ನಾನು ಎಲ್ಲಿ ಕರೆದೆ ನಿನ್ನ?
ನೀನೆ ಬಂದೆ ಬೆನ್ನಿಗೆ
ಮುಗಿಲನೇರಿ ಅಲೆಯುತಿದ್ದ ನನ್ನ ಇಳಿಸಿ ಮಣ್ಣಿಗೆ
ಕಾಡಿ ಬೇಡಿ ಭಾಷೆ ಹೂಡಿ
ಹನಿ ಚಿಮ್ಮಿದೆ ಕಣ್ಣಲಿ
ಗಂಡು ಬರಿಯ ಬೆಂಡೆ ಹೇಳು? ರುಚಿ ಮೊಳೆಯಿತು ಹಣ್ಣಲಿ
ಹಾಲು ಜೇನು ಹಣ್ಣ ರಸದ
ಅಭಿಷೇಕವ ಸಲಿಸಿ
ರುಚಿ ಜಿನುಗುವ ತಿನಿಸ ಇತ್ತೆ ಕನಸಿನ ಮಳೆ ಕರೆಸಿ
ತಂಗಳು ಬಾಳಾಯಿತು ಸವಿ-
ಗೊಂದಲಗಳ ಹಾಡು
ಬಣ್ಣದ ಎಲೆ ಹೂ ತುಂಬಿದ, ಗುರಿ ಮರೆಸಿದ ಕಾಡು
ಗಣಿತ ಪಾಠವಾದ ಬಾಳ
ಭಾವಮಣಿತಕೊಲಿಸಿ
ತೊರೆದು ನಿಂತೆ ನನ್ನ ಹಂಗ, ನೆನಪ ಮಾತ್ರ ವರಿಸಿ
ನೀನು ನಿನ್ನ ಪ್ರೀತಿ ರೀತಿ
ಎಲ್ಲ ಗೂಢ ನನಗೆ
ಅರ್ಥ ಯಾಕೆ, ನಿತ್ಯ ಸ್ಮರಣೆ, ಗಂಗೆ ನೀನು ನನಗೆ
*****
ಪುಸ್ತಕ: ನಿನಗಾಗೇ ಈ ಹಾಡುಗಳು