ಆ ಕರುಣೆಯೆಳನಗೆಯ ಕಡೆನೋಟದೊಂದು ಕಳೆ
ಮನಕಿತ್ತ ಸದ್ಭಾವ ಸಂದೀಪ್ತಿಯೊಳಗೆ
ನನ್ನೊಳಗು ಹೊರಗು ನಾ ಗುಡಿಬಳಸಿನೊಳಗಲೆದ
ಚರಿತಾರ್ಥವೆಡೆಗೊಂಡಿತೀ ಕಬ್ಬದೊಳಗೆ.
ಜೀವ ಮಾನುಷ್ಯದೊಳು ಪಡೆವಮಿತ ಭಾವಗಳ
ಪಾರಮ್ಯವಿಲ್ಲೆಂಬ ಭೂಮಾನುಭೂತಿ
ಋತಸತ್ಯಸಂಜನ್ಯ ರೂಪಸಂಕೇತಗಳ
ಸೂಕ್ತಿ ಸಂಗೀತದೀ ದೇಗುಲದ ರೀತಿ
ಜೀವವಿದು ಆತ್ಮದೂಷರವಾಗದಂತಿಡುವ ರಸದ ಚಿಲುಮೆ
ಜಡರ ಚಿತ್ತವ ಮುದದ ಮೊನೆಗೇರಿಸಲು ಬಗೆದ ಸಿದ್ಧರೊಲುಮೆ.
ಸರ್ವಕರಣದಿ ನಿಂತು ತಾಮಸೀ ವೃತ್ತಿಯನು ಪರಿಶಮಿಸಲಿಷ್ಟದೈವ
ಎಲ್ಲರಿವೊಳವನಿರವ ಕೀರ್ತಿಸುವ ತೆರದೊಳಗೆ ಮೆರೆಯೆ ಸದ್ಭಾವ.
ಆಸುರಕಾಸುರವೆನ್ನುತ
ಹೇಸದೆ ಕೊಂಡುಗ್ರರೂಪವಂ ಬಳಿಕೀ ಯೋ-
ಗಾಸನದೊಳಗದ ಶಮಿಸುವ
ಭಾಸುರ ನರಸಿಂಹನೆಮಗೆ ಮಂಗಳನಕ್ಕೆ.
ಅರಿಷಟ್ಕಂ ಬೆದರುವ ವೋಲ್
ಅರಿಶಂಖಗಧಾಯುಧಂಗಳಂ ಮೆರೆಯಿಸುತಂ
ಅರಿತರ್ಗೇಭಯ? ಸರ್ವ೦
ಹರಿಮಯವೆಂದಭಯವೀವ ನಾರಣ ಶರಣಂ.
*****

















