ಕಣ್ಮುಚ್ಚಿ ಕಣ್ದೆರೆಯುವಷ್ಟರೊಳು ಕಾಣದಾಗಿರುವ
ಹೊಸ ಗೆಳೆಯನೇ ಕೇಳು ಕೇಳು
ಕಣ್ಮುಚ್ಚಿಕೊಂಡರೂ ಕೂಗಿ ಕರೆಯುವೆ ನಿಲ್ಲು
ಕಿವಿಗೊಟ್ಟು ಕೇಳು ಕೇಳು!
ಕಾಲ ಪುರುಷನ ವೇಳೆಗನುಗುಣದಿ ತಪ್ಪದಲೆ
ತಿರುಗುವದು ವಿಶ್ವವಿನ್ನು
ಬಾಳುವದು ಬೀಳುವದು, ನಮ್ಮ ಕೈಯಲ್ಲಿಲ್ಲ
ಬಿಡಬೇಕು ಬನ್ನವಿನ್ನು!
ಸಾವೆಂಬ ಕನ್ನಿಕೆಗೆ ಮುಪ್ಪು ಮುಟ್ಟುವದಿಲ್ಲ
ಆಯುಷ್ಯದಳತೆಯಿಲ್ಲ!
ಸಾವೆಂಬ ಕನ್ನಿಕೆಯು ಕಡೆತನಕ ತರುಣಿಯೇ-
ರೋಗಗಳ ಬೇಗೆಯಿಲ್ಲ!
ಕರುಣವಿಲ್ಲವೆ ಅವಗೆ ಕಾಲಕಾಲಕೆ ನೀರನೆರೆದು
ಬೆಳೆಸಿರುವ ಈ ಗಿಡದ ಮೇಲೆ
ಭರವಸೆಯನಿಡಬೇಕು ಹಗಲಿರುಳು ನಮ್ಮನ್ನು
ಸಲಹುತಿರುವನನ ಮೇಲೆ!
ತಾನೆ ಹೂಗಳಿಗಾಗಿ ಹಚ್ಚಿರುವ ಬಳ್ಳಿಗಳ
ಮೊಗ್ಗೆಗಳ ಕೊಯ್ವರುಂಟೆ?
ತಾನಾಗಿಯೇ ಬಂದು ತನಗಾಗಿ ತೆರೆದಿರುವ ಕುಸುಮವನು
ಕೊಯ್ಯಲದಕಡ್ಡಿಯುಂಟೆ?
ಕಟ್ಟಿರುವ ಕೈ ಬಿಟ್ಟು ಕೊಟ್ಟಿದ್ದ ಕೈ ಕೊಸರಿ ನೆಟ್ಟನೇ
ನೀರಿನೊಳು ಧುಮುಕಿಕೊಂಡೆ!
ಕಟ್ಟಿ ಒಯ್ಯುವ ಕಸುವು ಕುಗ್ಗಿರಲು ನನ್ನನ್ನು ಬಿಟ್ಟು
ನೀನೊಬ್ಬನೇ ಮುಳುಗಿಕೊಂಡೆ!
ಹೋಗಿ ಬಾರೈ ಗೆಳೆಯ! ಬಾಗಿ ನಮಿಸುವೆ ನಾನು-
ಬೇಗ ನಿಮ್ಮಯ್ಯನೆಡೆಗೆ
ತ್ಯಾಗಿಯೇ, ತಾಯ್ನಾಡಿಗಾಗಿ ತನುವನು ತೊರೆದೆ
ತೆರಳು ಸೌಭಾಗ್ಯದೆಡೆಗೆ
ಕಡೆಯ ಕಾಲಕೆ ಕೂಡ ಕೊಟ್ಟಿರುವ ಕರುಣವನು
ನಾನೆಲ್ಲಿ ಹೂಳಿಯಿಡಲಿ
ಕೊಡಲು ಕಟ್ಟಿದ ಕವನ ಕೊಟ್ಟಿರುವೆ ‘ಶೇಷಶಾಯಿಯು
ತಾನೆ ಕಾಪಾಡಲಿ!
*****

















