ವಿರಹಿಣಿಯ ಸಂತಾಪ

ಚಂದ್ರಮುಖಿಯು ನೀನು ಎಂದು ಬೆಡಗುಗಾರ್ತಿ ಚೆಲುವೆಯೆಂದು
ಸಂದ ಜೀವದಾತ್ಮ ಗೊಂಬೆಯೆಂದು ಪೇಽಳಿ-
ಇಂದು ತರವೆ ಇನಿಯ ಇನಿತು ಕೊರಗಿಸುವುದೊ!

ನೀರೆ ನೀನೆ ಶೂರೆ ಎಂದು ಎನ್ನ ಮೋಹ ಕಲಶವೆಂದು
ಸಾರೆ ಸರಸಿ ತೀರದಲ್ಲಿ ಚೆನ್ನು ಮುತ್ತು-
ಮೀರಿದೊಂದಾನಂದದಿತ್ತು-ಎಲ್ಲಿ ಪೋಽದೆ?

ಊರದೇವರಬ್ಬದಲ್ಲಿ ಬೆಳ್ದಿಂಗಳಾ ಆಟದಲ್ಲಿ
ಸೇರಿದವರು ಈ ದಂಪತಿಗಳಾರು-ಎಂದು,
ಸಾರಿನೋಡೆ ನಾಚಿ ನಡೆದುದನ್ನು ನೆನೆಯೆಯಾ?

ಅಂದು ಪತ್ರದಲ್ಲಿ ನೀನು ಬಣ್ಣನೆಗಳ ಶಬ್ದ ಜಾಲ-
ದಿಂದ ಕರೆದು ಬರುವ ಸುಖದ ಕನಸ ಕಂಡು
ನೊಂದ ನನ್ನ ವಂಚಿಸುವುದು-ನಿನಗೆ ತರಽವೆ?

ಬಡವರೊಲಿದ ನಲ್ಮೆ ಜೀವ ನೈಜ ಸುಖದ ರೂಪು ಅಲ್ಲ-?
ಬಡಿದು ಬಾಳ ಭಾಗ್ಯವನ್ನು ದ್ರೋಹದಿಂದ-
ಪಡೆವ ಅಲ್ಪ ಹುಸಿಯ ಸುಖದ ಕೆಚ್ಚು ಏಽಕೆ?

ಮೂಡುವೆಟ್ಟ ಹತ್ತುವಾಗ ಸೋಗೆ ಕೇಕೆ ಹಾಕುವಾಗ
ಕಾಡಸೊಬಗು ನೋಡಿ ದಣಿದು ಸೇರಿದಾಗ
ಕೂಡಿ ಬಿಡಿಸಿ ಲೋಕ ಸುಖವ ಪೇಳಿದೆಽಲ್ಲಿ?

ಮೊಸರು ಕಡೆದು ಬೆಣ್ಣೆ ತೂಗೆ, ಕಂದ ಜೋ ಜೊ ಲಾಲಿ ಹಾಡೆ
ಹಸಲೆ ಹುಲ್ಲ ಕುಯ್ಯುವಾಗ್ಗೆ ಹಾಡಿದೇನೊ?-
ಹೊಸತು ಜೋಡಿ ಜೀವ ಸುಖದ ಮರೆತೆಯೇನೊ?

ಕೊಲ್ಲಿಗದ್ದೆ ಅರುವಿಗಾಗಿ, ಹೊನಲು ಹರಿವ ಬಯಲಿಗಾಗಿ
ಬಳ್ಳಿ ಮನೆಯ ಕಟ್ಟಿ ನಲಿವ-ಕಾಡು ಸುಽತ್ತಿ
ಮಲ್ಲಳಿಗಳ ಹಾಡ ಕೇಳೆ ನಡೆವ ಬಾಽರೊ!

ಸೂಜಿದಾರ ಹೊತ್ತು ಹೊತ್ತು ಹೊರುವ ಭಾರ ಅದೇ ಆಯ್ತು!
ಜಾಜಿ ಕೋದು ಯಾರ ಕೊರಳಲಿರಿಸಲೆಂದು
ಸೋಜಿಗದಲಿ ನೆನೆದು ನೆನೆದು-ಸೊರಗಿದೆ ನಾ!

ಬಾವಿ ನೀರ ಸೇದುವಾಗ ಎಸರ ಬೇಯ್ಸಿ ತೆಗೆಯುವಾಗ
ಕವಿದ ಮಂಕ ಕಣ್ಣಿನಿಂದ ಒರಸುವಾಗಽ
ಜೀವಿಗಳ ಈ ಹುಸಿಯ ಬಾಳ ನೆನೆವೆ ನಾಽನೊ!

ನಗುತಲಿರು ನೀ, ನಗುವಿನಲ್ಲಿ ಬಾಳ ಸತ್ಯ ಮೂಡಿ ಬರಲಿ-
ಒಗುವ ಸತ್ಯ ನಲುಮೆಯೆಲ್ಲ-ಒಲುಮೆಯಲ್ಲಿ,
ಸೊಗವನೀಕ್ಷಿಸುತಲೆ ಬರಲಿ-ಆಹಾ ಕಾಽಯೋ!

ಸೂರ್ಯ ಕಾಂತಿ ಬೀಳ್ವ ಮುನ್ನ, ಚಂದ್ರ ಬೆಳಕು ತೋರ್ವ ಮುನ್ನ,
ಕಾರ್ಯಲೋಕ ಶಾಂತಿ ತಲ್ಪ ಸೇರ್ವ ಮುಽನ್ನ,
ಭಾರ್ಯೆ ದುಃಖವಳಿಸೆ, ಪ್ರಿಯಾ-ಬಂದು ಸೇಽರೊ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೧
Next post ಈ ಶಿಕ್ಷೆ ಯಾರಿಗೆಂದು?

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…