ಕರುಣಾಮೃತ ರಸ ರುಚಿಕರದೋಗರ
ಸುರಿದುಂಬುವಗಾಗುವದೇ ಮುಕುತಿ ? ||ಪ||

ಬೇಗನೆ ತನುನಿನ ಭೋಗವ ನೀಗದೆ
ಯೋಗಮಾರ್ಗ ಸಾಗುವದೇ ಮನುಜಾ? ||ಅ.ಪ||

ಮಂಗಗೆ ಮಾಣಿಕ ತೋರಲು ಗಿಡಗಳ
ಟೊಂಗಿಗೆ ಹಾರದೆ ಬಿಡುತಿಹುದೆ ?
ಅಂಗಜರಾಜ ಹೆದರುವ ತಪಶ್ವಿಗೆ
ಹೆಂಗಸರಾಸೆಯು ಹಿಂಗುವುದೆ? ||೧||

ಜರೆಮರಣಾದಿಯೋಳ್ ಚರಿಶ್ಯಾಡುವವನಿಗೆ
ಗುರುಮಾರ್ಗವು ದೊರಕುವದೇ ಮನುಜಾ
ಧರೆಯೊಳು ಶಿಶುನಾಳಧೀಶನ ಸ್ಮರಿಸದೆ
ಮರಳಿ ಮರಳಿ ಜನ್ಮ ತಪ್ಪುವುದೆ ? ||೨||

*****