ಈ ವೈಯಕ್ತಿಕತೆಯೊಳಗಿಂದ ಜಾರಿ
ನಿರಾತ್ಮಕನಾಗಿ
ಜಾಗತಿಕ ಸಂವೇದನೆಯಲ್ಲಿ ಸೇರಿ
ಸ್ಪಂದಿಸಬೇಕೆಂದು ಬಯಸಿ ಬಂದಿದ್ದೇನೆ
ಯಾರದೋ ಕೊರಳಿಗೆ ಜೋತು
ಓ! ನಾನೆ ನೀನಾಗಬೇಕು
ನಾನಿಲ್ಲದಿರಬೇಕು
ಎಂದು ತಡಬಡಿಸಿದ್ದೇನೆ
ಯಾರದೋ ಎದೆ ನಡುವೆ ತಲೆಯಿರಿಸಿ
ನಿನ್ನಲ್ಲಿ ನಾನಾಗಬೇಕು
ನನ್ನ ನೀ ಕೊಲಬೇಕು
ಕೊಲ್ಲು ಕೊಲ್ಲೆಂದು
ಸಣ್ಣ ಮಗುವಿನ ಹಾಗೆ
ಹಟ ಹಿಡಿದಿದ್ದೇನೆ
ಆದರೂ
ಮತ್ತೆ ಹಾಸಿಗೆಯಲ್ಲಿ
ಹೊರಳಿ ಮುಸುಕೆಳೆದಾಗ
ನಾನೊಬ್ಬ
ಒಬ್ಬನೇ ಒಬ್ಬ.
ನನ್ನ ನರಚಾಚಿ ನಾನೆ ನನ್ನಿಂದ ಮೆಲ್ಲನೆ ಹೊರ
ಜಾರಬೇಕೆಂದಾಗ
ಯಾರೊ ಚುಚ್ಚಿದ ನೋವು ತಾಳಲಾರದೆ
ಮತ್ತೆ ಎಳೆದುಕೊಳ್ಳುತ್ತೇನೆ
ನನ್ನ ಚಿಪ್ಪಿನ ಒಳಗೆ
ಬಂಡೆಗಲ್ಲೆತ್ತಿ ಹಾಕಿದರು ಒಡೆಯದಂಥ ಈ
ಚಿಪ್ಪಿಗೂಡು ಹೊತ್ತು ತಿರುಗಲೇಬೇಕು
ಡುಬ್ಬದ ಹಾಗೆ ನನ್ನ ಮೇಲೆ!
ಇದೆಂಥ ಶಾಪ!
*****

Latest posts by ತಿರುಮಲೇಶ್ ಕೆ ವಿ (see all)