ದಿಲ್ಲಿ ನಗರಿ ಎಲ್ಲಿದೆಯೋ
ಸೂರ್ಯನ ಟಾರ್ಚ್ ಹತ್ತಲೊಲ್ಲದೆ!
ನಾಲ್ಕು ಹೆಜ್ಜೆ ಹಿಂದೆ ಮುಂದೆ
ಏನೂ ಕಾಣದ ದಟ್ಟ ಮಂಜು
ಅಬ್ಬಬ್ಬಾ ! ಡಿಸೆಂಬರ ಚಳಿ ಮೈಕೊರೆತ
ಹಾರಲೊಪ್ಪದ ವಿಮಾನಗಳು ಕುಕ್ಕರುಗಾಲು ಹಾಕಿವೆ
ನಿಲ್ದಾಣದೊಳಗೆಲ್ಲರ ಓಡಾಟ
ಜಗಳಾಟ ಕೌಂಟರಿನಲ್ಲಿ
ಫೋಟೋಗ್ರಾಫರನ ಕ್ಯಾಮರಾಗ್ಲಾಸೆಲ್ಲ
ಮಬ್ಬು, ನೆಲ ಖುರ್ಚಿ ತಾಗಿದ್ದೆಲ್ಲ
ಹಿಮ ಹಿಮ ಮೈ ಮರಗಟ್ಟುವಿಕೆ
ಅವಿತುಕೊಳ್ಳುವಿಕೆ
ಬ್ಯಾಗುಗಳ ಸಂದಿಗೊಂದಿಗಳೊಳಗೆ
ಮಹಿಳೆಯರು ಮಕ್ಕಳು ವೃದ್ಧರು
ಗುಬ್ಬಚ್ಚಿಗೂಡಿನೊಳಗೆ ಪಿಳಿ ಪಿಳಿ ಕಣ್ಣು
ಪಾಪ ! ಟೀ ಕಾಫಿ ಇಲ್ಲದೆ ಬಾಯಾರಿದೆ
ಅಬ್ಬಬ್ಬಾ ! ದಟ್ಟ ಮಂಜು.

ವಿಮಾನಗಳೆಲ್ಲೋ ಅಧಿಕಾರಿಗಳೆಲ್ಲೋ
ಕಾಣಿಸದ ವೇಳಾಪತ್ರಿಕೆ ಬೋರ್ಡು
ಕೇಳಿಸದು ಅನೌನ್ಸ್‌ಮೆಂಟ್
ಮಂಜು ಮೋಡಿನ ತುಣುಕು
ಕಣ್ಣು ಕಿವಿ ಹೊಕ್ಕು
ಮಬ್ಬು ಮಾಡಿವೆಯೊ ಹೇಗೆ

ಅಹಹ ಚಳಿ ! ಕ್ಷಣ ಕ್ಷಣಕೂ
ಆವರಿಸುವ ದಟ್ಟ ಮಂಜು
ಮೊಬೈಲ್ ತರಂಗು ದಾಟಿಸದ ಮಂಜು
ಪಾಪ ಆತನದು ಬೆಂಗಳೂರಿನಲ್ಲಿ
ನಾಳೆಯೇ ಎಂಗೇಜ್‌ಮೆಂಟ್
ಒತ್ತಿ ಬರುತ್ತಿರುವ ಕಣ್ಣೀರು ಆಕೆಗೆ
ಅಪ್ಪ ಹೃದಯಾಘಾತಕ್ಕೊಳಗಾಗಿ
ಚೆನೈದ ಹಾಸ್ಪಿಟಲ್‌ದಲ್ಲಿ
ಆತ ನಿಂತಲ್ಲಿಯೇ ನಿಲ್ಲುತ್ತಿಲ್ಲ
ಬೊಂಬಾಯಿಯಿಂದ ಹೆಂಡತಿಯ ಡೆಲಿವರಿ ಸುದ್ಧಿ
ವಿದೇಶಿಗರ ಗೋಳಾಟವೋ
ಮಂಜಿನೊಳಗವಿತಿರುವ
ಆ ಪರಶಿವನಿಗೇ ಗೊತ್ತು

ದಿವಸಗಳು ಒಂದೆರಡು ಮೂರು
ಅಸ್ತವ್ಯಸ್ತ ಎಲ್ಲೆಲ್ಲೂ ಅಳುಮುಖ
ಮಂಜಿನಡಿ ದಿಲ್ಲಿ ರಾಜಕೀಯ
ಬೆಚ್ಚಗೆ ಮಲಗಿರಬೇಕು
ಕೆಂಡ ಕಾಯಿಸಿ ತಣ್ಣನೆಯ ಬೀರು ಹೀರಿದ್ದೆ ಮಜಾ
ಎಲ್ಲೆಲ್ಲಿಂದಲೋ ಬಂದ ಈ
ಹಕ್ಕಿ ಪಿಕ್ಕಿಗಳ ಪಾಡೇನು ಶಿವಾ ?
ಎಲ್ಲಿ ನಿನ್ನ ರವಿಕಿರಣಗಳ
ಬಾಣ ಬತ್ತಳಿಕೆ….
*****
ಪುಸ್ತಕ: ಇರುವಿಕೆ

ಲತಾ ಗುತ್ತಿ
Latest posts by ಲತಾ ಗುತ್ತಿ (see all)