
೧
ಜಗಭಾಂಡ ತುಂಬಿ ತುಳುಕುವ
ಸೊಗಸೆಂಬೀ ಸೋಮವನ್ನು ಸೊಗದಿಂ ಕುಡಿದು
ನಗೆ ನಗುತ ನುಡಿಯನಾಡುವ
ಬಗೆಯೇ ಬಗೆ, ನಿನ್ನ ‘ಕಾವ್ಯ ಸೇವೆ’ ಯ ಬಿರುದು!
೨
ಕನ್ನಡ ಕಂದನು ನಾನೈ
ಉನ್ನತ ಉದಾತ್ತ ಭರತ ಬಾಲನು ನಾನೇ!
ಸನ್ನುತ ವಿಶ್ವಕುಮಾರನು,
ನನ್ನಿಯ ಜಗದಂತರಾತ್ಮಶಿಶುವೂ ತಾನೇ!
೩
ಅನಿಸಲಿ ಅನಿಸಲಿ ಜಗವೆನ-
ಗನಿ- ಅನಿಸಲಿ ತಾಯೆ ಜನಿಸಲನಿಸಿಕೆಯಿಂದು!
ನನಗೆ ವರ ನೀಡು ರಸವತಿ
ಅನಿಸಿಕೆಯಾ ಜಗದ ಮಗನು ಆಗಲಿ ಎಂದು!
೪
ಎರಕವು ಮರುಗಲು ಬರುವದೆ
ಇರುತಿಹುದದು ಅಂತರಂಗದಂಕುರಮೊಂದು!
ನರನಿದರ ನೆರವಿನಿಂದಲೆ
ನೆರೆಯೆಲ್ಲರನೆನ್ನ ಬಲ್ಲ ತನ್ನವರೆಂದು !
೫
ಕನ್ನಡ ಕಂದನ ಮನದೊಳು
ನನ್ನಿಯು ನೀನಾಗಿ ಕವನ ನೆನಿಸುವ ಕನಸು
ಚಿನ್ನದ ರನ್ನದ ಮುಗಿಲಿನ
ಬಣ್ಣಂಗಳ ಬಗೆಯೊಳೀಗ ಬೀಳುತಲಿಹುದು!
೬
ಮನಸಿನ ಕರುಳಿನ ಕನಸನು
ನನಸನು ಮಾಡವ್ವ! ಅಂತರಂಗದಿ ಮೂಡೌ!
ಇನಿದಾಗಿ ಹರಿವ ರಸಗಳು
ಜನಿಸಲಿ ನನಸಿನಲಿ! ನನಸು ಕನಸಿನ ಗೊನೆಯು!
೭
‘ಸತ್ಯವು ಸೊಬಗೇ; ಸೊಬಗೂ
ಸತ್ಯವು’ ‘ಸೊಬಗುಳ್ಳ ಸುದ್ದಿ ಸೊಗಸಿನ ಸೂರಿ’!
ನಿತ್ಯದೊಳೀ ಮಂತ್ರವ ಜಪಿ-
ಸುತ್ತಿರಲೀ ಸತ್ಯ ಸೃಷ್ಟಿ ಸೊಬಗಿನ ಸೃಷ್ಟಿ !
*****
















