Home / ಕವನ / ಕವಿತೆ / ಸಮರ್ಥನೆ : ಗಂಡ

ಸಮರ್ಥನೆ : ಗಂಡ

ನಿನ್ನ ದಮ್ಮಯ್ಯ
ತಪ್ಪು ತಿಳಿಕೋಬೇಡ ನನ್ನ
ತಿಂದದ್ದೆ ತಿಂದು ಜಗಿದದ್ದೆ ಜಗಿದು
ಬರುತಿದೆ ನನಗೆ ವಾಕರಿಕೆ ಅಷ್ಟೆ
ತಿಳಿಸಾರು, ಹುಳಿ ಸಾಂಬಾರು, ಹುರಿದ ಮೀನು
ಅನ್ನ ಮೊಸರು – ನಾ ಹುಟ್ಟಿದಂದಿನಿಂದ ಮುಕ್ಕಿದ್ದು.
ಬದುಕಬೇಕಲ್ಲ ಎಂದು
ನುಂಗುತಿದ್ದೇನೆ – ಒಗ್ಗರಣೆ ಹಾಕಿದರು
ನನಗೆ ರುಚಿಯಿಲ್ಲ.
ಹಾಗೆ ಬೇಕಾದರೆ
ನಮ್ಮ ಮದುವೆಗೆ ಮೊದಲೆ
ಇಲ್ಲಿ ಕೆಲಸಕ್ಕಿದ್ದ
ಪಾರು ಕುಟ್ಟಿಯ ಟಗರು ಮರಿಗಳಂತಹ ನಾಲ್ಕು
ಗಂಡು ಮಕ್ಕಳ ಸಾಕ್ಷಿ
ಒಂದು ಕಾಲಕ್ಕೆ
ರಾತ್ರಿಯೊಂದರಲಿ ನಾಲ್ಕು ಚದುರೆಯರೊಡನೆ
ಚದುರಂಗವಾಡಿ ಗೆದ್ದವನು ನಾನು
ಹೆಚ್ಚೇಕೆ?
ಮೊದಲ ರಾತ್ರಿ ಗುಟುರು ಹಾಕಿ ನಾ
ಹೋರಿ ಬಂದಾಗ
ಹ್ಹಾ ಎಂದು ನೀನೆ
ತೆವಳಲಿಲ್ಲವೆ?
ಮನಸ್ಸಿಗೇನೋ ಬೇಕು
ಮಾಂಸ ದುರ್ಬಲ ನೋಡು.
ಬೆಕ್ಕಿಗಿಕ್ಕಿದ ಹಾಗೆ ಇಕ್ಕಿದರೆ ನಿನಗೆ
ಸಾಕಾಗುವುದಿಲ್ಲ ಭಾರಿ ಹೊಟ್ಟೆ ಬಾಕಿ!
ಈಗ ಗೊತ್ತಾಯ್ತೆ
ಜೋಲು ಮೊಲೆಗಳ ಮುದುಕ
ಸುಕ್ಕು ಮೋರೆಯ ಮುದುಕಿ
ಗುಟ್ಟು ಮಾತಿನಲಿ ನಡೆಸಿದ ಮಸಲತ್ತು?
ಗಲ್ಲಿಯಲೊ ಓಣಿಯಲೊ
ಬೇಕಾದಲ್ಲಿ ಸುತ್ತಿ
ಕದ್ದೊ, ಕೇಳಿಯೊ, ಪಡೆದೊ ತಿನ್ನಬಹುದಾದ
ಹುಟ್ಟುಸ್ವಾತಂತ್ರ್ಯಕ್ಕೆ ಹಾಕಿದರು ಸಂಕೋಲೆ.
ನೀನು ಬಯಸಿದ್ದಲ್ಲ
ನಾನು ಕೇಳಿದ್ದಲ್ಲ
ಯಾರ ಉದ್ಧಾರಕ್ಕೆ ಈ ಯಜ್ಞ?
ನಿನಗೆ ತಿಳಿದರಿಲಿಲ್ಲ ಮೊದಲೆ
ನನಗೆ ಸಂಶಯವಿತ್ತು
ಆದರೂ ನನ್ನ ಸೊಂಟದ ಸುತ್ತ
ಹಣಿಕಿ ಹಾಕುವ ಕುತೂಹಲ ನಿನಗೆ
ನನಗೊ ಕಲ್ಲು ತಪ್ಪಿಸಿಕೊಂಡು ಓಡಿ ಸಾಕಾಗಿ
ಕೊನೆಗೆ ನನ್ನದೇ ಒಂದು ಹೆಂಡತಿ ಇರಲಿ – ಎಂದು
– ಅಂತು ಹೀಗೆ
ಒಂದೆ ತಾಳಿಯಲಿ ಇಬ್ಬರಿಗೆ ಗಾಳ.
ನಮ್ಮ ಜೈಲಿನ ಒಳಗೆ ನಾವು ಕುಳಿತಿರುವುದಕೆ
ಇದು ಲೀಗಲ್ ಪರ್ಮಿಟು
ಈ ಜೈಲು ನನ್ನ ನಿನ್ನ
ಮುತ್ತಜ್ಜರ ಸೇನೆ ಕಲ್ಲು ಹೊತ್ತು ಕಟ್ಟಿದ್ದು
ನಮ್ಮದೂ ಸಂದಿದೆ ಇದಕೆ ಅಳಿಲ ಸೇವೆ
ಹೆದರಬೇಡ ನೀನು
ಬಿದ್ದೀತು ಈ ಜೈಲು
ಪ್ರವಾಹದಲಿ ಕೊಚ್ಚಿ ಹೋದೀತು ಇದರ ಒಂದೊಂದೆ ಕಲ್ಲು.
ಬೇಸರವೆ ನಿನಗೆ? ನನಗೂ ಹಾಗೆ.
ಆಯ್ತು ನಿನಗಷ್ಟು ಬೇಕಿದ್ದರೆ
ತೆರೆ ಕದ
ಈಗ ಬಂದೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...