ಅದುರುವ ಅಧರದಲಿರುವುದು ಗಾನವು
ವದಗಿದ ಕುಸುಮವು ತುರುಬಿನಲಿ
ಕಳಕಳ ರವದಲಿ ನುಣುಪಿನ ಬೆಣಚಲಿ
-ಸುಳಿಯುವ ಹೊಳೆಯೋ ಯಾರೆಲೆನೀ-

ಕೆಲಸಕೆ ನಲಿವವು ನಿನ್ನಂಗಗಳು
ಅಲಸದೆ ನಡುನಡು ನಗುವದದೇಂ
ಮಂಜುಳ ಮಾತಿನ ಇಂಗಿತವೇನದು
-ಅಂಜದ ಕಂಗಳ ಭಾಷೆಯದೇಂ-

ಉಕ್ಕಿ ಹರಿಯುವ! ಸೊಕ್ಕಿ ಬೀಳುವ
ನಕ್ಕ ನಗುವದು ಜಲಪಾತ!
ಏರುವ ಬೆಟ್ಟದ ಬೆನ್ನಿಂದಿಳೆಗೆ
-ಹಾರುವ ಝರಿಯೋ ಯಾರೆಲೆ ನೀಂ-

ಯಾರಿಗೆ ಅರಮನೆ ಕಟ್ಟುವೆ ನಗುವಿನ
ಗಾರೆಯ ಗಚ್ಚಲಿ ಪೇಳೆಲೆ ನಾರಿ!
ಸೇರದು ಅಲಸಿಕೆ ಪೋರಿಯ ರೂಪಿಗೆ
-ನಾರಿಯು ನೋಡಲು ಸಾಂತಾಳಿ-

ಊರಿದೆ ಬಿದರಿನ ಮೆಳೆಗಳ ನಡುವಲಿ
ಮೂರೇ ಕೂಗಿನ ದೂರವದು!
ದಾರಿಯ ಹಿಡಿವಳು ಸಂಜೆಯ ವೇಳೆಗೆ
-ನಾರಿಯು ಹಾಡಿನ ಹೊಳೆಯಾಕೆ-

ಬಲು ದೂರದಲಿದೆ ಹಾಯುವ ಹಳ್ಳವು.
ಬಳಸುತ ಕಮಲದ ಕೆರೆಯನ್ನು
ಹೊಕ್ಕಳು ತಾಳ ಖೆಜೂರದ ಗುತ್ತಿಯ
-ಉಕ್ಕುವ ಗಾನಕೆ ಕಡೆಯಿರದೆ-

ಬಳಿ ಬಳಿ ಗದ್ದೆಗಳಲ್ಲಿಂದಿತ್ತಲು
ಕೊಳಲಿನ ನುಡಿಗಳು ಮೊಳಗುತಿವೆ
ಅಂಗವು ಅದುರಿ ಕದಂಬದ ವನದಲಿ
-ಮಂಗಳ ನೋಟವು ಗೋಧೂಳಿಯಲಿ-

ಡಂಕಣ ಶಿಲುಪಿಯು ಕೆತ್ತಿದನೇನೈ
ಕಂಕಣನುಸಿರನು ಕೊಟ್ಟಿಹನೇ
ಕಪ್ಪನೆ ಕಲ್ಲಿನ ಅಪ್ಸರ ಮೂರುತಿ!
-ತಪ್ಪಿತೆ ಮೂಲೆಯ ಮದನನ! ಕೀಲು-

ಮೇದಿನಿ ಮೂಲೆಯ ಮದನನ ಕೈಯ್ಯ
ಮಾದರಿ ಗೊಂಬೆಯು ಸಾಂತಾಳಿ!
ತೋರುವ ನಗುವಿನ ಹಾರುವ ನಿರ್ಝರಿ!
-ನಾರಿಯು ನೋಡಲು ಸಾಂತಾಳಿ-
*****