Home / ಲೇಖನ / ಪತ್ರ / ಪೂರ‍್ಣಿಮ – ೮

ಪೂರ‍್ಣಿಮ – ೮

ನಿನಗೆ ಮತ್ತೊಂದು ಪತ್ರ ಬರೆಯಬೇಕೆಂದು ನಾನು ದಿನದ ಕೆಲಸದಿಂದ ಬಿಡುವು ಮಾಡಿಕೊಂಡು ಕುಳಿತು ಕೊಳ್ಳಬೇಕೆಂದಿದ್ದೆ. ಅಂದು ಬೆಂಗಳೂರಿನಲ್ಲಿ ಸಾಲು ಸಾಲಾಗಿ ನೆತ್ತಿಗೇರಿದ್ದ ಚಿತ್ರಗಳನ್ನು ಅರ್ಧ ಚಿತ್ರಿಸಿ ಮುಗಿಸಿದ್ದ ಪತ್ರವನ್ನೇ ಇಂದು ಮುಂದುವರಿಸಲು ಸಿದ್ಧನಾಗಿದ್ದೆನು. ನನ್ನ ಸ್ಫೂರ್ತಿಗೆ ತೀರ್ಥವಾದ, ಗೋಪಾಲರಾಯರ ಫಿಲ್ಟರ ಕಾಫಿಯೂ ಕರುಳಿನಲ್ಲಿ ಹರಿಯುತ್ತಿತ್ತು. ಅಷ್ಟು ಹೊತ್ತಿಗೆ ನಿನ್ನ ಪತ್ರವೂ ಬಂದೇಬಿಟ್ಟಿತು. ಮಧ್ಯಾಹ್ನದ ಟಪಾಲಿನ ವೇಳೆಗೆ ಬರುವ ಪತ್ರ ಅಂದು ಮುಂಜಾನೆಯ ಟಪಾಲಿಗೇಕೆ ಬಂದಿತೋ? ಈ ಪತ್ರ ಈಗಲೇ ಬರೆದಿದ್ದರೆ ಶ್ರೀರಂಗಪಟ್ಟಣದಲ್ಲಿನ ನಮ್ಮ ನಾಲ್ಕು ದಿನಗಳ ಸುಲ್ತಾನದರ್ಬಾರದ ಜೀವನವನ್ನೆಲ್ಲಾ ಚಿತ್ರಿಸಿಬಿಡುತ್ತಿದ್ದೆನು. ನಿನ್ನ ಪತ್ರದ ಆ ಹಿತೋಪದೇಶ ಅಲ್ಲಿನ ನಿನ್ನ ಜೀವನದ ಸಂಕಟದ ಸಂಭ್ರಮ ಇವೆಲ್ಲವನ್ನೂ ಓದುತ್ತಿರುವಾಗಲೇ ನನ್ನ ನೆನಪಿಗೆ ಕಾರ‍್ಗತ್ತಲು ಕವಿಯಿತು.

ರಂಗನಾಥನ ದೇವಾಲಯದ ಮುಂದೆ, ಪಾಳಾಗಿ, ಬಯಲಾಗಿ ಭಿನ್ನವಾಗಿ, ಅವಶೇಷವಾಗಿ ನಿಂತಿರುವ ಟೀಪುಸುಲ್ತಾನನ ಅರಮನೆಯಂತೆ ಶೂನ್ಯವಾಯಿತು ನನ್ನ ಮನಸ್ಸು. ಈ ಅರಮನೆಗಿರುವ ಇತಿಹಾಸವೆಷ್ಟೋ ಆದರವನ್ನು ಹೇಳದೆ, ಮೂಕಾಗಿ ಬಂದವರ ಹೋದವರ ಬಣ್ಣಿಸುವರ ಬೈಯುವರ ವಸ್ತುವಾಗಿ ಅದು ನಿಂತಿರುವಂತೆಯೇ ನೋಡುವವರ, ಕಾಡುವವರ, ಅಣಕಿಸುವರ ದವಡೆಗೆ ಸಿಕ್ಕಿರುವ ನನ್ನ ಜೀವನದ ನಿಜ ಚಿತ್ರವನ್ನು ನಿನ್ನ ಶಬ್ದಗಳಲ್ಲಿ ಕಂಡುಕೊಂಡು ಕ್ಷಣ ಹೊತ್ತು ಕೈ ಕಟ್ಟಿ ಕುಳಿತುಕೊಂಡೆನು. ಈ ಕೈಸನ್ನೆಗೆ ಕಣ್ಣುಗಳು ಮುಚ್ಚಿಕೊಂಡವು. ಮುಖದ ಕಣ್ಣುಗಳು ಮುಚ್ಚಿದ ಕೂಡಲೇ ಹೃದಯದ ಕಣ್ಣುಗಳು ತೆರೆದವು. ಆದರೂ ಅಲ್ಲಿ ಕಂಡುದುದು ನೀನು; ನಿನ್ನ ಪತ್ರದಲ್ಲಿ ಗೆರೆಯೊಡೆದು ದಪ್ಪವಾಗಿ ಬರೆದಿರುವ ಆ ದೊಡ್ಡಕ್ಷರಗಳ ಒಂದೇ ಒಂದು ವಾಕ್ಯ.

“ಲೋಕವನ್ನು ಮೀರಿ ಬದುಕುವ ಎದೆತನವು ನಿಮಗೆ ಬಂದಾಗಲೇ ನಿಮಗೆ ಸುಖ.” ಪೂರ‍್ಣೀ,ಇದೆಷ್ಟು ದೊಡ್ಡ ಮಾತು. ಯಾವ ದೃಷ್ಟಿಯಿಂದ ಯಾವ ಭಾವನೆಯಿಂದ, ಏತಕ್ಕಾಗಿ ನನಗೆ ಈ ವಿರೋಪದೇಶವನ್ನು ಮಾಡುತ್ತಿರುವೆ? ಇದನ್ನು ತಾತ್ವಿಕವಾಗಿ ತೆಗೆದುಕೊಳ್ಳಲೋ ಅಥವಾ ವ್ಯವಹಾರಿಕವಾಗಿ ತೆಗೆದುಕೊಳ್ಳಲೊ? ಅಥವಾ ಎರಡು ದೃಷ್ಟಿಯಲ್ಲಿ ತೆಗೆದುಕೊಳ್ಳಬೇಕೋ?

ಹತ್ತೇ ಹತ್ತು ಜನರು ಸಾಕು, ಲೋಕವನ್ನು ಮೀರಿ ಬದುಕಬಲ್ಲ ಸಾಹಸಿಗಳು? ಅವರಿಂದ ಲೋಕದ ಉದ್ಧಾರವಾಗುವುದು ಎಂದು ಮಹರ್ಷಿ ಅರವಿಂದರು ಹಿಂದೊಮ್ಮೆ ಅಂದ ಮಾತನ್ನು ನೀನೆಲ್ಲಿಯಾದರೂ ಓದಿದ್ದೆಯೇನು? ಅದು ನೆನಪಿಗೆ ಬಂದಿತೆ? ಅಂತಹ ಸಾಹಸಿ ನಾನಾಗಬೇಕೆಂಬುದು ನಿನ್ನ ಬಯಕೆಯೇ? ನೀನು ಮನಸ್ಸು ಮಾಡಿದರೆ ನನ್ನನ್ನು ಅಂತಹ ಸಾಹಸಿಯಾಗಿಯೇ ಮಾಡಬಲ್ಲೆ.

“No man can live piously or die righteously without a wife” ಅಂದರೆ ಯಾವನಾಗಲಿ ಹೆಂಡತಿಯಿಲ್ಲದೆ, ಪವಿತ್ರವಾಗಿ ಬಾಳಲಾರ, ನ್ಯಾಯವಾಗಿ ಸಾಯಲಾರ ಎಂಬ ರಿಚರ್ ನ ಉಕ್ತಿಯನ್ನು ನಾನು ಒಪ್ಪಿಕೊಳ್ಳುವದರಲ್ಲಿ ಹಿಂದು ಮುಂದು ನೋಡದಿರುವಾಗ, ನಾನು ಲೋಕ ಮೀರಿ ಬದುಕುವಂತಹ ಎದೆತನ ಪಡೆಯಲು ನಿನ್ನ ಎದೆಯ ಧೈರ್ಯವನ್ನು, ಭುಜದ ಬಲವನ್ನೂ ಕೊಡು ಎಂದು ಕೇಳಿಕೊಳ್ಳುವುದಕ್ಕೆ ನಾಚಿಕೆ ಪಡುವುದಿಲ್ಲ.

ನಮ್ಮ ಮನೆಗೆ ನನ್ನ ಮಡದಿಯಾಗಿ ಬಂದಾಗ ತಲೆ ಎತ್ತಿ ನೋಡಲು ಸಹ ನಿನಗೆ ನಾಚಿಕೆ. ಆದರೆ ಮನೆಯು ಹಳೆಯದಾದಂತೆ, ಮನವು ಕುದುರಿದಂತೆ ನೀನು ಕುದುರಿಕೊಂಡೇ ಬಿಟ್ಟೆ. ಕೊನೆಗೊಂದು ದಿನ ನಿಮ್ಮ ಪ್ರೇಮದ ಸಾಲವನ್ನು ತೀರಿಸಿರುವೆನು ಇದೋ ನೋಡಿ ಎಂದು ಲೀಲಾ ಶಂಕರರನ್ನು ಎಳೆದು ತಂದು ನಿಲ್ಲಿಸಿದೆ. ಸಾಲ ಕೊಟ್ಟವರಿಗೆ, ಅಸಲು ಬಡ್ಡಿ ಒಪ್ಪಿಸಿ ನಿಂತ ಸಾಲಗಾರನ ಸಮಾಧಾನದ ಮುಖದಂತೆ ಮುಖ ಮಾಡಿ ನಿಂತುಕೊಳ್ಳಲಾರಂಭಿಸಿದ ಮುಖದ ಮಟ್ಟಕ್ಕೆ ನಿನ್ನ ಮುಖವಾಯಿತು. ರಾಘವನು ಹುಟ್ಟಿದ ಮೇಲಂತೂ ಸಾಲದ ಜೊತೆಗೆ ಚಕ್ರಬಡ್ಡಿಯನ್ನು ತೆತ್ತುವರಂತೆ, ನಿಮ್ಮ ಹಂಗೇನು ಎನ್ನುವಷ್ಟು ಜಂಭ ಬಂದಿತು ನಿನಗೆ. ನಾನು ಎಲ್ಲವನ್ನು ಸಹಿಸಿಕೊಂಡೆ, ನೀನು ನನ್ನ ಸೋದರ ಮಾವನ ಮಗಳೆಂದು, ಈಗ ನನಗೆ ಎದೆತನದ ಪಾಠವನ್ನು ಹೇಳಿಕೊಟ್ಟೆ. ಇನ್ನುಳಿದಿರುವುದೇನು? ಪೂರ‍್ಣೀ,ನೀನು ನನ್ನ ಕಿವಿ ಹಿಂಡಿ ಇನ್ನು ಮುಂದೆ ನೀವು ವಿರಹ, ಅಗಲಿಕೆ, ಬೇನೆ, ಬೇಸರ ಎಂದು ಪತ್ರ ಬರೆಯಬೇಡಿರಿ. ನಾನು ಇನ್ನು ನಿಮಗೆ ಪ್ರೇಮದೇವತೆ ಮಾತ್ರವಲ್ಲ. ನಿಮ್ಮ ಎದೆಗೆ ಶಕ್ತಿ ತುಂಬುವ ಕಾಳಿದೇವತೆ ಎಂದೆಲ್ಲಿ ಗರ‍್ಜಿಸಿಬಿಡುವೆಯೋ…. ಸದ್ಯ, ದಮ್ಮಯ್ಯ, ಅಂತಾಗು. ನೀನು ನನ್ನ ಪಾಲಿನ ಕಾಳಿಯಾದರೆ, ಎಷ್ಟರ ಕೆಲಸ ನನಗೆ ಈ ಲೋಕವನ್ನು ಮೀರಿ ನಿಲ್ಲುವುದು. ಆದರೆ ಈ ಲೋಕದ ಕಾಳಿಯಾಗಬೇಡ ಆ ಲೋಕದ ಕಾಳಿಯಾಗು ಅಷ್ಟೇ. ಆಗ ನನ್ನ ಭುಜದ ಮೇಲೆ ಆದಿಶಕ್ತಿ ಬಂದಾಂತಾಗುವುದು.

ನಾನು ಈ ಲೋಕವನ್ನು ಕಂಡರೆ ಹೆದರುವುದು ಕೆಲವೇ ಕೆಲವು ವಸ್ತುಗಳಿಗೆ. ನಿನ್ನ ಕಣ್ಣೀರು, ಮಕ್ಕಳ ಬರಿಹೊಟ್ಟೆ, ಸತ್ಯವಂತರ ಶಾಪ ಈ ಮೂರರ ಹೊರತು ನಾನು ಯಮನ ಸಾವಿನ ಹಗ್ಗವನ್ನು ಕಂಡರೂ ಮುಕ್ಕಣ್ಣನ ಫಾಲ ನೇತ್ರವನ್ನು ಕಂಡರೂ ಹೆದರುವುದಿಲ್ಲ. ಹಾಗೆ ಹೆದರುವುದಾಗಿದ್ದರೆ, ಬೆಂಗಳೂರು ಇಷ್ಟು ಹೊತ್ತಿಗಾಗಲೇ ನನ್ನನ್ನು ನುಂಗಿ ನೀರು ಕುಡಿದು ಬಿಡುತ್ತಿತ್ತು. ಯಾರ ಕ್ರಿಯಾಶಕ್ತಿ ಬಲವಾಗಿರುವುದೋ ಅವರು ತಮ್ಮ ಭವಿಷ್ಯವನ್ನಷ್ಟೇ ಅಲ್ಲ, ಇತರರ ಭವಿಷ್ಯವನ್ನು ರೂಪಿಸಿಕೊಡಬಲ್ಲರು, ಎಂಬ ನಂಬಿಕೆಗೆ ನೀನು ಅನುದಿನವೂ ನೆರವಾಗುತ್ತಲೇ ಬಂದೆ. ಒಂದೇ ರಾಗೀ ರೊಟ್ಟಿಯನ್ನು ನಾಲ್ಕು ಭಾಗ ಮಾಡಿ ಎರಡು ದಿನ ತಿನ್ನಬೇಕಾದ ಬಡತನದ ದಿವಸಗಳಲ್ಲಿ ನೀನು ಅಳಲಿಲ್ಲ. ಅಂದು ನಿನ್ನ ಕಣ್ಣಲ್ಲಿ ಒಂದು ಹನಿಯನ್ನು ನಾನು ಕಂಡಿದ್ದರೆ ನಾನು ನೀರಿನಲ್ಲಿ ಬಿದ್ದ ಸುಣ್ಣದ ಹರಳಂತಾಗಿ ಬಿಡುತ್ತಿದ್ದೆ. ಅದೆಲ್ಲವನ್ನು ನೀನು ಅರ್ಥ ಮಾಡಿಕೊಂಡು ಆ ಹಸಿವನ್ನು ಅಡಗಿಸಿಕೊಂಡು ಹುಸಿನಗುವನ್ನು ನಕ್ಕು ನನ್ನನ್ನು ನಗಿಸುತ್ತಿದ್ದೆ. ಆದರೆ ಪ್ರೇಮಕ್ಕೆ ವಯಸ್ಸಾದಂತೆಲ್ಲಾ ನೀನು ನಿನ್ನ ವಯಸ್ಸನ್ನು ಆದರೊಂದಿಗೆ ಮೇಳವಿಸಿಕೊಂಡು ಹಣ್ಣಾಗುತ್ತಿರುವಿ. ಹೆಣ್ಣು ಮೊದಲೇ ಸಿಹಿ. ಅದು ಹಣ್ಣಾದ ಮೇಲೆ ಅದರ ಸವಿಯನ್ನು ಕೇಳಬೇಕೆ? ಪ್ರಾಯದಲ್ಲಿ ಪ್ರೇಮವಾವುದೋ, ಕಾಮವಾವುದೋ ಎಂಬುದನ್ನು ಬೇರ‍್ಪಡಿಸಿ ನೋಡುವುದಕ್ಕೆ ವೇಳೆ ಇರುವುದಿಲ್ಲ. ಒಂದೊಂದು ಸಾರಿ ಅತಿ ಕಾಮಿಗೂ ಬಹು ಪ್ರೇಮಿಗೂ ಇರುವ ಅಂತರವೇ ಆಗ ಕಾಣುವದಿಲ್ಲ. ಆ ಆವೇಶವಿಳಿದಾಗ, ಕಾಮದ ಪ್ರಾಯವು ಕಡಿಮೆಯಾದಾಗ, ಹೆಣ್ಣು-ಗಂಡುಗಳ ಪ್ರೇಮದ ನಿಲುವು ನಿಚ್ಚಳವಾಗಿ ಕಾಣಿಸುವುದು. ಈಗಲೇ ನನ್ನ ನಲವತ್ತು ವರುಷ ವಯಸ್ಸಿನ ನನ್ನ ನಿನ್ನ ಅನುರಾಗದಲ್ಲಿ ನೀನು ಕುರುಡಿಯಾಗಿರುವಿ. ನಾನು ಊರಿಗೆ ಬಂದಾಗಲೆಲ್ಲಾ, ನೀನು ಏಕಾಕಿಯಾಗಿರಲಾರನೆಂಬುದನ್ನು ಹೇಗೋ ನನಗೆ ಸಂಕಟದ ಸ್ವರದಲ್ಲಿ ಮುಟ್ಟಿಸುವೆ. ಈ ಸಂಕಟ ಮುಟ್ಟಿದಾಗಲೇ ಮೊದಲೇ ತಡೆಯಲಾರದ ಹೃದಯವು ಮತ್ತಷ್ಟು ಮುದುಡಿ ಹೋಗುತ್ತಿದ್ದಿತು. ಇದರ ಜೊತೆಗೆ ಅನ್ನ ಅರಿವೆಗೂ ನನ್ನ ನಿನ್ನ ಔದಾರ‍್ಯಕ್ಕೂ, ಬಂಧು ಮಮತೆ, ಸಹೋದರ ಸಹಾನುಭೂತಿ, ಆದರ, ಆತಿಥ್ಯಗಳಿಗಾಗಿ ಸಾಲದ ನನ್ನ ಸಂಪಾದನೆ, ಇವು ಸೇರಿಕೊಂಡು ನನ್ನನ್ನು ಬತ್ತಿಸಿ ಬಿಟ್ಟಿದ್ದವು. ನೀನು ಈ ಸಾರಿಯ ಪತ್ರದಲ್ಲಿ ನನ್ನ ನಿಜರೂಪವನ್ನೇ ನಿಜವಾಗಿ ಚಿತ್ರಿಸಿರುವೆ. ಆ ಮಾತುಗಳನ್ನೇ ಇಲ್ಲಿ ಪುನರುಚ್ಚರಿಸಿರುವೆನು.

“ಉರುಬಿದರೆ ರಕ್ತ ಬರುವಂತೆ ಇದ್ದ ನಿಮ್ಮ ದೇಹ ಬತ್ತಿ ಹೋಗಿ ಸೊರಗಿ ಸೊಪ್ಪಾಗಿರುವುದನ್ನು ನೋಡಿ, ನಾನು ಕ್ಷಣ ಕ್ಷಣಕ್ಕೂ ಕ್ಷಯಿಸುತ್ತಿರುವೆನು, ವೈದ್ಯರು ವಾಸಿಮಾಡದಂತಹ ಕ್ಷಯರೋಗವು ನನಗೆ ಬರ ತೊಡಗಿದೆ. ಚಿಂತೆ, ಚಿತಾಗ್ನಿಗಿಂತ ಕ್ರೂರಾಗ್ನಿ ಎಂಬುದನ್ನು ನಿಮಗೆ ಹೇಳಬೇಕೆ? ನಿಮ್ಮ ಚಿಂತೆಯ ಕಾರಣವನ್ನು ಬಿಟ್ಟು ಲೋಕಮೀರಿ ನಿಲ್ಲುವ ಎದೆ ತನದಿಂದ ಎದ್ದು ನಿಲ್ಲಿರಿ; ಆಗ ನನ್ನ ಕ್ಷಯರೋಗವು ವಾಸಿಯಾಗುವುದು.”

ಪೂರ‍್ಣೀ, ಪೂರ‍್ಣೀ ಬರೆಯಲಾರೆ. ನಿನ್ನ ಶಬ್ದಗಳಲ್ಲಿ ಉದಿಸಿರುವ ನೋವಿನ ಕಾವನ್ನು ತಡೆಯಲಾರೆ. ಎದೆ ತುಂಬ ನಾನು ತಡೆಯಲಾಗದ ಭಾವಾವೇಶವು ಬಂದು ತುಂಬಿಕೊಂಡಿದೆ. ಇದೇನು ಶಕ್ತಿದಾನದ ಹಿನ್ನೆಲೆಯೋ, ಅಥವಾ ಮತ್ತೇನೋ? ಮತ್ತೊಮ್ಮೆ ಸುಧಾರಿಸಿಕೊಂಡು ಬರೆಯುವೆನು.

ಇತಿ ನಿನ್ನಾತ
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...