ನೀವೂ ಆಗಬೇಕೇ ಒಬ್ಬ ಕೆ.ವಿ.ಸುಬ್ಬಣ್ಣ
ಹಾಗಿದ್ದರೆ ನಾಹೇಳೋದನ್ನ ಕೇಳಿ,
ಭಾಷಣ, ಬರವಣಿಗೆ, ನಾಟಕ, ಬಣ್ಣ ಗಿಣ್ಣ,
ಅವೆಲ್ಲ ಅನಂತರ
ಮೊದಲು ರಂಗಿನ ಬಟ್ಟೆಯ ಸಂಚಿಯಿಂದ ಒಂದೊಂದಾಗಿ ತೆಗೆದು
ಕೈಯಲ್ಲಿ ಸೇರಿಸಿಕೊಳ್ಳಿ
ವೀಳೆದೆಲೆ, ಅಡಿಕೆ, ಒಂದಿಷ್ಟು ಸುಣ್ಣ
ತಡೆಯಿರಿ ಮಾಡಿಬಿಟ್ಟೆ ಒಂದು ಸಣ್ಣ ತಪ್ಪು
ಮೇಲೆ ಹೇಳಿದೆನಲ್ಲಾ ಅದಕ್ಕೂ ಮೊದಲು ಇಟ್ಟುಕೊಳ್ಳಿ ಅಂಗೈ ಮೇಲೆ
ಸ್ವಲ್ಪ ಹೊಗೆಸೊಪ್ಪು
ಈಗ ಕಲಿಯಿರಿ ಇದನ್ನೆಲ್ಲ ಉಂಡೆ ಮಾಡಿ ಬಾಯಲ್ಲಡಿಗಿಸಿಕೊಂಡೇ
ಮಗುವಂಥದೊಂದು ಮಂದಹಾಸ ಬೀರುವುದನ್ನ
ನಿರ್ಲಿಪ್ತನಂತಿದ್ದೂ ಬದುಕನ್ನಾಪ್ತವಾಗಿ ಪ್ರೀತಿಸುವುದನ್ನ.
*****