Home / ಕವನ / ಕವಿತೆ / ನನ್ನನ್ನು ನಾ ಕೊಂದು…

ನನ್ನನ್ನು ನಾ ಕೊಂದು…

ಚಿತ್ರ: ಉಲ್ರಿಕೆ ಮಾಯ್
ಚಿತ್ರ: ಉಲ್ರಿಕೆ ಮಾಯ್

ಬಿದಿದ್ದೇನೆ: ‘ಬಕ್ಬಾರ್‍ಲು’
ಹೇಗೋ ಉಸಿರು, ಬಿಗಿ ಹಿಡಿದಿದ್ದೇನೆ.
ಹೇಗಾದರೂ ಮಾಡಿ, ಬದುಕಬೇಕೆಂಬಾ ಆಸೆಯಲಿ, ‘ಅಂಗಾತ…’!
ವಿಲ ವಿಲ ಒದ್ದಾಡಿ, ಕಣ್ಣು, ಕಾಲು, ಕೈಗಳ ಬಡಿತ್ತಿದ್ದೇನೆ!
ಮೇಲೆ ಆಕಾಶ, ಕೆಳಗೆ ನೆಲ ನೋಡುತ್ತಿದ್ದೇನೆ…
ಮೈ ಹೆಪ್ಪುಗಟ್ಟುವ ತನಕ…! ಗಿರಗಿರನೇ ಬುಗುರಿಯಾದೆ.
ಐದೂವರೆ ಅಡಿ ಎತ್ತರದಾ ನಾನೊಬ್ಬ!
ಇಲ್ಲಿ… ಮನುಶ್ಯನೆಂದೇ ನನ್ನ ತಿಳಿದಿಲ್ಲರೊಬ್ಬ!
ಅಬ್ಬಾ! ಏಳು ಮಿಂಡ್ರಿಗಳಪ್ಪ!
*  *  *

ಕೋಟಿ, ಕೋಟಿ ಜನರ ಮಧ್ಯೆ…
ಯಾರಿಗೂ ಕಾಣುತ್ತಿಲ್ಲ! ನೆತ್ತಿ ಮೇಲೆ ಜನರ ಕಣ್ಣು!
ಯಾರಾದರೂ ಬಂದಾರು…
ಕೈಹಿಡಿದೆತ್ತಿ, ಗುಕ್ಕು ನೀರು, ಬಾಯಿಗೆ ಬಿಟ್ಟು,
ಗಾಳಿ ಬೀಸಿ, ಕೈಹಿಡಿದು,
ಎಬ್ಬಿಸುವರೆಂದು, ಜೀವ ಬಿಗಿ ಹಿಡಿದು, ಕಾದಿದ್ದೇನೆ!
*  *  *

ಅಕ್ಕ ಪಕ್ಕದಲಿ, ತುಳಿದು ಎಡವಿ ಹೋದವರ…
ಬಿಂಬ, ಪ್ರತಿಬಿಂಬವಾ ಕಂಡು, ಪುಲಕಿತಗೊಂಡಿದ್ದೇನೆ!
ಕಣ್ಣುಗಳಲಿ, ಕೂಗಿಕೂಗಿ… ಕರೆದಿದ್ದೇನೆ.
ಓಡುವವನ ಇಶ್ಟು ಸುಲಭದೀ, ಎಡವಿ ಕೆಡಿವಿದವರು…
ಈಗ ಮೈದಡವಿ, ಮೇಲೆತ್ತುವರೇನು?!
ಥೂ! ಘನ್ನು ಘಾತುಕರು!
ಅಸಲು ತಾಯ್ಗಿಂಡ್ರು…
ಏಳ್ಗೆ… ಸಹಿಸದ ಜನರ ನಡುವೆ,
ಬಲು ಅವಸರದಿ, ಎಡವಿ ಬಿದ್ದಿದ್ದು,
ತುಪ್ಪ ಜಾರಿ, ಕೊಚ್ಚೆಗೆ ಬಿದ್ದಂತಾತು!
*  *  *

ಈಗ ಜೀವ ಹೋಗುವ ಭಯವಿದೆ!
ಅಪ್ಪನ ಜೀತದ ‘ರಕ್ಕ’ದಲಿ,
ಕಲಿತದ್ದು ಸೊನ್ನೆಯೆಂಬುದೀಗ ತಿಳಿದು,
ಅಮ್ಮನ ಕೈ ತುತ್ತು, ‘ಬಲಹೀನ’ವೆಂದು ಅರಿತು,
ಹಾದಿ ಬೀದಿಯ ತುಂಬಾ, ಜನರ ‘ಆಡಂಬೋಲ’ ಕಂಡು,
ನರನಾಡಿಗಳೇ ಹುದುಗಿದವಲ್ಲ….?!
*  *  *

ತ್ವಗ್ಲು ಹದಾ ಮಾಡುವ ಚಮ್ಮಾರನ,
‘ಕಶ್ಟ’ ಮಾಡಿ, ಹೊಟ್ಟೆ ಹೊರೆವ ಶಿಷ್ಠರನ,
ಬಾಳ ಹಡುಗು, ಮಾಡುವ ಬಡಿಗನ,
ಮಡಿ ಮಾಡಿ, ದುಡಿದುಣ್ಣುವ ಮಡಿವಾಳರನ,
ಕರೆದಾಗ, ಕೆರಬಿಟ್ಟು, ಸರಸರ ಬರುವ ಕೂಲಿಕಾರನ,
ಹಳೆಕಾಲ್ಮಾರಿಗೆ, ಹೊಸ ಮೊಳೆ ಹೊಡೆವ, ಮಣೆಗಾರನ,
ಕಾಳು, ಕಡಿ, ತೂರಿ, ತುರಿಕೆಯೆಬ್ಬಿಸುವ, ಗರತಿಯರನ,
ಸಿಗಿದು, ‘ಆರ್‍ಬಾಡ್ಸಿ’ ಒಣಗಲಿಟ್ಟಿದ್ದಾರೆ!
ಬಳ್ಳಾರಿ ಜೈಲುಗೋಡೆಗಳ ಮಧ್ಯೆ…. ವೃಥಾ…ಽಽ
ಹಟ್ಟವರನ್ನು ಬಿಟ್ಟು,
ಇಣುಕಿ ನೋಡಿದವರಿಗೆ, ನೇಣು ಶಿಕ್ಷೆಯೆಂದರೇನು?!
ಈ ಹಲ್ಕಾ ವ್ಯವಸ್ಥೆ ಮಧ್ಯೆ…
ಇಂಥಾ ತಾಯಿಗಂಡರ ನಡುವೆ,
ನಾ ನ್ಯಾಯ, ನೀತಿಗಾಗಿ…
ಬಾಯಿ, ಬಾಯಿ, ಹಂಬಲಿಸಿ,
ಬಿದ್ದ ಸ್ಥಿತಿಯಲ್ಲೇ, ಹಗಲುಗನಸು ಕಾಣುತ್ತಿದ್ದೇನೆ!
ವಿಲವಿಲ ಒದ್ದಾಡಿ, ಒದ್ದಾಡಿ… ರಪ್ಪೆ ಬಡಿಯುತ್ತಿದ್ದೇನೆ!
*  *  *

ಈಗೀಗ ಮೊಂಡಾಗಿವೆ!
ಮೂಗು, ಮುಷಿಣಿ, ಈ ನನ್ನ ಹಲ್ಲೂಗಳೂ…
ಜೋತು ಬಿದ್ದ, ಎದೆ ಗುಂಡುಗಳೂ…
ತುಕ್ಕಿಡಿದ ರಂಪಿಗೆ, ಉಳಿ, ಕೊಡ್ತಿ, ಕ್ವಂಬು, ಇಕ್ಕಳಗಳೂ…
ಮೂಗರ್ಧ ಜನರ ನಡುವೆ, ಕಳೆಯುತ್ತಿದ್ದೇನೆ…
ನಾ ಕಳೆದು ಅಳಿದು, ಹೋಗುವಾ ಮುನ್ನ…
ಹುಡುಕಿ ಕೊಡುವ, ಹೃದಯ ಶ್ರೀಮಂತರಿದ್ದರೆ…
ಬನ್ನಿ! ನನ್ನ ಎದ್ದು ಕೊಡ್ರಿಸಿ, ಗುಕ್ಕು ನೀರು ಬಿಟ್ಟು,
ಬೆನ್ನು ಚೆಪ್ಪರಿಸಿ, ‘ನಾಲಿಗೆ ಪ್ರೀತಿ’ ತೋರಿ ಸಾಕು!!
*  *  *

ಈ ಕಪ್ಪು ನೆಲ ಕೆಂಪಾಯಿತಲ್ಲಾ?!
ಕೂಲಿಗಾಗಿ ಸಾಲು ಸಾಲು ಜನರಿಲ್ಲಿ…
ಕಲ್ಲಿಗೆ, ಮಣ್ಣಿಗೆ, ಮರಕ್ಕೆ, ಕೆರಕ್ಕೆ…
ಕರಮುಗಿದು, ಶಿರಬಾಗಿ, ಶರಣೆಂಬಾ… ಮೂರ್ಖರಿರುವಾಗ,
ತನ್ನಂತಿರುವಾ… ಮನುಜನ, ಕಣ್ಣೆತ್ತಿ ನೋಡದವರ, ಮಧ್ಯೆ-
ದನಗಳೆಶ್ಟೋ ವಾಸಿಯೆಂಬಾ ಘಾಸಿಲಿ,
ಮನದಲಿ, ಕೋಪ ಉಕ್ಕಿ- ಉಕ್ಕಿ- ಕೊನೆಗೆ ತಣ್ಣಗಾಗಿದ್ದೇನೆ!
ಬೆಟ್ಟದಲಿ… ಹುಲ್ಲಾಗಿ, ಮಲ್ಲಿಗೆಯಾಗಿ, ಮರವಾಗಿ, ಹಣ್ಣಾಗಿ,
ಹಳ್ಳದಾ ಚಿಲುಮೆಯಾಗಿ, ಹಸುವಾಗಿ, ಎತ್ತಾಗಿ,
ಕತ್ತೆ, ಕುದುರೆ, ಹಂದಿ, ನಾಯಿ, ಕಾಗೆ, ಕಲ್ಲಾಗಿ,
ಕೊನೆಗೆ… ಪರ್‍ಕೆ, ತಿರುಬೋಕಿಯಾದರೆಶ್ಟೋ ಚೆನ್ನ… ಚಿನ್ನ!!
ಎಂಬ… ಜಿಗುಪ್ಸೆಯಲಿ,
ಮನನೊಂದು, ನೊಂದು… ಬೆಂದು…
ನನ್ನನ್ನು ನಾ ಕೊಂದು… ಕೊಂದು…
ಇಂದು…
ಕಣ್ಣು ಮುಚ್ಚಿದೆ!!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...