‘ಕನ್ನಡದ ಶೇಕ್ಸ್‌ಪಿಯರ್ ಯಾರು? ಎನ್ನುವ ಪ್ರಶ್ನೆ ಕನ್ನಡ ನಾಡುನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿನ ಕಠಿಣ ಪ್ರಶ್ನೆಗಳಲ್ಲೊಂದು. ಈ ಪ್ರಶ್ನೆಗೆ ಸ್ಪರ್ಧಿಗಳು ತಲೆ ಕೆಳಗೆ ಹಾಕುವುದೇ ಹೆಚ್ಚು. ಆ ವ್ಯಕ್ತಿ ಆಧುನಿಕ ಕನ್ನಡ ರಂಗಭೂಮಿಗೆ ಕಸುವು ತುಂಬಿದ ಮಹನೀಯರಲ್ಲಿ ಒಬ್ಬರು ಎನ್ನುವ ಕ್ಲೂ ಕೊಟ್ಟು ನೋಡಿ: ಥಟ್ಟನೇ ಟಿ.ಪಿ. ಕೈಲಾಸಂ, ಸಂಸ, ಶ್ರೀರಂಗ, ಗಿರೀಶ್ ಕಾರ್ನಾಡ್ ಮುಂತಾದ ಹೆಸರುಗಳು ಒಂದರ ಮೇಲೆ ಒಂದರಂತೆ ಕೇಳಿಸುತ್ತವೆ. ‘ಕನ್ನಡದ ಶೇಕ್ಸ್‌ಪಿಯರ್’ ಎನ್ನುವ ಕೀರ್ತಿಗೆ ಭಾಜನರಾದವರು ಎಂ.ಎಲ್. ಶ್ರೀಕಂಠೇಶಗೌಡ ಎನ್ನುವ ಸರಿ ಉತ್ತರ ಹೇಳುವವರ ಸಂಖ್ಯೆ ಕಡಿಮೆ. ಇದು ಎಂ.ಎಲ್.ಶ್ರೀ. ಅವರ ಬಗೆಗೆ ಕನ್ನಡ ವಿಮರ್ಶೆ ತಳೆದ ನಿರ್ಲಕ್ಷದ ಫಲ.

ಕನ್ನಡ ಸಾರಸ್ವತ ಲೋಕಕ್ಕೆ ಮಂಡ್ಯ ಜಿಲ್ಲೆ ನೀಡಿದ ಕೊಡುಗೆ ದೊಡ್ಡದು. ಬಿ. ಎಂ.ಶ್ರೀಕಂಠಯ್ಯ, ಎ.ಎನ್.ಮೂರ್ತಿರಾವ್, ಪು.ತಿ.ನರಸಿಂಹಾಚಾರ್, ಕೆ.ಎಸ್.ನರಸಿಂಹಸ್ವಾಮಿ, ಅಳಸಿಂಗಾಚಾರ್, ಎಚ್. ಎಲ್.ನಾಗೇಗೌಡ, ಬೆಸಗರಹಳ್ಳಿ ರಾಮಣ್ಣ- ನೆನಪಿಸಿಕೊಳ್ಳುತ್ತಾ ಹೋದರೆ ಪಟ್ಟಿ ಸುಲಭಕ್ಕೆ ಮುಗಿಯುವುದಿಲ್ಲ. ಈ ಪಟ್ಟಿಯಲ್ಲಿ ಮೊದಲ ಸಾಲಿನಲ್ಲೇ ಕಾಣುವ ಹೆಸರು ಎಂ.ಎಲ್. ಶ್ರೀಕಂಠೇಶ ಗೌಡರದು (೧೮೫೨-೧೯೨೬). ಆಧುನಿಕ ಕನ್ನಡ ಭೂಮಿಗೆ ಹೊಸ ನೀರನ್ನು ಹರಿಸಿದ ಸಾಧನೆ ಅವರದು.

ಮದ್ದೂರು ತಾಲ್ಲೂಕಿನ ದೇಶಹಳ್ಳಿ ಎಂ.ಎಲ್.ಶ್ರೀ. ತವರು. ಸುಬೇದಾರರಾಗಿದ್ದ, ಸಾಹಿತ್ಯದಲ್ಲಿ ಒಲವು ಉಳ್ಳವರಾಗಿದ್ದ ಅಪ್ಪ ಅಜ್ಜ ಗುಣಗಳು ಶ್ರೀಕಂಠೇಶಗೌಡರಿಗೆ ಹುಟ್ಟಿನಿಂದ ದೊರೆತ ಬಳುವಳಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ ನಡೆಸಿದ ಅವರು, ಮದರಾಸು ವಿ.ವಿ.ಯಿಂದ ಬಿ.ಎಲ್. ಪದವಿ ಪಡೆದಿದ್ದರು. ನ್ಯಾಯವಾದಿಯಾಗಿ ವೃತ್ತಿ ಆರಂಭಿಸಿ ನ್ಯಾಯಾದೀಶರ ಸ್ಥಾನಕ್ಕೆ ಏರಿದ್ದರು. ಕನ್ನಡದಲ್ಲಿ ಮೊಕದ್ದಮೆ ನಡೆಸಿ, ತೀರ್ಪು ಹೇಳಿದ ಅವರ ಕನ್ನಡಪ್ರೇಮ, ವೃತ್ತಿಯಲ್ಲಿನ ದಕ್ಷತೆ ಅನನ್ಯವಾದುದು.

ವೃತ್ತಿಯಲ್ಲಿ ನ್ಯಾಯಾಧೀಶ, ಪ್ರವೃತ್ತಿಯಲ್ಲಿ ನಾಟಕಕಾರ ಎಂದು ಶ್ರೀಕಂಠೇಶಗೌಡರ ಪರಿಚಯವನ್ನು ಎರಡೇ ಸಾಲುಗಳಲ್ಲಿ ಮುಗಿಸಿಬಿಡಬಹುದು. ಆದರೆ ಅವರ ಆಸಕ್ತಿ ಕಾನೂನು ಹಾಗೂ ನಾಟಕಕ್ಕಷ್ಟೇ ಸೀಮಿತವಾಗಿರಲಿಲ್ಲ. ನಾಟಕದಂತೆಯೇ ಕಾದಂಬರಿ, ಕಾವ್ಯ ಪ್ರಕಾರಗಳೂ ಅವರನ್ನು ಸೆಳೆದಿದ್ದವು. ಜಾನಪದದ ಮೋಡಿಗೂ ಒಳಗಾಗಿದ್ದರು. ಪತ್ರಿಕೋದ್ಯಮದಲ್ಲೂ ತೊಡಗಿಸಿಕೊಂಡಿದ್ದರು. ಹಿಂದುಳಿದ ವರ್ಗಗಳ ಮುನ್ನಡೆಗಾಗಿನ ಹೋರಾಟದಲ್ಲಿ ಸಕ್ರಿಯರಾಗಿದ್ದರು.

ವಿಶ್ವವಂದಿತ ಮಹಾನ್ ನಾಟಕಕಾರ ಶೇಕ್ಸ್‌ಪಿಯರ್‌ನ ಕೃತಿಗಳನ್ನು ಇಂಗ್ಲಿಷ್ ಅರಿಯದ ಸಾಮಾನ್ಯ ಕನ್ನಡಿಗರೂ ಆಸ್ವಾದಿಸಬೇಕೆನ್ನುವುದು ಶ್ರೀಕಂಠೇಗೌಡರ ಹಂಬಲವಾಗಿತ್ತು. ಈ ಮಹತ್ವಾಕಾಂಕ್ಷೆಯಿಂದ ಅವರು ಶೇಕ್ಸ್‌ಪಿಯರ್ ನಾಟಕಗಳನ್ನು ಕನ್ನಡಕ್ಕೆ ತಂದರು. ಆದರೆ ಅವರದ್ದು ಮಕ್ಕಿಕಾಮಕ್ಕಿ ಅನುವಾದವಲ್ಲ. ಕನ್ನಡದ ಜಾಯಮಾನಕ್ಕೆ ಒಗ್ಗುವ ರೂಪಾಂತರ. ಶೇಕ್ಸ್‌ಪಿಯರ್‌ನ ರೋಮಿಯೊ-ಜ್ಯೂಲಿಯಟ್ ‘ರಾಮವರ್ಮ-ಲೀಲಾವತಿ’ಯಾಗಿ, ಒಥೆಲೋ ‘ಪ್ರತಾಪ ರುದ್ರದೇವ’ನಾಗಿ, ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್ ‘ಪ್ರಮೀಳಾರ್ಜುನೀಯಂ’ ಆಗಿ ಕನ್ನಡಕ್ಕೆ ತಂದರು. ಈ ರೂಪಾಂತರಗಳು ಎಷ್ಟು ಜನಪ್ರಿಯವಾದವೆಂದರೆ, ‘ಕನ್ನಡದ ಶೇಕ್ಸ್‌ಪಿಯರ್’ ಎನ್ನುವ ವಿಶೇಷಣ ಗೌಡರ ಹೆಸರಿನೊಂದಿಗೆ ಶಾಶ್ವತವಾಗಿ ಅಂಟಿಕೊಂಡಿತು.

ಎಂ.ಎಲ್.ಶ್ರೀ. ಕೃತಿಗಳನ್ನು ಅವರ ಕಾಲದ ಹಿನ್ನಲೆಯಲ್ಲಿ ನೋಡಿದಾಗ ಅವುಗಳ ಮಹತ್ವ ಎದ್ದುಕಾಣುತ್ತದೆ. ಅನುವಾದದ ಪರಿಕಲ್ಪನೆಯೇ ಅಪರೂಪವಾಗಿದ್ದ ದಿನಗಳಲ್ಲಿ ಗೌಡರು ವಿಶ್ವಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತರುವ ಎದೆಗಾರಿಕೆಗೆ ಮುಂದಾಗಿದ್ದರು. ಯಶಸ್ಸೂ ಗಳಿಸಿದ್ದರು. ಆದರೂ ಕನ್ನಡ ವಿಮರ್ಶೆಯ ಪಾಲಿಗೆ ಶ್ರೀಕಂಠೇಶಗೌಡರು ಮಲಮಗನಾಗಿಯೇ ಉಳಿದರು. (ಈ ನಿರ್ಲಕ್ಷದ ಕುರಿತು ನಾಟಕಕಾರ ಪ್ರಸನ್ನ ತಮ್ಮ ಇತ್ತೀಚಿನ ನಾಟಕ ‘ಮನ್ಮಥ ವಿಜಯ’ದಲ್ಲಿ ಪ್ರಸ್ತಾಪಿಸಿದ್ದಾರೆ).

‘ಸೀತಾ ಸ್ವಯಂವರ’, ‘ಘೋಷ ಯಾತ್ರೆ’ ಎನ್ನುವ ಸ್ವತಂತ್ರ ನಾಟಕಗಳು, ‘ಭವಾನಿ ಬಾಳು’ ಎನ್ನುವ ಚಾರಿತ್ರಿಕ ಕಾದಂಬರಿ, ‘ಚಾಮನೃಪ ಚಂದ್ರಪ್ರಭೆ’ ಎನ್ನುವ ಕಾವ್ಯಕೃತಿ ಎಂ.ಎಲ್.ಶ್ರೀ. ಅವರ ಇತರ ಕೃತಿಗಳು. ಶಾಲಾ ಮಕ್ಕಳಿಗಾಗಿ ‘ಶಾರದಾ ಭೂಗೋಳ’, ‘ದಕ್ಷಿಣ ಭಾರತದ ವ್ಯವಸಾಯ ಪದ್ದತಿ’ ಕೃತಿಗಳನ್ನು ರಚಿಸಿದ್ದಾರೆ. ಆದರೆ ಅವರ ಪ್ರತಿಭೆ ಪೂರ್ಣ ಪ್ರಮಾಣದಲ್ಲಿ ಅಭಿವ್ಯಕ್ತಗೊಂಡದ್ದು ಅನುವಾದದಲ್ಲಿಯೇ. ಸಂಘಟನೆಯಲ್ಲೂ ಶ್ರೀಕಂಠೇಶಗೌಡರು ಮುಂದು. ಗೆಳೆಯರೊಂದಿಗೆ ‘ಗ್ರಾಜುಯೇಟ್ಸ್ ಅಸೋಸಿಯೇಷನ್’ ಎನ್ನುವ ಸಂಸ್ಥೆ ಕಟ್ಟಿ, ಅದರ ಮೂಲಕ ಸುಮಾರು ೧೦೦ ಪುಸ್ತಕ ಪ್ರಕಟಿಸಿದರು. ‘ವಿದ್ಯಾದಾಯಿನಿ’, ‘ಸುರಭಿ’ ಎನ್ನುವ ಪತ್ರಿಕೆಗಳನ್ನು ಕೆಲಕಾಲ ನಡೆಸಿದರು. ‘ಸುರಭಿ’ ಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ವಿಡಂಬನ ಕಾವ್ಯ, ಜೀವನ ಚಿತ್ರಗಳು ಓದುಗರ ಅಪಾರ್‍ಅ ಮೆಚ್ಚುಗೆ ಗಳಿಸಿದ್ದವು.

‘ಇಂಗ್ಲಿಷ್ ಗೀತೆಗಳು’ ಮೂಲಕ ಕನ್ನಡ ಕಾವ್ಯಕ್ಕೆ ಹೊಸ ತಿರುವು ನೀಡಿದ ಬಿ.ಎಂ.ಶ್ರೀಕಂಠಯ್ಯನವರನ್ನು ನವೋದಯದ ಪ್ರವರ್ತಕ ಎಂದು ಕರೆಯುವುದುಂಟು. ಇಂಥ ಹೊಸತಿನ ಹಿರಿಮೆ ನಾಟಕದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯವರೇ ಆದ ಶ್ರೀಕಂಠೇಶಗೌಡರಿಗೆ ಸಲ್ಲಬೇಕು.
*****