ಈ ಕೊಳ ಯಾಕೆ ಕೊಳಚೆಯಾಗಿದೆ?  ಎಂಜಲನ್ನ
ಯಾಕೆ ಬೀದಿಗೆಸೆಯುತ್ತೀರಿ?  ಇದೇನು ದೇವಸ್ಥಾನದ
ಮುಂದೆ ಮೂಗಿಗೆ ಹಿಡಿಯುವ ಘಾಟು?  ಅಚೀಚೆ
ಉಗಿಯುತ್ತ ಹೋಗುವ ಆ ಅವರು ಯಾರು?  ಇದು
ಬಸ್ಸು ನಿಲ್ದಾಣವೆ ಅಥವ… ಎಂಬಿತ್ಯಾದಿಯಾಗಿ ನೀವು
ಕೇಳಲಿ, ಕೇಳದೆ ಇರಲಿ, ನಿಮ್ಮ ಮುಖಭಾವದಿಂದಲೆ
ಗೊತ್ತಾಗುವುದು ನೀವು ಈ ಸ್ಥಳಕ್ಕೆ ಹೊಸಬರು ಎಂದು

ಹೊಸಬರಾದರೆ ನೀವು ಯಾರಿಂದಲೂ ತಪ್ಪಿಸಿಕೊಳ್ಳಲಾರಿರಿ
ಒಳಬೀದಿಯಲ್ಲಿ ನಡೆದಿರಿ;  ಹಳೆ ಹಂಚಿನ ಅಂಗಡಿ
ಗೂಡಿನೊಳಗೆ ಕುಳಿತಿರಿ;  ಕ್ಷೌರಿಕನಲ್ಲಿ ಕಾಯುತ್ತಿರಿ:
ಎಲ್ಲರೂ ನಿಮ್ಮನ್ನು ಗಮನಿಸುತ್ತಾರೆ.  ನಿಮ್ಮ ಅಂಗಿಯ
ಬಣ್ಣವನ್ನೂ, ತಲೆಗೂದಲಿನ ಉದ್ದವನ್ನೂ ಕಣ್ಣಿನಲ್ಲೆ
ಹಿಡಿದು ಬಿಡುತ್ತಾರೆ.  ಯಾರೋ ಹೇಳಿದರೆಂದು ನೀವು
ಸುಮ್ಮನೇ ಈ ಕಡೆ ಬಂದಿರಬಹುದು.  ಸುದ್ದಿಯಲ್ಲಿ
ಬೀಳುವುದು ನಿಮಗೆ ಇಷ್ಟವಿಲ್ಲದಿರಬಹುದು.  ಆದರೂ
ಸುದ್ದಿಯಿಂದ ತಪ್ಪಿಸಿಕೊಳ್ಳಲಾರಿರಿ ನೀವು.  ಕಾರಣ
ನೀವು ಪ್ರೀತಿಸಿ, ಮದುವೆಯಾಗಲಾರದ ಹುಡುಗಿ
ಇಲ್ಲೇ ಇದ್ದಾಳೆ.   ಆ ಮೇಲೆ ನೀವೆಂದೂ
ಹೊಸಬರಾಗಿ ಉಳಿಯುವುದಿಲ್ಲ ಇವರ ಮಧ್ಯೆ.

ಹೇಗೆ ಉಳಿಯುವುದು ಸಾಧ್ಯ? ಈ ಊರ
ಅನ್ನ ತಿಳಿ ಸಾರು, ಕಬ್ಬಿನ ಹಾಲು, ಅಂಗಡಿ ವ್ಯವಹಾರ
ಸೋಡ ಬೀಡ, ಜಗಳ, ಪ್ರೇಮ ಎಲ್ಲರಿಗೂ
ಒಂದೇ ಗುರುತು ಒತ್ತಿಬಿಡುತ್ತವೆ.  ಕ್ರಮೇಣ
ನೀವು ಇಲ್ಲಿನ ಸಭೆಗಳಲ್ಲಿ ಮಾತಾಡುತ್ತಿರುವುದನ್ನು ಕಂಡು
ನಿಮಗೇ ಆಶ್ಚರ್ಯವಾಗಬಹುದು.  ಈ ಆಶ್ಚರ್ಯವೂ
ಹೋಗುವುದು.  ಇನ್ನೆಂದೂ ನೀವು ಕಿರಿಕಿರಿಯ ಪ್ರಶ್ನೆಗಳನ್ನು
ಕೇಳುವುದಿಲ್ಲ.  ಅದಲ್ಲದೆ, ಹೊಸಬರಾಗಿಯೇ
ಉಳಿಯಬೇಕೆಂದು ಮಾಡಿದ್ದರೆ ನೀವು-
ನಿಮ್ಮ ಮುಂದಿನ ಬಸ್ಸು ಇನ್ನರ್ಧ ಗಂಟೆಯಲ್ಲಿ
*****