ಪ್ರೇಮಿಗಳು ಎಲ್ಲೆಂದರಲ್ಲಿ
ತಮ್ಮ ಹೆಸರಿನ ಹಚ್ಚೆ ಕೊರೆದು
ದಾಖಲಿಸಿಕೊಳ್ಳುವುದ ನೆನಪಿಸುತ
ನಾನೂ…..
ಮರುಭೂಮಿಯಲಿ ಹೆಜ್ಜೆ ಮೂಡಿಸಲು
ಹಿಮದಲಿ ಅಕ್ಷರ ಕೆತ್ತಲು
ಸಮುದ್ರದಲಿ ಪ್ರೇಮ ದೋಣಿ ಬಿಡಲು
ಆಕಾಶದಲಿ ಕಾಮನಬಿಲ್ಲು ಮೂಡಿಸಲು
ಹೋದೆ…..
ಅವು ನಕ್ಕವು
ಮತ್ತೆ ಮತ್ತೆ ಪ್ರಯತ್ನಿಸಿದಷ್ಟು
ನಕ್ಕೇ ನಕ್ಕವು
ಎದೆತುಂಬ, ಕಣ್ತುಂಬ, ಮನತುಂಬ
ತರಂಗ ತರಂಗಗಳಾಗಿ ರಿಂಗಣಿಸಿ
ನನ್ನ ಪುಸ್ತಕದೊಳಗೆ
ಅವೇಬಂದು ಕೂತು ಹಚ್ಚೆ ಹಾಕಿಸಿಕೊಂಡವು.
*****


















