ವ್ಯಾಳ ವ್ಯಾಳದ ಹೆಜ್ಜೆಯಲ್ಲಿ ತಾಳ ಮೇಳವನ್ನು ಕಂಡುಕೊಂಡ ಶಿಷ್ಯ, ಗುರುವಿನಲ್ಲಿ ಬಂದು, “ನನಗೆ ನಡೆವ ಹಾದಿ ಎಷ್ಟು ಉದ್ದವಿದೆ?” ಎಂದು ಕೇಳಿದ.
ಗುರು ಹೇಳಿದರು “ನೀನು ಈ ತಾಳದಲ್ಲಿ ಮೇಳದಲ್ಲಿ ಆರಂಭಿಸಿರುವೆ. ಹೋಗ ಬೇಕಾದದ್ದು ಬಹಳಷ್ಟಿದೆ. ಆಳಕ್ಕೆ, ಪಾತಾಳಕ್ಕೆ, ಆಗಸದ ಎತ್ತರಕ್ಕೆ, ನಕ್ಷತ್ರದ ಸನಿಹಕ್ಕೆ, ಶಿಖರದ ತುದಿಗೆ, ಭೂಮಿಯ ಅಗಲಕ್ಕೆ, ಭಾವದ ಬಯಲಿಗೆ, ಸತ್ಯದ ನೇರಕ್ಕೆ, ನಿನ್ನ ಕಾಲ ನಿಲ್ಲಗೊಡದೆ ನದಿಯ ಹರಿಯುವಿಕೆಯಲ್ಲಿ ಹೋಗು, ನಿನ್ನ ಕೈಕಾಲು ನಿಂತಾಗ ಅಲೆಯ ನಿರಂತರ ನರ್ತನ ನೋಡು, ನಿನ್ನ ಧ್ವನಿ ಸೋತಾಗ ಧ್ಯಾನದಲ್ಲಿ ನಡೆ, ಶೂನ್ಯದಲ್ಲಿ ಸೇರು. ನಿನ್ನ ಎದೆ ಬಡಿತದ ಸತ್ಯದ ಸೆಲೆಯಲ್ಲಿ ನಡೆ. ನಿನ್ನ ಮನ ಹೂವಂತೆ ಅರಳಲಿ. ಹಣ್ಣಂತೆ ರಸ ತುಂಬಲಿ. ಬೀಜ ಅಂಕುರಿಸಲಿ- ಮಂತ್ರವಾಗಲಿ, ಝೇಂಕಾರವಾಗಲಿ, ಓಂಕಾರವಾಗಲಿ ಅಲ್ಲಿ ನಿನ್ನ ಅನಂತ ಹಾದಿಯ ಅಂತ” ಎಂದು ಗುರು ನುಡಿದಾಗ ಶಿಷ್ಯ ನಡೆಯುತ್ತಲೇ ಇದ್ದ ದಿಗಂತದ ವರೆಗೂ ಸತ್ಯದ ಹೊನ್ನಿನ ಗಿಂಡಿಯ ಮುಚ್ಚಳ ತೆರದಂತೆ ಉದಯಭಾನು ಬಾನಿನಲ್ಲಿ ಮೂಡುತ್ತಿದ್ದ.
*****

















