ಎಲ್ಲರೆದೆಯೊಳಗೂ ಬಿರುಕಿನ ಗೋಡೆಗಳು
ಅದೇಕೆ ಅಷ್ಟಷ್ಟು ಎತ್ತರ ಇಷ್ಟಿಷ್ಟು ಅಗಲ
ಅಷ್ಟೊಂದು ಆಳ ಕೊಳ್ಳ ಕಣಿವೆಗಳು
ಭಾವನೆಗಳ ತಳಪಾಯ ಅಭದ್ರ ಕೃತಕ- ದೇವರೆ!

ಯುಗಯುಗಾಂತರದ ತಿರುವು ಹೊರಳು
ಗಳೊಳಗೂ ಇತ್ತು ಬಿತ್ತಿ ಬೆಳೆವ
ಪ್ರೀತಿ ಪ್ರೇಮ ವಿಶ್ವಾಸಗಳ ಬೀಜ
ಅದಕೇಕಿಂದು ರಾಹು ಬಡಿದು ಮೊಳಕೆ
ಒಡೆಯದೇ ಮನಮನ ಕಾಡಿಸುತಿವೆ- ದೇವರೆ!

ದಿಕ್ಕುದಿಕ್ಕುಗಳು ಸೀಳಿ ಚಡಪಡಿಸಿ
ಸಮುದ್ರಗಳು ಭೂಕಂಪನಕೆ ಕೋಲಾಹಲಿಸಿ
ಕಾಡು ಮೇಡು ಬೆಟ್ಟಸಾಲಿನ ಮೂಕ ಜೀವಗಳ
ಮೈಸುಟ್ಟ ನೆತ್ತರವಾಸನೆ ಹರಡಿ
ಮನಸಿಗೇಕೋ ತಳಮಳ ದೇವದೇವಾ!

ರಾತ್ರಿಯ ನಿರಮ್ಮಳ ಮೌನ ಸರಿದು
ಹಗಲಾಗುವ ಹಪಹಪಿಕೆಯೊಳಗೆ ಸಂಕಟಗಳ ಸುಳಿ
ಎಲ್ಲೆಲ್ಲೂ ಹಾವು ಏಣಿಯ ಆಟ
ದಾಳಗಳು, ದಾಳಗಳು, ಪ್ರಶ್ನಾರ್ಥಕ ವಿಷವರ್ತುಲ
ಅರ್ಥಸಿಗದ ದಾರಿಯ ತುಂಬಾ ವೇದನೆ ಚಡಪಡಿಕೆ- ದೇವರೆ!

ಕಳಿಸಿರುವೆ ಈ ಜಾತ್ರೆಗೆ ಮತಿತುಂಬಿ
ಕರೆಸಿಕೊಳ್ಳುವವನೂ ನೀನೆ
ಭಕ್ತರೊಳಗೆ ನೀನು, ನಿನ್ನೊಳಗೆ ಭಕ್ತರು
ಕರುಣಿಸು ಕರುಣಾಮಯನೆ ಮತಿಗೆಟ್ಟವರ.

ಸುರಿಸು ಎಲ್ಲರೆದೆಯಂಗಳಕೆ
ಪ್ರೀತಿ ಪ್ರೇಮ ವಿಶ್ವಾಸಗಳ ಧಾರಾಕಾರ ಮಳೆ-
ನಿನ್ನದೇ ಮಕ್ಕಳು, ನಿನ್ನದೇ ಉಸಿರು, ನಿನ್ನದೇ ಹಸಿರು
ತೇಲಿಸಿಬಿಡು ಅವರವರ ಕರ್ಮಕಾಂಡ
ಬಂಜರಿಸದಿರು ಭಾವನೆಗಳ ಭೂಮಿ
ಕ್ಷಮಿಸು, ತಂದೆ, ಶರಣು ಶರಣು ನಿನ್ನ ಪಾದಕೆ.
*****