ಪ್ರಿಯತಮನಿಲ್ಲದೆ ಮಬ್ಬಾಗಿದೆ ಮನ
ಎಂಥ ಹಬ್ಬವೆ ಹೇಳು ಸಖಿ?
ಇದೆಂಥ ಹಬ್ಬವೇ ಹೇಳು ಸಖಿ.

ಮನ್ಮಥದೇವನ ಹೋಳಿಯುತ್ಸವ
ಹಾಳುಸುರಿಯುತಿದೆ ಹೀಗೇಕೆ?
ಓಕುಳಿಯಾಟಕೆ ಕಳೆಯೇ ಇಲ್ಲ
ಬಿಕೋ ಎನ್ನುತಿದ ಹಸೆ ಏಕೆ?

ಬೇಯುತ್ತಿದೆ ಎದೆ ಒಂದೇ ಸಮನೆ
ಸುರಿದಿದೆ ಕಂಬನಿ ಕೆನ್ನೆಯಲಿ;
ಹರಿ ಹೊರಗಿರಲು ಬೇಕೇ ದೀಪ
ಬೆಳಕಾರಿರಲು ಚಿತ್ತದಲಿ?

ಎಂದು ಬರುವನೋ ಗೋಪಿನಂದನ
ಎಂದು ಕರೆವನೋ ಹತ್ತಿರಕೆ?
ಎಂದು ಏರುವೆನೋ ಅವನನು ಕೂಡಿ
ಆನಂದದ ಮುಗಿಲೆತ್ತರಕೆ!

*****