ಮಂದ ಮಾರುತ ತಂದ
ಚಂದದ ಹಾಡೊಂದ
ಅಂದೆನೆಂದರ ಬಾರದೀ ಬಾಯಿಗೆ
ಬೆಂದು ಬಳಲಿದ ಜನಕೆ
ನೊಂದು ನಂದಿದ ಮನಕೆ
ಬಿಂದೊಂದಮೃತದ ಮರು ಭೂಮಿಗೆ
ಕಿವಿಯಾರೆ ಕೇಳಿದೆ
ಕಿವಿಯಲ್ಲಿ ಉಳಿದಿದೆ
ಸವಿದೆನೆಂದರೆ ಇಲ್ಲ ನಾಲಿಗೆಗೆ
ಮುದುಡಿದ್ದ ಮನವರಳಿ
ಕದಡಿದ್ದ ಬಗೆ ಮರಳಿ
ಹದಗೂಡಿ ಬೆರೆತವು ಆ ಹೊತ್ತಿಗೆ
ತುಂಬಿದೆ ತಲೆ ತುಂಬ
ದುಂಬಿಯ ಮೃದುಗಾನ
ವೆಂಬಂತೆ ದುಂದುಮ್ಮಿ ತಿರುಗುತಿದೆ
ರಂಬಿಸಿ ಮಗುವನು
ಚುಂಬಿಸಿ ಮಲಗಿಸ
ಲೆ೦ಬ ಜೋಗುಳ ತಾನ ಹೋಲುತಿದೆ
ಕನಸನಾಡಿನೊಳೆದ್ದು
ಇನಿಯಳನರಸುತ
ವನವನ ಅಲೆಯುವ ಗಂಧರ್ವನು
ದಣಿದು ಮಲಗಿರೆ ಕಂಡ
ಕನಸ ನಲ್ಲೆಯ ಸ್ವರವ
ನೆನಸಿ ಕೇಳಿದವೋಲು ಮನ ತಣಿಯಿತು
ತನು ವೀಣೆ ಮನ ತಂತಿ
ಯನುಮೀ೦ಟಿದಂತಾಯ್ತು
ಘನ ಝೇ೦ಕಾರವು ಜು೦ಯ್‌ಗೂಡಿತು
ತನು ಮನ ಒ೦ದಾಗಿ
ನೆನೆವ ಭಕ್ತರ ಮೌನ
ವನು ತ೦ದ ಗಾನದ ಅರಿವಾಯಿತು
*****

















