ಅಮವಾಸ್ಯೆಯ ಸೆರಗು ಮುಸ್ಸಂಜೆ
ವಿಮಾನ ಏರುವುದು ಸಮುದ್ರ ದಾಟುವುದು
ಬೇಡವೇ ಬೇಡ
ಸಂಪ್ರದಾಯದ ಅಮ್ಮನ ಸಂಕಟ ಒಳಗೊಳಗೆ-
ವೀಸಾದ ಕೊನೆಯ ದಿನಾಂಕ
ನೋಡು ಅಮ್ಮ ಹೊರಡಲೇಬೇಕು
ಹೊಸ್ತಿಲಿನ ಮೇಲಿರುವ
ನನ್ನ ಅಸಹಾಯಕತೆ-
ಅಪ್ಪನ ಧೈರ್ಯದ ಮಾತುಗಳು
ಎರುಡು ದಿನಗಳಿಂದ ನನ್ನವನ ಸಮುದ್ರದಬ್ಬರ
ಒಂದೇ ಸಮನೆ ಫೋನಕಾಲ್ಸ್
ಪಾಸ್‌ಪೋರ್‍ಟ್ ಟಿಕೇಟ್ ಸರಿಯಾಗಿಟ್ಟುಕೊ
ಏರ್‌ಪೋರ್ಟ ಟ್ಯಾಕ್ಸ್‌ಗೆ ದುಡ್ಡುಕಟ್ಟಬೇಕು
ಸೂಟ್ ಕೇಸಿಗೆ ಮೂವತ್ತೇ ಕೆ.ಜಿ ಸಾಮಾನು
ಹೆಚ್ಚಾದುದು ಹೆಗಲಿಗೇರಿಸಬೇಡ
ಮಗುವಿಗೆ ಬೆಚ್ಚನೆಯ ಉಡುಪು
ನಿನಗೊಂದು ಸ್ವೆಟ್ಟರ್‍ ಮಾತ್ರ
ಎಮರ್ಜನ್ಸಿಗೆ ಬಗಲಚೀಲದಲ್ಲಿರಲಿ,
ಟ್ರಾನ್ಸಿಟ್ ಇದೆ ತುಂಬಾಚಳಿ-
ಭಾರವಾದರೂ ಮಗುವನ್ನು ಎತ್ತಿಕೊಂಡೇ ಇರು
ವಿಂಡೋ ಸೀಟು
ಸಾಧ್ಯವಾದಷ್ಟು ಆಕಾಶ ಸಮುದ್ರ ನೋಡು
ಓ.ಕೆ ಹ್ಯಾಪಿಜರ್ನಿ—ಕಟ್
ಮಗುವಿಗೆ ಡೈಫರ್‍ ಹಾಕಿ
ಅಮ್ಮನ ಕಾಲು ಬಿದ್ದು ಹೊರಟ ಕ್ಷಣ
ಕಣ್ತುಂಬ ನೀರು ಕಾಣದಂತೆ ಒರೆಸಿ
ಮುಗುಳ್ನಕ್ಕು ಕೈ ಬೀಸಿದೆ…..
೩೧-೧೨-೧೯೭೯
*****