬೇರೆ. ಹಿತ್ತಲಗಿಡ ಮದ್ದಲ್ಲ. ಅದಿರಲಿ ಬಿಡಿ, ಚಿತ್ರದತ್ತ ಬರೋಣ. ಸಮರಸಿಂಹ ಚೀಟಿಗಳನ್ನು ಬರದಿಡುವ ಮೂಲಕ ಸಂಭಾಷಿಸುವ ಪರಿಯಾಗಲಿ ಮುಖ ತೋರದೆ ಮಾತನಾಡುವ ಸಂದರ್ಭಗಳಾಗಲಿ, ಕಾರಲ್ಲಿ ಕೂತು (ವಿಂಡೊ ಗ್ಲಾಸ್ ಏರಿಸಿರುವ) ಉಗ್ರರು ಎಚ್ಚರಿಸುವ ಶೈಲಿಯಾಗಲಿ, ಅನ್‌ನ್ಯಾಚುರೆಲ್ ಆಗದಂತೆ ನಿರ್ದೇಶಕರು ಎಚ್ಚರ ವಹಿಸಿದ್ದಾರೆ. ‘ಶಾಡೋ ಪ್ಲೇ’ ನೆರವನ್ನು ಸಹ ಪಡೆಯದ್ದು ಅವರ ಕಲಾವಂತಿಕೆಗೆ ಸಾಕ್ಷಿ ಎನಿಸುತ್ತದೆ. ಫೋನ್ ಮೂಲಕ ಮಾತು ಕೇಳುವಾಗಲೆಲ್ಲಾ ಬೋರ್ ಅದೀತೆಂದು ಪೇಂಟಿಂಗ್‌ಗಳು ಸಹ ಮೌನವಾಗಿ ಅಭಿನಯಿಸಿ ನಮ್ಮನ್ನು ಇಂಪ್ರೆಸ್ ಮಾಡುತ್ತವೆ. ಪಾರಿವಾಳ ಮತ್ತು ಪೇಂಟಿಂಗ್‌ಗಳನ್ನು ಪಾತ್ರಗಳಂತೆಯೇ ಬಳಸಿಕೊಂಡಿರುವ ಬರಗೂರರ ರೀತಿ ಸಿನೆಮಾ ಕಸಬುಗಾರಿಕೆಯಲ್ಲವರು ಮಾಗಿರುವುದರ ಪ್ರತೀಕ. ಮಡಿಕೇರಿಯ ಚೆಲುವು ಪ್ರಾಚೀನ ಅರಮನೆಯ ಸೊಬಗನ್ನು ಬಳಸಿಕೊಂಡ ರೀತಿ ಕೂಡ ಅನನ್ಯ.

ಕೊಳಲ ವಾದ್ಯ ಒಂದರಿಂದಲೇ ಹಿನ್ನೆಲೆ ಸಂಗೀತದಲ್ಲಿ ಶೃಂಗಾರ, ಹಾಸ್ಯ, ಕರುಣಾ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತರಸಗಳನ್ನು ವಿವಿಧ ಸ್ತರದ, ಸ್ವರದ ಕೊಳಲುಗಳ ಮೂಲಕ ನುಡಿಸಿ ಒಟ್ಟಾರೆ ಚಿತ್ರದ ಪರಿಣಾಮವನ್ನು ಹೆಚ್ಚಿಸುವ ಶಕ್ತಿ ಹಂಸಲೇಖರಿಗಲ್ಲದೆ ಮತ್ತೆ ಯಾರಲ್ಲಿ ಕಾಣಲು ಕೇಳಲು ಸಾಧ್ಯ.

ಗುಂಡು, ಬಂದೂಕ, ಬೂದಿ ಮಾತ್ರ ನಮಗೆ ಗೊತ್ತು ಎಂಬ ಉಗ್ರರ ರೌದ್ರತೆ ಮನುಷ್ಯರಲ್ಲದವರೂ ಮನುಷ್ಯರಾಗಿರುತ್ತಾರಲ್ಲ ಎಂಬ ಉದ್ಗಾರ. ಸಮರ ಶಾಂತಿ ಸೇರಿದರೆ ಶಾಂತಿಗೆ ಬಲ ಬರುತ್ತದೆಂಬ ನಿರ್ಧಾರ ಸಮರದಿಂದಲೇ ಶಾಂತಿ ಏಕಾಗಬಾರದು ಎಂಬ ಮಾತುಗಳ ಆವಿಷ್ಕಾರ ಇಂದಿನ ಕಾರ್ಗಿಲ್ ಕದನದ ಪರಿಣಾಮವೇ? ಬುದ್ಧ ಗಾಂಧಿ ಬಂದೂಕಿನ ನಳಿಕೆಯ ಮೇಲೆ ಕೂರುವ ಪಾರಿವಾಳ ಸಾಂಕೇತಿಕವಾಗಿ ಮೊದಲಿನಿಂದಲೂ ತೋರುತ್ತಾ ಬಂದರೂ ಕೊನೆಯಲ್ಲಿ ರಿವಾಲ್ವಾರ್ ಸಿಡಿಸುವುದರ ಮೂಲಕವೇ ಶಾಂತಿ ಬಂಧಮುಕ್ತಳಾಗಿ ಶಾಂತಿಯನ್ನು ಪಡೆವುದು ಕ್ಷಣ ವಿಪರ್ಯಾಸವೆನಿಸಿದರೂ ವಾಸ್ತವ ನೆಲೆಗಟ್ಟಿನ ಮೇಲೆ ಚಿತ್ರ ನಿಂತಿದೆ ಎಂದನ್ನಿಸದಿರದು. ಬೇರೊಬ್ಬರನ್ನು ತೋರಿಸಬಹುದಾದ ತುರ್ತಿನಲ್ಲೂ ದುಡುಕದೆ ಬುದ್ಧ, ಗಾಂಧಿ ಮಾಡಲ್‌ಗಳನ್ನು ಭಾವನಾಳ ಗೆಟಪ್ ಚೇಂಜ್ ಮಾಡಿ ತೋರುವ ನಿರ್ದೇಶಕರ ಆಲೋಚನಾ ಶಕ್ತಿಯುಕ್ತಿಗೆ ಜೋಹಾರು. ಇಂತಹ ಅಪರೂಪದ ಚಿತ್ರವನ್ನು ಟೀವಿಯಲ್ಲಾದರೂ ಕನ್ನಡಿಗರು ನೋಡಬೇಕಾದರೆ ಇದಕ್ಕೊಂದು ಪ್ರಶಸ್ತಿ ಬರಬೇಕಿದೆ – ಬರುತ್ತದೆ ಬರಲಿ. ಇಂತಹ ಸದಭಿರುಚಿಯ ಅಪಾರ ಬುದ್ಧಿಮತ್ತೆ ಶ್ರಮ ಶ್ರದ್ಧೆ ಹಾಕಿ ನಿರ್ಮಿಸಿದ ಚಿತ್ರಗಳಿಗೆ ವಿತರಕರ ಪ್ರದರ್ಶಕರ ಕೃಪೆಯಾಗದಿದ್ದರೆ ಪ್ರಶಸ್ತಿ ಬಂದರೂ ಥೇಟರ್‌ಗಳಿಗೆ ಚಿತ್ರ ಬರುವ ಗ್ಯಾರಂಟಿಯಿಲ್ಲ. ಬರಗೂರರ ಚಿತ್ರಗಳಿಗೆ ಯಾರೂ ನೋಡದಿದ್ದರೂ ಪ್ರಶಸ್ತಿ ಗ್ಯಾರಂಟಿ ಎಂಬ ಉಡಾಫೆ ಮಾತಿಗೂ ಕೊನೆಯಿಲ್ಲ. ಸಿನೆಮಾ ಪ್ರಪಂಚದ ಒಳಮರ್ಮವನ್ನರಿತವರಿಗೆ ನಾನಿಲ್ಲಿ ವಿವರಿಸುವ ಅಗತ್ಯ ಕಾಣುತ್ತಿಲ್ಲ. ವಿಶೇಷ ಚಿತ್ರ ಒಂದನ್ನು ಲಾಭ – ನಷ್ಟದ ಪರಿವೆಯಿಲ್ಲದೆ ನಿರ್ಮಿಸಿದ ರಮೇಶ್ ಯಾದವರ ಅಭಿರುಚಿ ಅಭಿನಂದನಾರ್ಹ. ಇಂತಹ ಹೊಸತನದ ಚಿತ್ರಗಳು ತೆರೆಕಾಣಬೇಕು. ಹೊಸತನಕ್ಕಾಗಿ ಸದಾ ತುಡಿವ ಕನ್ನಡ ರಸಿಕರೂ ಬುದ್ಧಿಜೀವಿಗಳು ನೋಡಬೇಕು ಹಾಗಾಗಲಿ ಎಂದಾಶಿಸೋಣ.
*****