ಮಾತು ಮಾತಿಗೂ ಹಂಗಿಸುವೆ
ಉತ್ಸಾಹವನೇ ಭಂಗಿಸುವೆ
ಸರಿಯೇನೇ ಸರಿಯೇನೇ,
ನಿನ್ನೀ ಕೋಪದ ಪರಿಯೇನೆ?

ಮಾತಿನ ವ್ಯೂಹದಿ ಬಂಧಿಸುವೆ
ಜೀವದ ಮೋದವ ನಂದಿಸುವೆ
ಸರಿಯೇನೇ ಸರಿಯೇನೇ,
ಒಲವನೆ ಇರಿವುದು ತರವೇನೇ?

ಹಾಲಿಗೆ ಹುಳಿಯನು ಸೇರಿಸುವೆ
ಕೂಡಿದ ಧಾರೆಯ ಛೇದಿಸುವೆ
ಸರಿಯೇನೇ ಸರಿಯೇನೇ,
ಸ್ನೇಹಕೆ ಹೀಗೇ ಕೊನೆಯೇನೇ?

ವಾದಕೆ ಇಳಿಯುವ ಛಲ ಯಾಕೆ,
ಗೆದ್ದೇ ಗೆಲ್ಲುವ ಮದ ಏಕೆ?
ಹಮ್ಮಿನ ಗುಮ್ಮ ಸುಮ್ಮನೆ ಅಲ್ಲ
ನಮ್ಮನೆ ತಿನ್ನದೆ ಬಿಟ್ಟೀತೇ?
*****
ಪುಸ್ತಕ: ನಿನಗಾಗೇ ಈ ಹಾಡುಗಳು