ಜೀವವಿಂದು ಏನೋ ಒಂದು
ಮೋದಕೆ ವಶವಾಗಿದೆ
ಕನಸೋ ಭ್ರಮೆಯೊ ಕಣ್ಣ ನವೆಯೊ
ತರ್ಕ ಕಳಚಿ ಉರುಳಿದೆ
ಬಾನ ತುಂಬ ಬೆಳಕ ಹೊಳೆ
ಸೋರಿ ಭೂಮಿಗಿಳಿದಿದೆ
ಧಾರೆ ಧಾರೆ ಸೇರಿ ಹರಿದು
ನದಿ ಸಾಗರ ಮೂಡಿವೆ
ಅಂಗಳದಲಿ ನಗುವ ಹೂವೆ
ಆಗಸದಲು ಹೊಳೆದು
ಜಗವನೆಲ್ಲ ಒಡೆದುಕೊಡುವ
ಮಾಯೆ ಸತ್ತು ಮಲಗಿದೆ
ಹೂವು ಚಿಗುರು ಕಾಯಿ ಕಾಂಡ
ರಸವ ಸವಿವ ದುಂಬಿಯು
ಒಂದೆ ಲೀಲೆ ತಳೆದ ರೂಪ
ಭಾವಕೆನಿತೊ ಭಂಗಿಯು
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.