ಎಲ್ಲರನೊಂದೆ ಪಡಿಯಚ್ಚಿನಲಿ ಕೂಡಿಸುವುದು
ಎಲ್ಲ ಬೇಲಿಗಳ ಕಿತ್ತೊಗೆದು ಬಯಲಿನಲ್ಲೆಲ್ಲರ ಬೆವರ
ಹನಿಗಳಾಗಿಸುವುದು
ಭ್ರಮೆಗುಳ್ಳೆಗಳನಡಗಿಸಿ ಕಡಲೊಡಲಲ್ಲಿ ನಿಲಿಸುವುದು
ಎಲ್ಲರ ನೆಲದ ಹಾಸಿಗೆಯ ಮೇಲೆ ಮಲಗಿಸಿ
ಆಗಸವ ಹೊದಿಸಿ ಗಾಳಿ ಜೋಗುಳ ಹಾಡಿ ತಟ್ಟುವ
ಖನಿಜಗಳನೆಲ್ಲ ಉರಿಯಲ್ಲಿ ಸುಟ್ಟು ಪುಟವಿಟ್ಟು
ಎಷ್ಟೆಷ್ಟಾಣೆ ಬಣ್ಣಗಳೆಂದು ಒರೆಗೆ ಹಚ್ಚುವುದು,
ಇಂಥ ಆದರ್ಶಗಳ ತುಂಬಿಕೊಂಡವನು
ಈ ಗುಂಪುಗೂಳಿತನ, ಈ ನಾಯಿನರಿಗಳೂಳಿತನಗಳಲ್ಲಿ ಸಿಕ್ಕು
ಭೀಮನೋ ಟಾರ್ಝನನೋ ನಿಸ್ಸಹಾಯನಾಗುವನು
ಧರ್ಮನೋ ಮಹಾತ್ಮನೋ ಏಕಾಂತನಾಗುವನು
ಕುಚೇಲನಾಗಿ ನಿಶ್ಚೇಷ್ಟನಾಗಿ ಕೂಡುವ ದೃಶ್ಯ
ಹೆಜ್ಜೆ ಹೆಜ್ಜೆಗೆ ಹೃದಯ ಕಲಕುತ್ತದೆ
ವಿವೇಕ ಹಕ್ಕಿ ಒಳಗೇ ಚಡಪಡಿಸುತ್ತದೆ.
*****


















