ಪ್ರೀತಿ ಮತ್ತ ಸಾಗರಾ
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ!
ನಿನ್ನಡಿಗಳಲಿಂದು ನಾನು ಹುಡಿಯೆನಿಸುತ ಕೆಡೆದಿಹೆ
ಬಾಳೆಲ್ಲವು ಕಲ್ಲಾಯಿತು, ಉದ್ಧಾರಕೆ ತಪಮಿಹೆ
ಉಕ್ಕಿ ಬಾರೊ ಎಲ್ಲೆಡೆಯಲಿ
ಸೊಕ್ಕಿ ಬಾರೊ ನನ್ನೆಡೆಯಲಿ,
ಉಳಿಯಿತೊಂದೆ ಮನ್ಮಾನಸ ಕುವಲಯದಲಿ ಆಸೆಯು
ನೀನೊರ್ವನೆ ಮನದನ್ನನೆ ಇಂಗಿಸುವ ಪಿಪಾಸೆಯು
ಪ್ರೀತಿ ಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆನಾ ವಸುಂಧರಾ!
ನನ್ನೆದೆಯಲಿ ಮಾಗಿದಂಥ ಹಾಲೊಲವಿನ ಸೆಲೆಗಳು
ತಾರುಣ್ಯದ ಕಾಮೋದ್ಭವ ಆಮೋದದ ತೊರೆಗಳು
ಕಲ್ಲೊಡೆಯುತ ಸಿಡಿದೆದ್ದವು,
ಗಿರಿಯಿಳಿಯುತ ಆಲೆಯಲೆದವು
ಹಾಡೊರೆಯುತ ತೆರೆತೆರೆಯಲಿ ನಿನ್ನನ್ನೇ ಕರೆದವು
ಎಲ್ಲೆಲ್ಲೊ ಸುತ್ತಿರಿದರು, ನಿನ್ನಲ್ಲೇ ಬೆರೆದವು!
ಪ್ರೀತಿಮತ್ತ ಸಾಗರಾ
ಬಾರೊ ಭವ್ಯ ಸುಂದರಾ
ಕರೆವೆ ನಾವಸುಂಧರಾ!
ಏಕೊ ಏನೊ ಮರೆತಿದ್ದೆನು ನಿನ್ನ ನಾನು ಬಹುದಿನ
ನೀನು ಮಾತ್ರ ಯಾಚಿಸಿರುವೆ ನನ್ನೊಲುಮೆಯನನುದಿನ
ಬೆಳ್ನೊರೆಯಲಿ ಕುಸಮ ವ್ರಾತ
ತೆರೆತೆರೆಯಲಿ ಭೃಂಗ ಗೀತ,
ಮೆರೆಯೆ, ನೀನು ಮೇಘನೀಲ, ಕಾಡಿ ಬೇಡಿ ಹಾಡಿಹೆ
ಮಾರುಲಿಯದ ನನ್ನ ನೋಡಿ ಬೇಗುದಿಯನು- ತಳೆದಿಹೆ!
ಪ್ರೀತಿ ಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ!
ಮರ್‍ತ್ಯಲೋಕದಲ್ಲಿ ಜನಿಸಿದವಳು ನಾನು ಮುಗ್ಧಳು
ದಿವ್ಯಲೋಕ ಸ್ವಪ್ನ ಸುಖಕೆ ಸೋತವೆನ್ನ ಕಂಗಳು
ರವಿಯ ತೇಜ ಕಂಡ ಮರುಳು,
ಶಶಿಯ ಶಾಂತಿಯುಂಡ ಕರುಳು
ಹಗಲೆನ್ನದೆ ಇರುಳೆನ್ನದೆ ಮನೆ ಬಯಲುಗಳೆನ್ನದೆ
ಮುಗಿಯದಿರುವ ಮುಗಿಲ ದಾರಿಯಲ್ಲಿ ನಾನು ಸುತ್ತಿದೆ.
ಪ್ರೀತಿ ಮತ್ತ ಸಾಗರಾ
ಬಾರೊ ಭವ್ಯ ಸುಂದರಾ,
ಕರೆವೆ ನಾ ವಸುಂಧರಾ!
ಮುಗಿಲ ಮೊಲ್ಲೆಯಘ್ರಾಣಕೆ ತಲೆಯನ್ನದು ತಿರುಗಿದೆ
ಸ್ವಪ್ನ ಸೇವಿಯಂಧ ಜೀವಿಯಂತೆ ನಾನು ಮರುಗಿದೆ
ಹುಸಿಗನಸಿನ ಆವ್ಹಾನಕೆ,
ಕಲ್ಪನೆಗಳ ಆವಾಸಕೆ,
ಬಿಸಿಲುಗುದುರೆಯೇರಿ ಹೊರಟೆ, ಬಯಕೆಯುರಿಗೆ ಬೆಂದೆನು
ಬಂಜೆ ವಟವ ಸುತ್ತುವಂತೆ ಬಯಲಸುತ್ತಿ ನೊಂದೆನು.
ಪ್ರೀತಿ ಮತ್ತ ಸಾಗರಾ
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ!
ತಪೋ ಭೂಮಿ ಹರನಿಗಾನು ಶ್ಯಾಮನ ವೃಂದಾವನ
ಅಮರಾಂಗನೆಯರಿಗೆ ನಾನು ರತಿ ವಿಲಾಸದುಪವನ
ನನ್ನ ಗಿರಿಯ ಗವ್ಹರದಲಿ,
ಹರಿದ ಹಳ್ಳ ಹೊಳೆಗಳಲ್ಲಿ.
ದೇವತೆಗಳ ಚಿರನಿವಾಸವೆಂದು ನಾನು ಸೊಕ್ಕಿದೆ
ಪ್ರೀತಿಯನ್ನು ಬೇಡಿದವಳು ಕೀರ್ತಿಯನ್ನು ಹೊಂದಿದೆ.
ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ.
ದೇವರಿಲ್ಲಿ ಇಳಿದು ಬಂದು ಭೂಪರಾಗಿ ಆಳ್ದರು
ಕೊರಳಿನಲ್ಲಿ ಕೌಸ್ತುಭವೆನೆ ನನ್ನ ತೊಟ್ಟುಮೆರೆದರು
ಆದರಾರು ಪ್ರೀತಿಯನ್ನು,
ಇಲ್ಲ ಬರಿಯ ಕರುಣೆಯನ್ನು,
ತೋರಲಿಲ್ಲ, ಬೆಲೆವೆಣ್ಣಿದು ಬರಿ ಮಣ್ಣಿದು ಎಂದರು
ನನ್ನೆದೆಯಲಿ ಉರಿವ ಆಸೆಯನ್ನು ಕಾಣದಾದರು.
ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ,
ಕರೆವೆ ನಾ ವಸುಂದರಾ
ಬೇಟಕಾಗಿ ದೇವತೆಗಳಿಗೆನಿತುಕಾಲ ಬಾಳಿದೆ
ಬೇಟೆಯಾಗಿ ಮಾನವರಿಗೆ ನೋವ ನಾನು ತಾಳಿದೆ
ಭಾವಪೂರ್ಣ ಹೃದಯಸಿಂಧು,
ಬರಿ ಹುಡಿಯಾಗಿಹುದು ಇಂದು,
ಚಿಕ್ಕೆ ಚಿಗಿತ ನಾಡಿನಲ್ಲಿ ತಿರುಗುತಿಹೆನು ಹುಚ್ಚಿಯು
ಅತ್ತು ಕರೆವೆ ಕಾಡಿನಲ್ಲಿ ದೊರಕಲೆಂದು ಒಲುಮೆಯು
ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ,
ಕರೆವೆ ನಾ ವಸುಂಧರ
ಕೋಟ್ಯಂತರ ದೇವತೆಗಳು ನನ್ನ ಸುತ್ತು ನೆರೆದರು
ಕಾಂತೆಯಂತೆ ಅವರೆ ರಮಿಸೆ ಕಾಂತಾರದಿ ತೊರೆದರು.
ಕತೆಯಾಯಿತು ನನ್ನ ಬಾಳು
ಜೊತೆಯಾರೆನಗಿಹರು ಹೇಳು
ನಾಯಿಯಂತೆ ಹರಿದು ತಿನ್ನುವವರು ನನ್ನ ಕುವರರು
ನನ್ನ ವಿಭವ ಸಂಪನ್ನರು ಸ್ಪೇಹಸೂನ್ಯ ದೃಪ್ತರು.
ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ,
ನೀನು ತೋಳ ತೆಕ್ಕೆಯಲ್ಲಿ ನನ್ನ ಹಿಡಿಯಬಯಸಿದೆ
ಮರಳು ದಂಡೆಯಿರಿದು ಕೊರೆದು ಒಳಗೆ ನುಗ್ಗಲೆಳಸಿದೆ
ಸ್ವಚ್ಛಂದ ಛಂದದಲ್ಲಿ,
ಹಾಡಿದಂಥ ಗೀತದಲ್ಲಿ,
ಪ್ರೀತಿರಸವ ಹೊಮ್ಮಿಸುತ್ತ ನನ್ನೆದೆಯನು ಸುತ್ತಿದೆ,
ನನಗರ್ಪಿಸಲೆಂದು ನೊರೆಯ ಹಾರವನ್ನು ಎತ್ತಿದೆ,
ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ.
ದೈವ ಹೀನೆ ನಾನು ನಿನ್ನ ಹೀಯಾಳಿಸಿ ಜರೆದೆನು
ಇಂದು ನಿನ್ನ ನೆನಹಿನಿಂದ ಪುಳಕಿತಾಂಗಳಾದೆನು,
ಅಂಗಾಂಗವನೇರಿ ಬಾರೊ,
ಕಣಕಣದಲಿ ಹರಿದು ಬಾರೊ,
ಬೆಂದೊಡಲನು ತಣಿಸಬಾರೊ ನೀಲಸುಭಗ ಸಾಗರಾ,
ಒಲವಿಗಾಗಿ ಬಾಯ್ಬಿಡುತಿಹೆ ಹಣಿಸು ಬಾ ನಿರಂತರಾ,
ಪ್ರೀತಿಮತ್ತ ಸಾಗರಾ,
ಬಾರೊ ಭವ್ಯ ಸುಂದರಾ
ಕರೆವೆ ನಾ ವಸುಂಧರಾ,
ನನ್ನೆದೆಯನು ಸುತ್ತಿದಂಥ ಸ್ವಪ್ನ ಸುಮನ ಬಂಧನ
ಬಗೆಯೆಲ್ಲವ ಮರುಳುಗೊಳಿಪ ಹುಸಿಯಾಸೆಯ ನರ್ತನ
ಜರೆದೇಳುವ ಹಾಗೆ ಬಾರೊ,
ನಿಜವನ್ನೇ ಬಿತ್ತ ಬಾರೊ.
ಹುಡಿಹುಡಿಯಲಿ ಹರಣ ಕಿಡಿಯ ತೂರು ಪ್ರಾಣದಾಯಕ
ನಿನ್ನನ್ನೇ ನಂಬಿರುವೆನು ಎತ್ತು ಜೀವನಾಯಕ!
*****

















