ಮೆಲುಗಾಳಿಯೊಳು ಗಿಡದೆಲೆ ಹೊರಳೆ
ತಿಳಿಗೊಳದೊಳಗೆ ಕಿರುದೆರೆಯುರುಳೆ
ನಡುಬಾನಿನೊಳು ಬಿಳಿಮುಗಿಲಾಡೆ
ಸನಿಯದ ಹೊದರೊಳು ಹಕ್ಕಿಯು ಹಾಡೆ
ಗುಡಿಗಂಟೆಯರವವಾಗಸದೊಳಗೆ
ಮುಳುಗಿಹ ಭಾವವನೆತ್ತಲು ಮುಳುಗೆ
ತೊಟ್ಟಿಲಾಡುತಿರೆ ಸಂಪಗೆ ನೆಳಲು
ನೇರಿಳೆಗಾಗಿರೆ ಬಿಸಿಲಿನ ಬಿಳಲು
ಹಿಣಿಲನು ಕುಣಿಸುತ ಬಸವ ಬರುತಿರೆ
ರೆಂಬೆಯನಾಲಿಂಬಿಸಿ ಕಪಿ ಕುಳಿತಿರೆ
ಮಲೆಯುಸಿರಾಡುವುದೆನೆ ಕುರಿಮಂದೆ
ಚಲಿಸಿರೆ ಬಂಡೆಗಳೊಳು ಕೆಳೆಯಿಂದೆ
ಜಗದೀ ದೈನಂದಿನ ಜಂಗಮತೆ
ನನ್ನೊಳು ಜನಿಯಿಸಿತೇತಕೆ ಮಮತೆ?
ಈ ಹೊರ ಜಗಕೂ ನನ್ನೊಳಮುದಕೂ
ಏತರ ನಂಟೆಂತದಕೂ ಇದಕೂ?
ಶಾಸ್ತ್ರಾಗಮಗಳ ಝಂಕಿಸುವಂತೆ
ತರ್ಕಹೇತುಗಳ ಕೊಂಕಿಸುವಂತೆ
ನಿರ್ವ್ಯಾಜಂ ಬಹ ಹರಿಕೃಪೆಯೋಲು
ಮೋದದ ಕೃಪೆಗಿಂಬಾಯಿತು ಬಾಳು
ಜಗ ಚೆಲುವೆನ್ನುವ ಬಗೆಯನುರಣನೆ
ವಿಶ್ವಾತ್ಮನ ನಿರ್ಹೇತುಕ ಕರುಣೆ.
*****

















