ಹುಟ್ಟಿದಾಗಳೇ ವೀಳ್ಯವೆತ್ತಿದನು
ಮುಕ್ತಿಗಾಗಿ ಭರತ
ತಿಂದ ತಂಬುಲದ ಹಾಗೆ ಉಗುಳಿದನು
ತನುವ ರಸಿಕ ವಿರತ.
ಎಂದು ಹೋದನೋ ಎಂದು ಇದ್ದನೋ
ಲೇಖ ಅಡಗಿ ಇಹುದು
ನೆಲದ ನರುಗಂಪಿನಂತೆ ನೆಲೆಸಿದಾ
ಕೀರ್ತಿ ಇಡಿಗಿ ಇಹುದು.
ಭರತ ಖಂಡವಿದು, ಭಾರತೀಯ ಸಂ-
-ತತಿಯು ಅಮರವಾಗಿ
ಅವನ ರಸಸ್ಮೃತಿಯಿಂದ ಹಬ್ಬುತಿದೆ
ಈಗು ಕಮರದಾಗಿ.
ಅರಸನಂತೆ ಮನೆಮನೆಯ ಪುರುಷ
ರಸವಂತನಾಗಿ ಬಾಳಿ
ಪ್ರಕೃತಿಯನ್ನೆ ರಸಮಯವ ಮಾಡನೇ
ದಿವ್ಯ ದೇಹ ತಾಳಿ?
ಕ್ಷೇತ್ರ ಮರೆಯದಿದೆ, ಬೀಜ ಮರೆಗೆ ಇದೆ.
ಕಲ್ಪವೃಕ್ಷವಾಗಿ
ಸರಿಮುಹೂರ್ತ ಅಂಕುರಿಸಿ ತರದೆ ಅದು
ಬರದೆ ಲಕ್ಷವಾಗಿ.
ಭೂಮಿ ಬಂಜೆಯೇ? ಬೀಜ ಬರಡೆ? ಪಡೆ-
-ದದ್ದು ಕೂಡಿ ಬರದೇ?
ಒಕ್ಕಲಾದ ಎದೆಯಲ್ಲಿ ತಪವು ರವಿ-
-ಯಾಗಿ ಮೂಡಲಿರದೇ?
*****

















