ಆರು ದಿನ ಕೆಲಸ ಮಾಡಿ ಏಳನೆ ದಿನ ದೇವರು
ವಿಶ್ರಾಂತಿ ತೆಗೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ.
ತಡವಾಗಿ ಎದ್ದ, ದಿನವಿಡೀ ಕುಡಿದ, ಸಾಯಂಕಾಲ
ಬೀಚಿನಲ್ಲಿ ಸೂರ್ಯಸ್ನಾನ ಮಾಡಿದ, ಕ್ಲಬ್ಬಿನಲ್ಲಿ
ಆಡಿದ, ಡಾನ್ಸ್ ಮಾಡಿದ, ಬಾರ್‌ಮೈಡನ್ನು
ಕರೆದುಕೊಂಡು ರೂಮಿಗೆ ಹೊರಟ. ತನ್ನ
ರೂಮೆಂದು ಯಾರದೋ ರೂಮನ್ನು ಹೊಕ್ಕ.

ಎಲ್ಲಿ?  ಕೆಲವರೆನ್ನುತ್ತಾರೆ ಹವಾಯಿಯಲ್ಲಿ
ಎಂದು.  ಇನ್ನು ಕೆಲವರೆನ್ನುತ್ತಾರೆ ಗೋವಾದಲ್ಲಿ
ಎಂದು.  ದೇವರು ಇಲ್ಲಿ ವಿಶ್ರಾಂತಿ ಪಡೆದ
ಎಂಬುದಾಗಿ ಪ್ರತಿಯೊಂದು ವಿಶ್ರಾಮಧಾಮವೂ
ಪ್ರಚಾರ ಮಾಡುತ್ತಿದೆ.  ಹೀಗಿರುವಾಗ
ಪ್ರಿಯೆ, ನಾವು ಯಾರನ್ನು ನಂಬೋಣ?
ಎಲ್ಲಿಗೆ ಹೋಗೋಣ
ಈ ವಾರದ ಕೊನೆಗೆ?
*****