ದೊಂಗಲುನ್ನಾರೂಽರೇ-ಜಾಗ್ರತಽ
ಎಚ್ಚರಿದೊಂದೇ ಆಗಲಿ ವ್ರತಾ || ಪಲ್ಲ||
ಇನ್ನಾರು ನಿಮ್ಮಽಽ| ಎಚ್ರಾ ಕೊಡಾವ್ರಣ್ಣಾ
ಹಾದಿ ಐತೀ ಬಲೂ ಬಲೂ ದೂರಾ
ಗಂಟಽ ಬೀಳ್ತಾನ ಅಲ್ಲಿನೆ ಚೋರಾ
ನಿದ್ದೀ ಬ್ಯಾಡ್ರೆಪ್ಪಾ, ಬಂದೀತು ಘೋರಾ || ದೊಂಗಲು….
ಕಳ್ಳಾ ಅಂಬಾವ | ಬ್ಯಾರೇ ಯಾರೂ ಇಲ್ಲಾ
ಅಂವಾ ನಮ್ಹಾಂಗಽ ನಿಮ್ಹಾಂಗಽ ಎಲ್ಲಾ
ಆದ್ರ ಧಂದೇನ ಮಾಡಿಕೊಂಡಾನ ಖುಲ್ಲಾ! ದೊಂಗಲು….
ಅಂದಾನು ಹೆದರ್ಬ್ಯಾಡೊ, ಹೆದರ್ಬ್ಯಾಡೊ ತಮ್ಮಾ
ಐತಿ, ರಾಜ್ಯಾನ ಇದು ನಮ್ಮ ನಿಮ್ಮಾ
ಬ್ಯಾರೆ ಬರ್ತಾರು ಯಾರು? ಮಕ್ಕೋ ಸುಮ್ಮಾ|| ದೊಂಗಲು….
ಇದ್ದವ್ರ ಹರಕೊಳ್ಳಾಕ ಇಲ್ದವ್ರು ಬರ್ತಾರ
ಇದ್ದದ್ದು ಇಲ್ಲದ್ದ್ಯಾವ್ದೋ ಯಣ್ಣಾ
ಮನಸ್ಕಾರಽ ಹೂಲೀ ಎಬಿಸಿ
ಮನಸ್ಯಾರ್ನ ತಿಂತಾರ
ದೇವ್ರಽ ತೆರೀಬೇಕೋ ಕಣ್ಣಾ
ಮುಚ್ಚಿ ಕೊಂಡೈತಿ | ಅಂತಃಕರ್ಣಾ
ಕರ್ಣನ ಕಿಸೇಕಽನ ಹಾಕಾವ್ರು ಕನ್ನಾ
ಬಂದು ಎದ್ದೈತಿ ಅಲ್ಲಲ್ಲಿ ಹಾಹಾಕಾರ
ಸ್ವಾಹಾಕಾರಾನ ಬಲು | ದೊಡ್ಡ ಮಂತ್ರ ಆಗೈತಿ
ಬಂದೈತ್ಯೋ ಗೆಣೆಯಾ ಭಾಳ ಘೋರಾ
ಇಲ್ಲಿ ಪಾರಾದಾವ್ನಽ ಖರೇ ಶೂರಾ | ದೊಂಗಲು….
ಅಂಬಿಕಾತನಯನಿಗು ಇತಿಮಿತಿ ಬಿದ್ದೈತಿ
ನೆಂಬಿಕ್ಯಾರೆ ಯಾರ್ದಪ್ಪಾ ಇಲ್ಲಿ
ಪೂಜಾರೀನಽ ಕೂತು | ದೇವರ್ನ ಕದ್ದರ
ಇನ್ನ ಫಜೀತಿ, ಬ್ಯಾರೆ ಯಾವ್ದೈತಿ
ಸೋದಽರ ಭಾವಾ ಹೇಳೂವ
ಚೋದ್ಯರು ಚೋದರು ಮಾದರು ಕೂಡ್ಯಾರು
ಗ್ಯಾಂಗ, ಗ್ಯಾಂಗೀಽಗೆ ಬ್ಯಾರೆ ಹೆಸರೈತಿ
ಯಾಲೀ ಧೂಲಾ ಅಂತ, ಹೈದೋಸ ನಡಿಸ್ಯಾರ
ಮನಸ್ಯಾರ್ಕಿ ಒಳಗಽ ಕಸರೈತಿ
ಸಾಲಾಽ, ಸಾಲೀಽ ಅಂತ! ನೆಂಟಸ್ತ್ಕಿ ಬೆಳಸ್ತಾರು
ಸೋದೇರು ಭಾನಚೋದ ಮಂದಿ | ಭಾಳ ಬೆರ್ಕಿ
ಅಲ್ಲಿ ತುರ್ಕಿ, ಇಲ್ಲಿ ತುರ್ಕಿ, ಹೊಡದಾರು ನಡುವಽ ಗಿರ್ಕಿ
ತೂಕಡಿಸಬ್ಯಾಡೋ ಜೋಲಿ ತಪ್ಪಿ || ದೊಂಗಲು….
ಮನಸ್ಯಾರ್ಹಾಂಗ ಕಾಣ್ತಾರಂತ
ಮನಸ್ಯಾರಽ ಅಂತ ತಿಳ್ದು
ನಿದ್ದೀ ಮಾಡಾಕ ಒಪ್ಪಿಗಿಪ್ಪಿ
ಹುಷಾರ್, ಹುಷಾರ್ | ಗೆಣೆಯಾ, ತಮ್ಮ; ಅಣ್ಣಾ
ಜಂಪು ಹತ್ತೀತು ತಪ್ಪೀಸಿ ಕಣ್ಣಾ || ದೊಂಗಲು…
*****

















