ಜಾಗತಿಕ ಸರ್ಕಸ್ಸು
ಆಕಾಶದ ಮೇಲೆ ಅಂತರ್ಲಾಗ
ಅಕ್ರೊಬಾಟಿಕ್ಸ್
ನಕ್ಷತ್ರದಂತೆ ಹಾಕಿ ವಿದ್ಯು-
ದ್ದೀಪಗಳ ಜಗ್ ಜಗ್ ಪ್ರಭೆಯಲ್ಲಿ
ಕತ್ತಲನು ತೋಳ ಸೆರೆಯೊಳಗೆ
ಸೆರೆಗುಡಿಸಿ ಹಿಡಿದ
ಹುಡುಗಿಯರ ಮಸಲತ್ತು
ಸಾವಿರದೆಂಟು ಆಟಗಳ
ಜಾದೂ ಜಗತ್ತು.
ಅನಿಶ್ಚಿತತೆಯ ಮೇಲೆ ಓಡಾಟ
ಕೆಳಗೆ ತಲೆತಿರುಗಿಸುವ ಪ್ರಪಾತ
ಮುಖವಾಡ ಕಟ್ಟಿ
ತಿಗರಿಯ ಮೇಲೆ ಕತ್ತಿ – ಬೆಂಕಿಯಲಿ ಕಸರತ್ತು
ಗಂಟೆಗೆಂಭತ್ತು ಮೈಲಿ ವೇಗದಲಿ
ಮೃತ್ಯುಗೋಲದ ಒಳಗೆ
ಸಾವಿನ ತುಟಿಗೆ ಮುತ್ತು
ದೊಡ್ಡ ರಾಕ್ಷಸ ಕೊಳವೆ ವಾದ್ಯಗಳ
ಹಂಡೆ ತಬಲೆಗಳ
ಮೇಳ
ಹುಚ್ಚೆದ್ದು ಬೊಬ್ಬಿಡುವ
ಜಾಜ್ ಸಂಗೀತದ ಮಜಾ.
ಸ್ವಾಮಿ, ಇದೋ ನೋಡಿ
ಕೊನೆಯ ಹೈಲೈಟು.
ಬಿಕಿನಿ ಹುಡುಗಿಯ ಜತೆ
ಮುದಿ ಚಿಂಪಾಂಜಿಯ ಕುಸ್ತಿ
ಸೊಂಟ ಸೋಲುವ ವರೆಗೆ.
*****