table-71380_960_720ರುಚಿಗೂ, ಮೂಗಿಗೂ ಸಂಬಂಧವಿದೆಯೆಂಬುದು ಎಂದೋ ವಿಜ್ಞಾನಿಗಳು ಕಂಡ ಮಾತಾಗಿದೆ.  ಅಲ್ಲದೆ, ಕಿವಿಗೂ ರುಚಿಗೂ ಸಂಬಂಧವುಂಟೆಂದು ಡನ್ಮಾರ್ಕಿನ ವಿಜ್ಞಾನಿ ಡಾ|| ಕ್ರಿಶ್ಚನ್ ಹೋಲ್ಟ್ ಹ್ಯಾನ್‌ಸನ್ನರು ಎಂದೋ ಪ್ರತಿಪಾದಿಸಿದ್ದಾರೆ.  ವಿಶಿಷ್ಠ ನಾದಗಳು ಕಿವಿಗೆ ಬೀಳುತ್ತಿರುವಾಗ ತಿನ್ನುವ ಪದಾರ್ಥಗಳು ಹೆಚ್ಚು ರುಚಿಯಾಗಿ ಕಾಣಿಸುತ್ತದೆಂದು ಅವರ ಪ್ರಯೋಗಗಳಲ್ಲಿ ವ್ಯಕ್ತವಾಗಿದೆ.

ವ್ಯಕ್ತಿಗಳು ಬೀರ್‍, ಕಾಫಿ, ಚಹಾ, ವಿಸ್ಕಿ ಇಂಥ ವಿವಿಧ ಪೇಯಗಳನ್ನು ಸೇವಿಸುತ್ತಿರುವಾಗ ನಾದೋತ್ಪಕ ಯಂತ್ರದಿಂದ ವಿವಿಧ ಆವರ್ತನ ಪ್ರಮಾಣಗಳ ಧ್ವನಿಗಳನ್ನು ಹೊರಡಿಸಿದರೆ ಆ ವಿಶಿಷ್ಠ ಆವರ್ತನದ ಧ್ವನಿಯನ್ನು ಕೇಳುವಾಗ ಪೇಯ ಹೆಚ್ಚು ರುಚಿಕಟ್ಟಾಗಿ ಅನಿಸುತ್ತದೆ!  ಧ್ವನಿಯನ್ನು ಅದಕ್ಕಿಂತ ಏರಿಸಿದರೆ ಅಥವಾ ಇಳಿಸಿದರೆ ಪೇಯದ ರುಚಿ ಕೆಟ್ಟಂತೆ ಅನಿಸುತ್ತದೆ.

ಆದರೆ ಈ ರುಚಿಧ್ವನಿ ಆಯಾ ವ್ಯಕ್ತಿಯನ್ನು ಅವಲಂಬಿಸದೇ ಆಯಾ ಪೇಯವನ್ನು ಅವಲಂಬಿಸಿದೆ.  ಬೀರನ್ನು ರುಚಿಗೊಳಿಸವು ನಾದವೇ ಬೇರೆ, ವಿಸ್ಕಿಯನ್ನು, ಕಾಫಿಯನ್ನು ರುಚಿಗೊಳಿಸುವ ನಾದವೇ ಬೇರೆ.  ಆಯಾ ಪೇಯ ಸಂವಾದಿಯಾದ ನಾದ ಬರುತ್ತಿದ್ದರೆ ಸಾಮಾನ್ಯವಾಗಿ ಎಲ್ಲರಿಗೂ ಆಯಾ ಪೇಯ ರುಚಿಯಾಗಿ ಕಾಣುತ್ತದೆ!

ಅಂದರೆ ಇದರರ್ಥ, ಹೋಟೆಲ್ಗಳಲ್ಲಿ ಗಿರಾಕಿಗಳು ಭೋಜನ ಮಾಡುತ್ತಿರುವಾಗ ಅಥವಾ ಪೇಯ ಕುಡಿಯುತ್ತಿರುವಾಗ ಒಂದು ವಿಶಿಷ್ಠ ಬಗೆಯ ನಾದ ಹೊರಡಿಸಿದರೆ ಅವರಿಗೆ ಆ ಭೋಜನ, ಪೇಯ ರುಚಿಕಟ್ಟಾಗಿ ಅನಿಸುತ್ತದೆ!  ಹೋಟೆಲ್ ಮಾಲಿಕರೆ ನಿಮಗೆ ಈ ಶೋಧದ ಅರ್ಥವಾಗಿರಬೇಕಲ್ಲ?  ತಾವು ಸಹ ಈ ಶೋಧದ ಪ್ರಯೋಜನ ಪಡೆಯಬಹುದಲ್ಲ?
*****