ಮೈ ಸುಟ್ಟ ಕಪ್ಪು ಬೆಟ್ಟಗಳು
ಬೆತ್ತಲೆ ಮರುಭೂಮಿ
ಚಿಂದಿಯಾಗಿ ಚುಚ್ಚುವ, ಕಚ್ಚುವ ಕ್ಯಾಕ್ಟಸ್
ಕೆಂಪು ಸಮುದ್ರದ ಹವಳಗಳ ಹರ್ಷೋದ್ಗಾರ
ಕನಸು ತಣಿಸುವ ಇಂಧನ.
ಓಯೊಸಿಸ್ ನೀರಿಗಾಗಿ ಹಲುಬಿ
ಇಂಧನವನ್ನೇ ಹರಯಿಸಿಕೊಂಡ ಒಂಟೆಗಳು
ಆಗೀಗಲಷ್ಟೇ ಮುಗುಳು ನಗುವ ಮಳೆ
ಧಕ್ಕಿಸಿಕೊಳ್ಳದ ಮರುಭೂಮಿ
ಸೂರ್ಯನ ಬಿಸಿಲ್ಗುದುರೆಗಳು –

ಸೌಂದರ್ಯವೆಲ್ಲಸೂರೆಗೊಂಡ
ಸುಂದರಿಯರ ಗಜಗಮನೆಯರ ಬುರ್ಕಾ
ಉಸಿರೊಳಗೇ ಬೆರೆತ ನಮಾಜು
ಮಸಾಲೆ ಕಾಫಿ; ಸಾಮೂಹಿಕ ಹುಕ್ಕಾ
ಪ್ರಾತಃಸ್ಮರಣೀಯರಿಲ್ಲದೇ ಸಿಡಿದೆದ್ದ ಉರಿಬಿಸಿಲು
ನಕ್ಷತ್ರ ಪುಂಜಗಳ  ಚಿತ್ರ

ದುಮ್ಮಿಕ್ಕಿ ಆಕಾಶಕ್ಕೇರುವ
ನಗೆ ಇಂಧನ
ಸಮಾರಂಭಗಳ ಅಭಿಲಾಷೆ
ಅಲಂಕರಿಸಿದ ಕೆಲಿಗ್ರಾಫಿ
ಸರಕು ಸರಂಜಾಮಿನ ವ್ಯಾಪಾರಿ ಹಡಗುಗಳು –

ಇಲ್ಲಿ ಮಕ್ಕಳಿಗೆ ಗಾಳಿ ಪಟೋತ್ಸವ
ಬಾಸ್ಕಿ ರಾಬಿನ್ಸ್ ಆಯಸ್ಕ್ರೀಮ ಕಾತುರ
ನಿರಾಯಾಸ ನಿರಾತಂಕ ಹಣಗಳಿಕೆ

ಕಣ್ಣಿಗೆ ಸುಣ್ಣ ಬಣ್ಣಗಳ ಗದ್ದಲವಿಲ್ಲ
ಮಿಸುಕಿದರೆ ಗಲ್ಲುಗಳುಂಟು
ಬಣ್ಣದ ಕನಸುಗಳು ಚಿಗುರುವಿಕೆಗೆ
ಸಮಶೀತೋಷ್ಣವಿಲ್ಲ
ಹೃದಯ ಕಮರುವಾಗ
ಕನಸುಗಳು ಕನವರಿಸುತ್ತವೆ; ಮೊಟ್ಟೆಯೊಡೆಯುವುದಿಲ್ಲ

(ಸೌದಿ‌ಅರೇಬಿಯಾದ ಒಂದು ಒಳನೋಟ)
*****

ಪುಸ್ತಕ: ಗಾಂಜಾ ಡಾಲಿ

ಲತಾ ಗುತ್ತಿ
Latest posts by ಲತಾ ಗುತ್ತಿ (see all)