ಯಾವುದು ಸಿಹಿಯೋ ಯಾವುದು ಕಹಿಯೋ
ನೀನಿಲ್ಲದೆ ರುಚಿ ಎಲ್ಲಿ?
ಯಾವುದು ಸ್ವರವೋ, ಯಾವುಮ ಶ್ರುತಿಯೋ
ನೀನಿಲ್ಲದೆ ಅರಿವೆಲ್ಲಿ?
ಸುತ್ತ ಇದ್ದರೂ ನದಿ ವನ ಕಾಡು
ಆ ಚೆಲುವಿಗೆ ನಾ ಕುರುಡ;
ನೀನಿದ್ದರೆ ಮರುಭೂಮಿಯಾದರೂ
ಅಮೃತಕೆ ಹಾರುವ ಗರುಡ.
ಎಲ್ಲಿದೆ ರುಚಿ, ಬರಿ ವಸ್ತುವಿನಲ್ಲೋ
ನಿನ್ನಲ್ಲೋ ನಾ ತಿಳಿಯೆ;
ಜೊತೆ ನೀನಿದ್ದರೆ ಸುತ್ತಲ ಲೋಕ
ಸುರಿಯುವ ಜೇನಿನ ಮಳೆಯೇ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.