ನನ್ನ ಮನವ ಕದ್ದವನೇ ಬಾ
ನನ್ನ ಹರಣ ಗೆದ್ದವನೇ ಬಾ
ನನ್ನ ಕೂಡಿ ಕಳೆವ ಗಳಿಗೆಗೆ
ಏನೆಲ್ಲವನೂ ಒದ್ದವನೇ ಬಾ

ನಿನ್ನ ಎದುರು ಬಿಂಕ ಏನಿದೆ
ದೇವರೆದುರು ಶಂಕೆ ಏನಿದೆ?
ನಿನ್ನ ಸೇರಿ ಉರಿದು ಹೋಗುವಾ
ಬೆಂಕಿ ಬಯಕೆ ಮೈಯೊಳೆದ್ದಿದೆ

ನನ್ನೆದೆಯಾ ಚಿನ್ನ ಹಾರವೇ
ಕನ್ನ ಕೊರೆದು ಸುಲಿವ ಭಾರವೇ
ನಿಮಿಷಕ್ಕೊಮ್ಮೆ ರೋಮಾಂಚನಕೆ
ಸಲಿಸುವಂಥ ಪ್ರೇಮಸಾರವೇ

ಬಾರೋ ಬಾ, ನಿನ್ನ ಸೇರುವೆ
ಗಾಳಿ ಬೆರೆತ ಗಂಧವಾಗುವ
ಕನಸು ಜಗ್ಗಿ ತೂಗುತಿರುವೆನೋ
ಲಜ್ಜೆ ಕಳೆದು ಕಾಯೊ ನನ್ನನು!
*****

ಪುಸ್ತಕ: ನಿನಗಾಗೇ ಈ ಹಾಡುಗಳು