Home / ಕಥೆ / ಕಾದಂಬರಿ / ಸಂಗಪ್ಪನ ಸಾಹಸಗಳು – ೧೧

ಸಂಗಪ್ಪನ ಸಾಹಸಗಳು – ೧೧

ಹಿಂದಿನ ಅಧ್ಯಾಯ ಬರೆದು ಮುಗಿಸಿದಾಗ ಮನಸ್ಸಿನಲ್ಲಿ ದುಗುಡ ತುಂಬಿದೆ. ಯಾಕೆಂದರೆ ಅದರ ಹಿಂದಿರುವ ಕ್ರೌರ್ಯ ನಮ್ಮ ದೇಶದ ಒಂದು ದುರಂತ ಅಧ್ಯಾಯ. ಇದರರ್ಥ ನನ್ನ ಬರವಣಿಗೇನ ನಾನೇ ಹೊಗಳಿಕೊಳ್ತಿದ್ದೇನೆ ಅಂತ ಖಂಡಿತ ಅಲ್ಲ. ದುರಂತ ಅಧ್ಯಾಯದ ಕ್ರೌರ್ಯದ ಸೂಕ್ಷ್ಮವನ್ನು `ಪರಿಚಯಿಸೋದು’ ಹಿಂದಿನ ಅಧ್ಯಾಯದ ಹಿಂದಿರೊ ಆಶಯ. ಒಂದು ಕೃತಿಯ ಆಶಯ, ಧೋರಣೆಗಳನ್ನು ಕುರಿತು ಲೇಖಕ ಹೇಳಿಕೊಳ್ಳೋದು ತಪ್ಪು ಅಂತ ನಾನು ತಿಳಿದಿಲ್ಲ. ಅದು ಏನು ಎತ್ತ, ಅನ್ನೋದನ್ನ ಆತ ಮಂಡಿಸಬಹುದು. ಆದರೆ ಅವೆಲ್ಲ ಹೇಗೆ ಬಂದಿವೆ. ಹೇಗೆ ರೂಪಧಾರಣ ಮಾಡಿವೆ ಅನ್ನೋದನ್ನ ಹೇಳಬೇಕಾದವರು ‘ಓದಿ ಒರೆಗೆ ಹಚ್ಚಕೆ ಸಾಧ್ಯವಿರುವಂಥ’ ಸಮಸ್ತರು. ನಾನಿಲ್ಲಿ ಹೇಳಿದ್ದು ಹಿಂದಿನ ಅಧ್ಯಾಯದ ಆಶಯ, ಧೋರಣೆಗೆ ಸಂಬಂಧಿಸಿದ ವಿಷಯ. ಗಾಂಧಿ ಹೆಸರು ಹೇಳ್ತವೆ. ಅವನಿಗೆ ಅನ್ಯಾಯ ಮಾಡ್ತೇವೆ ಅನ್ನೋ ಮಾತು ಈಗೀಗ ಸಾಮಾನ್ಯವಾಗಿದೆ. ನಾನು ಹೇಳೋದು ಅಷ್ಟೇ ಅಲ್ಲ. ನಾವು ಕೊಡೊ ಹುಸಿ ಗೌರವವೂ ಒಂದು ಅನ್ಯಾಯವೇ, ಉನ್ನತ ವ್ಯಕ್ತಿತ್ವಗಳಿಗೆ ಗೌರವ ಕೊಡಬೇಕು. ನಿಜ; ಆದರೆ ಪೂಜ್ಯ ಸ್ಥಾನ ಕೊಟ್ಟು ಪ್ರಶ್ನೆಯ ಹಕ್ಕನ್ನು ತಟ್ಟೇಲಿಟ್ಟು ತರ್ಪಣ ಬಿಡೋದ್ರಿಂದ ನಾವು ನಮಗೆ ವಂಚನೆ ಮಾಡ್ಕೊಳ್ಳೋದರ ಜೊತೆಗೆ ಆ ವ್ಯಕ್ತಿತ್ವಕ್ಕೂ ಅಪಚಾರ ಮಾಡ್ತೇವೆ; ಎಂಥ ದೊಡ್ಡ ವ್ಯಕ್ತಿತ್ವವಾದರೂ ವಿಮರ್ಶಯೇ ಬೇಡವೆಂಬ ಪ್ರವೃತ್ತಿ ಮನುಷ್ಯನ ಮೂಲಸತ್ವಕ್ಕೆ ಹಾಕುವ ಕೊಡಲಿ ಪೆಟ್ಟು. ನಮ್ಮ ದೇಶದಲ್ಲಿ ಇರೊ ಈ ಪರಿಪಾಠದಿಂದಲೇ ಗಾಂಧಿಯಂಥವರು ದೊಡ್ಡ ವ್ಯಕ್ತಿತ್ವ ಅಂತ ವೈಭವೀಕರಿಸಲ್ಪಡುತ್ತಾರೆ; ಈ ವೈಭವಕ್ಕೆ ಹುಲ್ಲು ಹೊತ್ತವರೇ ಒಳಗೊಳಗೆ ಕೊಳ್ಳಿಯಿಟ್ಟು ಕುಣೀತಾರೆ. ಆದರೂ ಪ್ರಶ್ನಿಸುವ ಪರಿಶೋಧಿಸುವ ಮನೋಧರ್ಮಕ್ಕೆ ದೊಡ್ಡ ಆತಂಕವಾಗಿ ಭ್ರಮೆಯ ವಾತಾವರಣ ನಿರ್ಮಿಸ್ತಾರೆ. ಈ ಭ್ರಮೆಯನ್ನು ಭೇದಿಸೊ ಕೆಲ್ಸ ಕೊಂಚವಾದರೂ ನಡೀತಿದೆ. ಆದರೆ ನಮ್ಮ ಮುಂದಿರೋ ದುರಂತ ಎಂಥ ಅಗಾಧವಾದದ್ದು! ರಾಮೂ ಬಳಗದ ಅಹವಾಲಿಗೆ ಏನಾಯ್ತು ಗೊತ್ತಿದೆಯಲ್ಲ; ಹೇಳ್ಕೊಳ್ಳೋ ಸ್ವಾತಂತ್ರ್ಯ ಕೊಟ್ಟರೂ ಅದು ಗಮನಕ್ಕೆ ಬರದಂತೆ ಹೆಣ ಮಾಡಿ ಹೂತುಹಾಕೊ ಶಕ್ತಿ ಇಲ್ಲಿನ ಪರಿಸರಕ್ಕಿದೆ. ಅದನ್ನು ನಿಯಂತ್ರಿಸೊ ಪ್ರತಿಷ್ಠಿತರಿಗಿದೆ. ಈ ಕಡೆ ಈತನನ್ನು ನೋಡಿ-ಹರಿಜನ ಪೂಜಾರಿಯಂತೆ! ಅವನ ಹೊಟ್ಟೆಯ ಮೇಲೆ ‘ಕ್ರಾಂತಿ’ಯ ಕಟ್ಟೆ ಕಟ್ಟಿದ್ದ ಕರಾಳತೆಗೆ ಏನನ್ನೋದು! ಇಷ್ಟಾದರೂ ಈ ಪ್ರಸಂಗದಿಂದ ಲಾಭವಾದದ್ದು ಸಂಗಪ್ಪನಿಗೆ. ಪ್ರಚಾರದ ರುಚಿ ಕಂಡ ಅವನು ಹೊಸ ಹೊಸ ಪಟ್ಟುಗಳ ಬಗ್ಗೆ ಯೋಚನೆ ಮಾಡಹತ್ತಿದ್ದ. ಅದೇ ತಾನೆ ಚಿಗುರ್ತಾ ಇದ್ದ ರಾಮೂ ಬಳಗಕ್ಕೆ ಚಳ್ಳೆ ಹಣ್ಣು ತಿನ್ನುಸ್ತೇನೆ ಅಂದುಕೊಂಡ. ಅವರು ಎಲ್ಲಾದ್ರೂ ಎದುರು ಸಿಕ್ಕಿದರೆ “ಏನಪ್ಪ ಹೊರಟ್ರಿ?” ಅಂತ ತಾನೇ ಮಾತಾಡ್ಸೋಕೆ ಶುರು ಮಾಡಿದ. ಹೀಗೆ ಮಾಡ್ತಾನೆ ಕೊಡ್ತೀನಿ ಕೈ ಅಂದ್ಕೊಂಡು ಮುಂದಿನ ಯೋಜನೆ ಬಗ್ಗೆ ಶಾನುಭೋಗರ ಹತ್ತಿರ ಚರ್ಚಿಸಿದ.

“ಶಾನುಭೋಗರೆ, ಒಂದಷ್ಟು ಹೊಲ ಭೂದಾನ ಮಾಡ್ಬೇಕು ಅಂತ ತೀರ್ಮಾನ ಮಾಡಿದ್ದೀನಿ.”

“ಏನು ಬಂತು ಸಾವ್ಕಾರ್ರೆ ನಿಮಗೆ? ಇದೇನಿಂಥಾ ದುರ್ಬುದ್ಧಿ?”

“ಹೀಗೇರಿ. ಯಾವಾಗ್ಲೂ ಒಳ್ಳೆ ಬುದ್ಧಿ ಇದ್ರೆ ಹೆಂಗಾಗ್ತೈತೆ? ಆಗಾಗ್ಗೆ ದುರ್ಬುದ್ಧಿನು ಬರ್ಬೇಕು. ಏನಂತೀರಾ?”

“ಇನ್ನೇನಂಬೋಣ ಸ್ವಾಮಿ, ನೀವೀಗ ಪ್ರಖ್ಯಾತರು. ನಿಮ್ಮ ಹೆಸರು ಅಂದ್ರೆ ಯಾರಿಗೊತ್ತಿಲ್ಲ? ಹೇಗಿದ್ದರೂ ಸಾವಿರ ಎಕರೆ ಸರದಾರರು. ಕೊಡಿ ಧಾರಾಳವಾಗಿ; ನಿಮ್ಮ ಹತ್ರ ಇರೋ ಹೊಲ ಹಂಚಿದ್ರೆ ನಮ್ಮೂರೆಲ್ಲ ಸುಖವಾಗಿರುತ್ತೆ.”

“ಊರು ಸುಖವಾಗಿದ್ರೆ ನನ್ನ ಸುಖ ಹೋಗುತ್ತಲ್ಲ. ಇಷ್ಟಕ್ಕೂ ನಾನೇನು ಊರೋರ್ಗೆಲ್ಲ ಭೂದಾನ ಮಾಡ್ತೀನ? ನನ್ನ ಹತ್ರ ಸಾವಿರ ಎಕರೆ ಎಲ್ಲಿದೆ ಶಾನುಭೋಗರೆ?”

“ಯಾಕೆ ಖುಷ್ಕಿ, ನೀರಾವರಿ, ತೋಟ ಎಲ್ಲಾ ಸೇರಿಸಿದರೆ ಆಗೇ ಆಗುತ್ತಲ್ಲ?”

“ಆಗುತ್ತೆ ಸ್ವಾಮಿ ಆಗುತ್ತೆ; ಅದು ಅನುಭವಿಸೋಕೆ ಆಗುತ್ತೆ. ಆದ್ರೆ ದಾಖಲೇಲಿ? ಗೇಣಿದಾರ್ರಿಗೆ ಕೊಟ್ಟಿಲ್ವ?” – ಎನ್ನುತ್ತಾ ಸಂಗಪ್ಪ ನಕ್ಕ.

ಶಾನುಭೋಗರಿಗೆ ನೆನಪಿಗೆ ಬಂದು “ಓ… ಅದಾ, ನೀವು ಸಾಹಸಿಗರಪ್ಪ” ಅಂತ ನಸುನಕ್ಕರು.

ಆ ಘಟನೆ ನೆನಸಿಕೊಂಡು ಇಬ್ಬರೂ ಮನಸಾರೆ ನಕ್ಕರು.
* * *

ಯಾವುದಾ ಘಟನೆ? ಮತ್ತೆ ಕುತೂಹಲ, ಪ್ರಶ್ನೆ, ಇತ್ತೀಚೆಗೆ ಸಿಕ್ಕಿದ ಪ್ರಚಾರದಂತೆಯೇ ಹಿಂದೊಮ್ಮೆ ಸಂಗಪ್ಪನವರು ಪ್ರಚಾರ ಪಡೆದಿದ್ದರು. ಅದು ಇಷ್ಟೊಂದು ದೊಡ್ಡ ಸುದ್ದಿಯಾಗಲಿಲ್ಲ ಅನ್ನೋ ವಿಚಾರ ಹಾಗಿರ್ಲಿ. ಇವರ ಹೆಸರಂತೂ ತಕ್ಕಮಟ್ಟಿಗೆ ಪ್ರಸಿದ್ಧಿಗೆ
ಬಂತು.

ಭೂಸುಧಾರಣೆಯ ಸಿದ್ಧಾಂತಕ್ಕೆ ಕೊಂಬು ಕಹಳೆ ಬಂದಿದ್ದ ಕಾಲ; ಶತಾಯ ಗತಾಯ ಜಾರಿಗೆ ತರ್ತೇವೆ ಅಂತ ಮುಖ್ಯಮಂತ್ರಿಗಳಿಂದ ಹಿಡಿದು ಮರಿಮಂತ್ರಿಗಳವರೆಗೂ ಘೋಷಣೆ ಮಾಡ್ತಿದ್ದರು. ಇದರಲ್ಲಿ ತಕ್ಕಮಟ್ಟಿಗೆ ಪ್ರಾಮಾಣಿಕ ಕಾಳಜೀನೂ ಕಾಣುತ್ತಿತ್ತು. ಈ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರಾನೂ ಸಿಕ್ಕಿತ್ತು. ಎಲೆಕ್ಷನ್ನಿನಲ್ಲಿ ಇದು ಅಯಸ್ಕಾಂತ; ಬಡವರೇ ತುಂಬಿರುವ ಈ ನೆಲದಲ್ಲಿ ಗೆಯ್ಮೆಗೆ ನೆಲ ಸಿಗುತ್ತೆ ಅಂದ್ರೆ ಯಾರಿಗೆ ನೀರೂರದೆ ಇದ್ದೀತು? ಬಾಯಲ್ಲೂರುವ ನೀರೇ ತಮಗೆ ದಕ್ಕುವ ನೆಲದ ಗೇಯ್ಮೆಗೆ ಸಾಕು ಅನ್ನೋ ಕುಹಕ ಬೇಡ ಇಲ್ಲಿ.

ಇಂಥ ಒಂದು ಸಂದರ್ಭ ಜಮೀನ್ದಾರಿ ಪ್ರಭುಗಳಿಗೆ ಇಕ್ಕಟ್ಟು ತಂದಿಟ್ಟಿತು. ‘ನಾವು ಕಷ್ಟಪಟ್ಟು ಗಳಿಸಿದ ಆಸ್ತಿ ಇದು. ಇದನ್ನು ಕಿತ್ಕಂಡು ಬೇರೆಯವರಿಗೆ ಕೊಡ್ತೀವಿ ಅನ್ನೋದು ಯಾವ ನ್ಯಾಯ? ಎಲ್ಲಿ ಹೋಯ್ತು ನಿಯತ್ತು? ಎತ್ತ ಹೋಯ್ತು ನೀತಿ? ಇದೇನ ಆಡಳಿತದ ರೀತಿ? ನಮ್ಮಾಸ್ತೀನೆ ನಮ್ಮದಲ್ಲ ಅಂದ್ರೆ ನಾಳೆ ನಮ್ಮ ಹೆಂಡ್ತಿಗೂ ಹೀಗೆ ಅಂದ್ರೆ?” ಇದು ಭೂಮಾಲೀಕರ ಪ್ರಶ್ನಾವಳಿ.

ತರ್ಕ ಎಷ್ಟು ಚೆನ್ನಾಗಿದೆ! ತಮ್ಮ ಹೆಂಡ್ತೀನೆ ತಮಗೆ ಸೇರಿದವಳಲ್ಲ ಎಂದರೆ? ಎಂಥಾ ಪ್ರಶ್ನೆ! ತಕ್ಷಣ ಹೇಳಬಹುದು ‘ಉಳುವವನೇ ಹೊಲದೊಡೆಯ’ ಅನ್ನೋದು ತಾನೆ ಈಗಿನ ನೀತಿ; ಇರಲಿ, ಇದನ್ನು ಯಾವ್ಯಾವುದಕ್ಕೂ ಅನ್ವಯಿಸಿ ದೂರಾನ್ವಯ ಮಾಡೋದು ಬೇಡ. ಆದರೂ ಇಂಥವರ ಮಾತಿನ ಮಲ್ಲಯುದ್ಧಕ್ಕೆ ವಾಕರಿಕೆ ಬರುತ್ತೆ. ಅಲ್ಲ ಸ್ವಾಮಿ, ನೀವೇ ಯೋಚನೆ ಮಾಡಿ; ಜಗತ್ತಿನಲ್ಲಿ ಮನುಷ್ಯ ಹುಟ್ಟಿದಾಗ ಈ ಭೂಮಿ ಯಾರಿಗೆ ಸೇರಿತ್ತು? ಯಾರಿಗೂ ಇಲ್ಲ ಅಥವಾ ಎಲ್ಲರಿಗೂ ಸೇರಿತ್ತು ಅಂದ್ಮೇಲೆ ಬರ ಬರ್ತಾ ಸಂಪತ್ತು ಕೆಲವರಲ್ಲೇ ಕೇಂದ್ರೀಕೃತವಾಗಿದೆ; ಅದ್ರಿಂದ ಉಳಿದವರಿಗೆ ಅದು ಇಲ್ಲವಾಗಿದೆ. ಇವರೂ ಈ ಭೂಮೀಲೆ ಎಲ್ಲರಂತೆ ಹುಟ್ಟಿದೋರಲ್ಲವೆ? ಕೆಲವರಿಗೆ ಭೂಮಿ ಜಮಾಯಿಸಿರಬೇಕಾದ್ರೆ ಚರಿತ್ರೆಲಿ ಏನೋ ಮಸಲತ್ತು ನಡೆದಿರಬೇಕು. ಕೆಲವರಿಗೆ ಕೋಟ್ಯಂತರ ಆಸ್ತಿ ಇರಬೇಕಾದ್ರೆ ಕೋಟ್ಯಾಂತರ ಜನಕ್ಕೆ ಯಾಕೆ ಎರಡು ಹೊತ್ತು ಊಟಾನೂ ಇಲ್ಲ. ಈ ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳು, ಈ ಭೂಮಾಲೀಕರು ತಿಂದು ತೇಗಿರೋದು ಯಾರ ಅನ್ನ ಹಾಗಾದ್ರೆ?… ಅವರು ಕೇಳ್ತಾರೆ, ನಮ್ಮ ಆಸ್ತಿ ಕಿತ್ತುಕೊಳ್ಳೋದು ಎಂಥ ನ್ಯಾಯ? ಹಾಗಾದ್ರೆ ಸ್ವಾತಂತ್ರ್ಯಕ್ಕೆ, ಪ್ರಜಾಪ್ರಭುತ್ವಕ್ಕೆ, ಮೂಲಭೂತ ಹಕ್ಕುಗಳಿಗೆ ಎಲ್ಲಿದೆ ಅರ್ಥ? ಎಂಥ ಸಂವಿಧಾನಾತ್ಮಕ ಪಟ್ಟು ನಿಮ್ಮಲ್ಲೂ ಯಾರಿಗಾದ್ರೂ ಇದು ಹೌದಲ್ಲವೆ ಅನ್ನಿಸೀತೆ? ಪ್ರಜಾಪ್ರಭುತ್ವದಲ್ಲಿ, ಅದರಲ್ಲೂ ನಮ್ಮ ಸಂವಿಧಾನದಲ್ಲಿ ಆಸ್ತಿ ಹಕ್ಕಿರುವಾಗ, ಆಸ್ತಿ ಮಾಡ್ಕೊಳ್ಳೋ ಸ್ವಾತಂತ್ರ್ಯ ಇರುವಾಗ ಇದೇನು ಹರಕತ್ತು?… ಹೀಗೆ ಹೇಳ್ತಾ ಹೋದರೆ ಅದಕ್ಕೂ ತರ್ಕವೊಂದನ್ನು ಸೃಷ್ಟಿಸಬಹುದೇನೋ. ಆದರೆ ಓದುಗ ಮಿತ್ರರೆ ಬದುಕು ಇಂಥ ಸರಳ ತರ್ಕಗಳ ಸರಳನ್ನು ಕಿತ್ತೆಸೆದು ಬೆಳೆಯೊ ವ್ಯಾಪಕ ಸ್ವರೂಪದ್ದು; ಬೆಳೀತಾನೆ ತನ್ನದೇ ತರ್ಕವನ್ನು ಸಾಮರ್ಥ್ಯ ಉಳ್ಳದ್ದು. ಈ ಬದುಕಿನಲ್ಲಿ ಬರೀ ಭೂಮಾಲೀಕರಿಲ್ಲ; ಕೋಟ್ಯಾಧಿಪತಿಗಳಿಲ್ಲ; ಅವರ ತುಳಿತಕ್ಕೆ ಭೂಮಿಯ ಬಿರುಕಲ್ಲಿ ಮುಚ್ಚಿಹೋಗಿ ಭುಗ್ಗೆಂದು ಮೇಲೇಳಬಯಸುವ ಜ್ವಾಲೆಯ ಬದುಕೂ ಇದೆ. ಈ ಬದುಕಿನಲ್ಲಿ ನೋವಿದೆ, ವಿಷಾದವಿದೆ, ಪ್ರತಿಷ್ಠಿತರ ತರ್ಕಗಳನ್ನು ತುಂಡು ತುಂಡು ಮಾಡಿ ಉರಿದು ತಿಂದು ಹೊಸ ಸೃಷ್ಟಿ ಮಾಡುವ ಬೆಂಕಿಯಿದೆ.

ಇದೇನು ಮಾತಿನ ರಭಸ! ಹರಿಯುವ ಬೆಂಕಿಯ ರೀತಿ! ಹೀಗನ್ನಿಸಿತೆ? ನೋವು, ವಿಷಾದಗಳ ಗಂಭೀರ ಸಂಗತಿಗಳನ್ನು ಗೇಲಿಗಾಲಿಯಲ್ಲಿ ಹೇಗೆ ಓಡಿಸುವುದು? ಅದು ಆಗದ ಕೆಲಸ. ಕೆಲವೆಡೆ ಹೀಗೆ ಹೊಮ್ಮಬೇಕು… ಮರೆತೆ, ಸ್ವಾತಂತ್ರ್ಯ ಹಕ್ಕು ಅಂತ ಭೂಮಾಲೀಕರ ವಾದದ ವಿಚಾರ ಹೇಳಿದ್ದೆನಲ್ಲವೆ? ಇದಕ್ಕೆ ಉತ್ತರವಾಗಿ ಅಬ್ರಹಾಂಲಿಂಕನ್ ಹೇಳಿದ್ದೆಂದು ತಿಳಿದುಬಂದಿರೊ ಒಂದು ಪ್ರಸಂಗ ಹೇಳಿದರೆ, ಭೂಸುಧಾರಣೆ, ಸಮಾನತೆ ಮುಂತಾದ ಪರಿಕಲ್ಪನೆಗಳ ಹಿಂದಿರೊ ಕಾಳಜಿ ಗೊತ್ತಾದೀತು.

“ಒಬ್ಬ ವ್ಯಕ್ತಿ ದಾರೀಲಿ ಹೋಗ್ತಾ ಇದ್ದ. ದೂರದಲ್ಲಿ ಒಂದು ಕುರಿ ಮೇಯ್ತಾ ಇತ್ತು. ಅದನ್ನು ನೋಡಿದ ಒಂದು ತೋಳ ತಿನ್ನೋದಿಕ್ಕೆ ಹೋಯ್ತು. ಹಿಡ್ಕೊಂಡ್ರು, ಕುರಿ ತನ್ನ ಪ್ರಾಣ ಇನ್ನೇನು ಉಳಿಯೋಲ್ಲ ಅಂದ್ಕೊಂಡ್ತು; ತೋಳ ಇನ್ನೇನು ಕುರಿ ತನಗೆ ದಕ್ಕಿತು ಅಂಡ್ಕೊಂಡ್ತು; ಇದನ್ನು ನೋಡಿದ ಈ ವ್ಯಕ್ತಿ ಓಡಿದ, ಹೋರಾಟ ಮಾಡಿ ತೋಳನಿಂದ ಕುರೀನ ರಕ್ಷಣೆ ಮಾಡಿದ. ಆಗ ಕುರಿ ಹೇಳ್ತು: “ನೀನು ನನ್ನ ಸ್ವಾತಂತ್ರ್ಯವನ್ನು ರಕ್ಷಿಸಿದೆ. ಯಾಕೇಂದ್ರೆ ನಂಗೆ ಬದುಕೊ ಅವ್ಕಾಶ ಕಲ್ಪಿಸಿದೆ.” ಆದರೆ ತೋಳ ಹೇಳ್ತು: ನೀನು ನನ್ನ ಸ್ವಾತಂತ್ರ್ಯ ಹರಣ ಮಾಡಿದೆ; ನನ್ನ ಆಹಾರಾನ ಕಿತ್ಕೊಂಡೆ…”

-ಇದು ಆ ಪ್ರಸಂಗ. ಇಲ್ಲಿ ನಾವು ಕುರಿಯ ಸ್ವಾತಂತ್ರ್ಯದ ಬಗ್ಗೆ ಕಾಳಜಿ ಇಡಬೇಕೊ, ತೋಳನ ಸ್ವಾತಂತ್ರ್ಯದ ಬಗ್ಗೆಯೊ ಅನ್ನೋದು ಮುಖ್ಯ. ಈ ಭೂಮಾಲೀಕರು, ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳು, ಮಠಾಧಿಪತಿಗಳು ಹೇಳೊ ಸ್ವಾತಂತ್ರ್ಯ ತೋಳನ ಸ್ವಾತಂತ್ರ್ಯ ಅದಕ್ಕೆ ಸಾವಿರ ಧಿಕ್ಕಾರವಿರಲಿ.

ಇಷ್ಟು ಯಾಕೆ ಹೇಳಿದೆ ಅಂದ್ರೆ, ಭೂಸುಧಾರಣೆ ವಿರೋಧಿಗಳು ಸ್ವಾತಂತ್ರ್ಯ ಪ್ರಜಾಪ್ರಭುತ್ವಕ್ಕೆ ನೀತಿ ನಿಯತ್ತುಗಳ ಮಹಾನ್ ರಕ್ಷಕರ ರೀತಿ ಮಾತಾಡ್ತಾರಲ್ಲ ಅದಕ್ಕೆ. ಅನುಷ್ಠಾನಕ್ಕೆ ತರೋರು ಬಿಗಿಯಾಗಿದ್ರೆ ಏನಾಗಬಹುದು? ಆಗಲೂ ಈ ಜನ ತಮ್ಮ ಸಾಹಸ ಪ್ರದರ್ಶನ ಮಾಡ್ತಾರೆ; ನಮ್ಮಲ್ಲಿರೊ ಆರ್ಥಿಕ, ಸಾಮಾಜಿಕ ಅಸಮಾನತೆ ಅವರಿಗೆ ಅಮಿತ ಅವಕಾಶ ಕೊಟ್ಟಿದೆ. ನೀವೇನಂತೀರಿ ?…

ಬರೀ ಥಿಯರಿ ಹೇಳ್ತಿದ್ದೀರಲ್ಲ ಸಾಹಿತಿಗಳೆ, ಸಂಗಪ್ಪನ್ನ ಕರೆತನ್ನಿ ಅಂತೀರಲ್ಲವೆ? ನಿಜ, ಥಿಯರಿ ಹೇಳಿ ಕೈಬಿಟ್ಟರೆ ಏನೂ ಆದಂತಾಗಲಿಲ್ಲ. ಅದು ಸಂಗಪ್ಪನ ಸಾಹಸದ ಮುಖಾಂತರ ಸ್ಪಷ್ಟವಾದಾಗ ಬೆಲೆ ಇರುತ್ತೆ. ಇಲ್ಲದಿದ್ದರೆ ನೆಲದಿಂದ ದೂರವಾದ ಬೌದ್ಧಿಕ ಬಡಾಯಿ ಆಗುತ್ತೆ. ಅದು ನನಗೆ ಗೊತ್ತು. ಗೆಳೆಯರೆ, ನಮ್ಮ ಯಾವುದೇ ಸಿದ್ಧಾಂತಕ್ಕೆ ಬೇರು ಇರಬೇಕಾದ್ದು ನಮ್ಮ ಬದುಕಿನಲ್ಲೇ. ಅರ್ಥಪಡೀಬೇಕಾದ್ದೂ ಇಲ್ಲೇ ಈ ಬದುಕಿನಲ್ಲೇ. ಮತ್ತೆ ಬೇಡ ವಿಚಾರದ ಓಟ; ಈ ಓಟವನ್ನು ಮೀರಿಸೊ ಓಟ ಸಂಗಪ್ಪನಂಥವರಿಗೆ ಸಾಧಿಸಿದೆ; ಆದ್ದರಿಂದ ಅವನ ಹತ್ರ ಬರೋಣ.

ಭೂಸುಧಾರಣೆ ಬಂದಾಗ ಸಂಗಪ್ಪ ಸುಧಾರಿಸಿಕೊಳ್ಳೋದು ಸ್ವಲ್ಪ ಕಷ್ಟವೇ ಆಯ್ತು. ಎಲೆಕ್ಷನ್ ಟೈಮಿನಲ್ಲೇನೋ ತಾನೂ ಭೂಸುಧಾರಣೆಯ ಮಾತಾಡಿದ. ಅಧಿಕಾರ ಇದ್ದವರು ಹೇಳೊ ಸಿದ್ಧಾಂತದ ಶೀರ್ಷಿಕೆ ಹೇಳ್ತಾನೆ ಇರೋದು ಸಂಗಪ್ಪನಂಥವರ ವಿಶೇಷ ಲಕ್ಷಣ. ಆಗಿದ್ದೇನು ಅಂದ್ರೆ, ಎಲೆಕ್ಷನ್ನಿನಲ್ಲಿ ಹೇಳಿದ್ದನ್ನು (ನಿಧಾನವಾದ್ರೂ) ಅನುಸರುಸ್ತೇವೆ ಅಂತ ಹೊರಟರು ಸರ್ಕಾರದೋರು. ಈ ದೇಶದಲ್ಲಿ ಎಷ್ಟು ದೊಕ್ಕರುಗಳಿಲ್ಲ. ರಕ್ಷಣೆ ಪಡೆಯೋಕೆ? ಸಂಗಪ್ಪ ಅಂಥದೊಂದು ಯೋಜನೆ ತಯಾರು ಮಾಡಿದ. ಇದಕ್ಕೆ ಶಾನುಭೋಗರೂ ಷಾಮೀಲಾಗಿದ್ದರೂಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ರಾಮೂ ಬಳಗದವರು ಗೇಣಿದಾರರಲ್ಲಿ ಕೆಲವರನ್ನು ಹಿಡಿದು ಅರ್ಜಿ ಹಾಕಿಸೊ ಪ್ರಯತ್ನದಲ್ಲಿದ್ದರು. ಇದು ಸಂಗಪ್ಪನಿಗೆ ತಿಳೀದೆ ಇದ್ದೀತೆ?

ಒಂದು ದಿನ ರಾತ್ರೋ ರಾತ್ರಿ ಊರಿನ ಕಡುಬಡವರಿಗೆ ಕರೆಹೋಯ್ತು. ಅವರೆಲ್ಲ ಗೇಣಿದಾರರು; ಕೂಲಿಯಾಳುಗಳು, ಅವರನ್ನುದ್ದೇಶಿಸಿ ಸಂಗಪ್ಪ ಹೇಳಿದ:

“ಈಗ ಭೂಸುಧಾರಣೆ ಬಂದೈತೆ, ನಾನು ಯಾವತ್ತೂ ನಮ್ಮ ರೈತರನ್ನು ಎದುರು ಹಾಕ್ಕೊಳ್ಳೋನಲ್ಲ. ಅವರ ಉದ್ದಾರವೇ ನನ್ನುದ್ದಾರ. ಏನೋ ಈ ಸರ್ಕಾರ್ದೋರ್ಗೆ ಬುದ್ದಿ ಇಲ್ಲ. ನೀತಿ ಇಲ್ಲ. ನಿಯತ್ತಿಲ್ಲ. ಒಬ್ಬರ ಆಸ್ತಿನ ಇನ್ನೊಬ್ಬರು ಕಿತ್ಕೊಳ್ಬೇಕು ಅನ್ನೋದು ಒಂದೇ, ದರೋಡೆ ಮಾಡಿ ಅಂದ್ರೂ ಒಂದೇ. ಎಂತೆಂಥ ಮಹಾತ್ಮರು ಹುಟ್ಟಿದ್ರು, ಬಾಳಿದ್ರು ಈ ದೇಶ್ದಾಗೆ! ಇದೇ ಸರಿ ಅನ್ನಂಗಿದ್ರೆ ಅವರು ಹೇಳೇ ಹೇಳ್ತಿದ್ರು ಜಮೀನೆಲ್ಲ ಕಿತ್ಕೊಳ್ಳಿ ಅಂತ. ಆದ್ರೆ ಅವ್ರಿಗೆ ನೀತಿ ಮ್ಯಾಲೆ ನಿಗಾ ಇತ್ತು. ಪಾಪದ ಕೆಲ್ಸ ಮಾಡ್ಬಾರ್ದು ಅಂತ ಗೊತ್ತಿತ್ತು. ದೇವರು ಹಾಕಿದ ದಾರಿ ದಾಟಬಾರ್ದು ಅನ್ನೋದು ಅವರಿಗೆ ಚೆನ್ನಾಗಿ ತಿಳಿದಿತ್ತು. ಧರ್ಮಾತ್ಮರು ಯಾರೂ ಹಿಂಗೆಲ್ಲ ಅವರದು ಕಿತ್ತು ಇವ್ರಿಗೆ ಕೊಡಿ ಅಂತ ಹೇಳಲ್ಲ. ನಿಮ್ಮ ಮನಸು ಇದ್ರೆ ಒಂದಷ್ಟು ದಾನ ಧರ್ಮ ಮಾಡ್ರಿ ಅನ್ತಾರೆ ಅಷ್ಟೆ. ಇರ್ಲಿ ಈಗಂತೂ ಇದೇನೋ ಭೂಸುಧಾರಣೆ ಅಂತ ಬಂದ್ಬಿಟ್ಟೈತೆ. ಆ ರಾಮ, ಭೀಮು, ಇವ್ರೆಲ್ಲ ಇದಾರಲ್ಲ ಅವ್ರ ಮಾತು ಕೇಳ್ಕೊಂಡು ನೀವು ಅರ್ಜಿ ಹಾಕ್ತೀರಂತೆ ಆದ್ರೆ ಒಂದು ಮಾತು ತಿಳ್ಕಳ್ರಿ. ನಿಯತ್ತಿನಿಂದ ಇದ್ರೆ ನಾನು ಯಾವತ್ತು ನಿಮ್ಮನ್ನು ಬಿಟ್ಟುಕೊಡಲ್ಲ. ನನ್ನ ವಿರುದ್ಧ ಹೋದರೆ ಯಾವತ್ತೂ ನಿಮ್ಮನ್ನ ಉಳ್ಸಿಬಾಳ್ಸೊಲ್ಲ. ಇದು ಚೆನ್ನಾಗಿ ನೆಪ್ಪಿರ್ಲಿ. ಈಗ ನಾನು ಹೇಳ್ದಂಗೆ ಕೇಳಿದ್ರೆ ನೀವೂ ಈ ಊರಾಗೆ ಬದುಕಬಹುದು; ನಮ್ಮ ಹೊಲ್ದಾಗೆ ಉತ್ತು ಬಿತ್ತು ಹೊಟ್ಟೆ ಹೊರೀಬಹುದು. ಇಲ್ದಿದ್ರೆ ನಂಗೇನಾಗ್ಬೇಕು, ಯಾತಕ್ಕಾದ್ರೂ ದಾನ ಬರೀತೀನಿ. ಆಗ ನಿಮ್ಮ ಹೊಟ್ಟೆಗೇ ಕಲ್ಲು. ನಾನು ಹೇಗೋ ಬದುಕ್ತೀನಿ…”

ದೊಡ್ಡ ಭಾಷಣಾನೇ ಬಿಗಿದು ಏನು ಮಾಡ್ಬೇಕು ಅನ್ನೋದನ್ನ ಅವರಿಗೆ ವಿವರಿಸಿದ; ಮುಂದೆ ದೊಡ್ಡ ಒಣಗಣೇಶ ಆದ್ರೆ ಹೆಂಡ್ತಿ ಮಕ್ಕಳ ಗತಿಯೇನು, ಅನ್ನೋ ಆತಂಕ ಅವರಿಗಿತ್ತು. ಅದಕ್ಕೆ ಧಕ್ಕೆ ಆಗದಿದ್ರೆ ಸಾಕು ಅಂತ ಹೂಂಗುಟ್ಟಿದರು.

ಸಂಗಪ್ಪ ಮಾರನೇ ದಿನವೇ ರಾಜಧಾನಿಗೆ ಧಾವಿಸಿದ. ಮಂತ್ರಿಗಳನ್ನು ನೇರವಾಗಿ ಕಂಡ: “ನಿಮ್ಮ ಭೂಸುಧಾರಣೆ ಕಾನೂನು ನಮ್ಮ ಹತ್ರ ಏನೂ ನಡ್ಯಾಕಿಲ್ಲ ಸ್ವಾಮಿ” ಎಂದ ಒಂದೇ ಮಾತು. ಕೂಡಲೆ ಮಿನಿಷ್ಟರಿಗೆ ಇವನು ಕನಿಷ್ಠನಾಗಿ ಕಂಡ; ತನ್ನ ಎದುರೇ ಇಂಥ ಮಾತೇ? “ಏನ್ರಿ ಹಾಗೆಲ್ಲ ಮಾತಾಡೋದು? ಏನೊ ಕಷ್ಟ ಹೇಳ್ಕೊಂಡ್ರೆ ಕೈಲಾದ್ದು ಮಾಡಬಹುದು. ಅದು ಬಿಟ್ಟು ಹೀಗೆಲ್ಲ ಜಬರ್ದಸ್ತು ಮಾಡಿದ್ರೆ ನಿಮ್ಮ ಜಮೀನು ಒಂದಂಗಲಾನೂ ಉಳ್ಯಾಕಿಲ್ಲ” – ಬಿರುಸಾಗಿ ತಿರುಗಿಸಿದರು. “ಒಂದಂಗಲಾನು ಬ್ಯಾಡ ಅರ್ಧ ಅಂಗುಲಾನು ಬ್ಯಾಡ ಬಿಡ್ರಿ ಮಂತ್ರಿಗಳೆ” ಎಂದು ಬಿಟ್ಟ ಸಂಗಪ್ಪ. ಮಂತ್ರಿಗಳಿಗೆ ಇನ್ನೂ ರೇಗಿತು “ಏನು ಏನ್ ಮಾತಾಡ್ತ ಇದ್ದೀರ? ಏನೋ ಎಲೆಕ್ಷನ್‌ಗೆ ಸಹಾಯ ಮಾಡಿದ್ರಿ ಮುಂದೂ ಮಾಡ್ತಿರ್ತೀರಿ, ಪಾರ್ಟಿ ಫಂಡಿಗೆ ದುಡ್ಡು ಕೊಡ್ತೀರಿ ಅಂತ ಹೇಳ್ತಿದ್ದೀನಿ. ಏನಾದ್ರು ತೊಂದರೆ ಇದ್ದರೆ ಕೈಲಾದ್ದು ಮಾಡೋಣ; ಅದು ಬಿಟ್ಟು ಹೀಗೆಲ್ಲ ಮಾತಾಡಿದ್ರೆ ಭೂಸುಧಾರಣೆ ಕಟ್ಟುನಿಟ್ಟಾಗಿ ಅನ್ವಯಿಸ್ತೇವೆ ನಿಮ್ಮ ಮೇಲೆ” ಎಂದರು.

“ನಿಮಗೆ ಆ ಕಷ್ಟಾನೆ ಕೊಡೋದಿಲ್ಲ ನಾನು.”

“ಹಾಗಂದ್ರೆ?”

“ನಾನೇ ಸ್ವ-ಇಚ್ಛೆಯಿಂದ ನಮ್ಮೂರ ಭೂಹೀನರಿಗೆ ನನ್ನ ಭೂಮಿ ಹಂಚಿಬಿಡ್ತೀನಿ. ನಿಮ್ಮ ಭೂಸುಧಾರಣೆ ಏನು ಹೇಳುತ್ತೊ ಅಷ್ಟಕ್ಕಿಂತ ಒಂದಂಗುಲ ಜಾಸ್ತಿ ಬೇಡ ನಂಗೆ. ನೀವೇ ಬಂದು ನಮ್ಮೂರಲ್ಲಿ ಗೇಣಿದಾರರಿಗೆ, ಭೂಹೀನರಿಗೆ ಪತ್ರ ವಿತರಣೆ ಮಾಡಿಬಿಡಿ.”

“ಹೌದೇನ್ರಿ ? ಇಂಥ ಒಳ್ಳೇ ಬುದ್ಧಿಯೋರು ಇದಾರ?”

“ಇಲ್ದೆ ಏನು ಸ್ವಾಮಿ? ನೀವು ಬಲಾತ್ಕಾರವಾಗಿ ಕಾನೂನು ತಂದ್ರೆ ಕೇಳಿಬಿಡ್ತಾರೆ ಅಂಡ್ಕೊಂಡ್ರ? ನಮ್ಮಂಥೋರ್ನ ಕೂಡಿಸ್ಕೊಂಡು ಮನಸ್ಸು ಪರಿವರ್ತನೆ ಆಗೊ ಹಂಗೆ ಹೇಳಿದ್ರೆ ಇಲ್ಲ ಅಂತೀವ? ಮಹಾತ್ಮರುಗಳೆಲ್ಲ ಮನಸ್ಸಿನ ಮ್ಯಾಲೆ ನಿಗಾ ಮಡಗಿದ್ರು. ನೀವು ನೆನ್ನೆ ಮೊನ್ನೆ ಅಧಿಕಾರಕ್ಕೆ ಬಂದು ಕಾನೂನು ಮ್ಯಾಲೆ ಕಣ್ಣಿಟ್ಟಿದ್ದೀರಿ. ಒಟ್ಟಿನಾಗೆ ನಾನಂತೂ ನಮ್ಮ ರಾಜ್ಯಕ್ಕೆ ಮಾದರಿ ಆಗ್ಬೇಕು ಅಂದ್ಕೊಂಡಿದ್ದೀನಿ. ಬದುಕ್ಲಿ ಬಿಡಿ ಆ ಬಡ ಮಕ್ಳು. ಎಂದು ಬರ್ತೀರ ಸ್ವಾಮಿ ನಮ್ಮೂರ್ಗೆ?”

“ನೀವು ಹೇಳೋದು ಸ್ವಲ್ಪ ನಿಜ ಸ್ವಾಮಿ. ಕೂಡಿಸ್ಕೊಂಡು ಹೇಳಿದ್ರೆ ಮನಸ್ಸು ಬದಲಾಯಿಸ್ತಾರೆ ಅನ್ಸುತ್ತೇನೊ. ದೊಡ್ಡ ದೊಡ್ಡ ಶ್ರೀಮಂತರು… ಆದ್ರೂ ಎಲ್ಲರೂ ನಿಮ್ಮ ಹಾಗೇ ಇರಬೇಕಲ್ಲ?” ಸಂಗಪ್ಪನ ಮಾತುಗಳಿಗೆ ಕರಗಿದ್ದ ಮಂತ್ರಿಗಳಿಗೆ ಭೂಸುಧಾರಣೆಯ ಕಾನೂನು ಕಪ್ಪಾಗಿ ಕಂಡಿತೇನೊ. ಇಷ್ಟಕ್ಕೂ ಸೈದ್ಧಾಂತಿಕ ತಳಹದಿ ಎಷ್ಟು ಜನ ಮಂತ್ರಿಗಳಿಗಿದೆ? ಎಷ್ಟು ಪಕ್ಷಗಳಿಗಿದೆ? ಎಲ್ರೂ ಭೂಸುಧಾರಣೆ ಅಂದಾಗ ತಾವು ಅನ್ನಬೇಕು ಅನ್ನೋವರು ಎಷ್ಟೋ ಜನ. ಈ ಮಂತ್ರಿಗಳು ಮುಂದುವರಿಸಿದರು: “ನೋಡಿ ಸಂಗಪ್ಪ, ನೀವು ನಮ್ಮ ಜಿಲ್ಲೆಯೋರು ಅಂತ ಈ ಒಳಗುಟ್ಟು ಹೇಳ್ತಿದ್ದೀನಿ. ನಮ್ಮ ಮುಖ್ಯಮಂತ್ರಿ ಯಾವಾಗೂ ಭೂಸುಧಾರಣೆ ಅಂತಿದ್ದಾರೆ. ಆದ್ರೆ ನಮ್ಮ ಪಕ್ಷದಾಗೇ ನೂರಾರು ಜನ ಭೂಮಾಲೀಕರಿದ್ದಾರೆ; ಎಂ.ಎಲ್.ಎ.ಗಳ ಜಮೀನೂ ಜಾಸ್ತಿ ಇದೆ, ಇವನ್ನೆಲ್ಲ ಕೈಬಿಟ್ಟರೆ ಪಕ್ಷ ಉಳಿಯೋದು ಹೇಗೆ? ನಿಮ್ಮ ಹಾಗೆ ಎಲ್ರಿಗೂ ಮನಃಪರಿವರ್ತನೆ ಆಗ್ಬೇಕಲ್ಲ? ಇದು ಈಗ ನಮ್ಮ ಚಿಂತೆ…”

“ನೋಡಿ ಮಂತ್ರಿಗಳೆ, ನೀವು ನಮ್ಮ ಜಿಲ್ಲೆಯೋರೂಂತ ಇಷ್ಟು ಮಾತಾಡ್ತಿದ್ದೀನಿ. ನೀವು ಪ್ರಯತ್ನಾನೇ ಮಾಡಿಲ್ಲ, ನಮ್ಮಂಥ ಜನಾನ ಕೂಡುಸ್ಬೇಕು. ದೇಶಕ್ಕೆ ನಿಮ್ಮ ಸೇವೆ ಬೇಕು ಅಂತ ತಿಳಿ ಹೇಳಬೇಕು. ಮೊದ್ಲೆ ದಾನ ಧರ್ಮದ ನಾಡು ಇದು. ಯಾರು ತಾನೆ ಇಲ್ಲ ಅಂತಿದ್ರು? ಈಗ ನೋಡಿ ನೀವು ಕೇಳದೆ ಇದ್ರೂ ನಾನೇ ಸಿದ್ಧವಾಗಿ ಬಂದಿಲ್ವ? ನಮ್ಮ ಮನಸ್ಸು ಇಷ್ಟು ಮೃದುವಾಗಿದ್ದಾಗ ಬಲಾತ್ಕಾರ ಮಾಡೋದು ಅಂದ್ರೆ ಹೆಂಗ್ ಹೇಳ್ರಿ.”

ತಮಗೇ ಉಪದೇಶ ಶುರುವಾದಾಗ ಸ್ವಲ್ಪ ಬೇಜಾರಾಯ್ತು ಮಂತ್ರಿಗಳಿಗೆ. “ಇರ್ಲಿ ಅದೆಲ್ಲ. ಯಾವತ್ತು ನಿಮ್ಮ ಸಮಾರಂಭ? ಒಳ್ಳೆ ಪ್ರಚಾರ ಕೊಡೋಣ. ಯಾಕೇಂದ್ರ ಇದರಿಂದ ಇನ್ನು ಯಾರಾದ್ರೂ ಮುಂದಕ್ಕೆ ಬರಬಹುದು” ಎಂದು ಕೇಳಿದರು.

“ಸತ್ಯವಾಗ್ಲೂ ಮುಂದಕ್ಕೆ ಬರ್ಬೇಕು ಅಂತಲೇ ಸ್ವಾಮಿ ನಾನು ಇಷ್ಟೆಲ್ಲಾ ಮಾಡ್ತಿರೋದು” ಅಂತ ಸಂಗಪ್ಪ ‘ಸತ್ಯ’ ಹೇಳಿದ.

ಸಮಾರಂಭದ ದಿನ ಅದ್ದೂರಿಯೇ ಅದ್ಧೂರಿ! ಊರೆಲ್ಲ ಸಿಂಗಾರಗೊಂಡು ನಿಂತಾಗ ಇದೇನು ತಮಗೆ ಸಂಬಂಧವಿಲ್ಲದಂತೆ, ನೋವಿನ ಮಡುವಾಗಿದ್ದ ಮುಖ ಹೊತ್ತು ಆಗಾಗ್ಗೆ ಕಿಡಿಕಾಡ್ತಾ ಇದ್ದವರೆಂದರೆ ರಾಮೂ ಬಳಗದವರು. ಅವರು ಏನು ಹೇಳಿದರೂ ಊರಿನ ಜನ ಕೇಳೋ ಸ್ಥಿತೀಲಿರಲಿಲ್ಲ. ಅದು ಅವರ ತಪ್ಪು ಅಂತಲೂ ಹೇಳೋದಿಕ್ಕಾಗದು. ಅವರ ಪರಿಸ್ಥಿತಿಯೇ ಹಾಗಿತ್ತು.

ಮಂತ್ರಿಗಳಿಂದ ಪತ್ರ ವಿತರಣೆಯಾಯಿತು. ಏನೋ ದಿವ್ಯ ನಿರ್ಲಿಪ್ತ ಭಾವದಲ್ಲಿ ಗೇಣಿದಾರರು ಅದನ್ನು ಸ್ವೀಕರಿಸಿದಂತಿತ್ತು. ಮಂತ್ರಿಗಳೋ ಭೂಸುಧಾರಣೆಯಿಂದ ಶುರು ಮಾಡಿ ಮನಃಪರಿವರ್ತನ ಮೇಲೆ ಕೇಂದ್ರಿಕರಿಸಿ ದಾನ, ಧರ್ಮದ ಅಗತ್ಯ ಕುರಿತು ಮಾತಾಡಿದರು. ನಾಡಿನಲ್ಲಿ ಆಗಿ ಹೋದ ಮಹಾತ್ಮರ ಪಟ್ಟಿ ಮಾಡಿದರು. ದಾನಶೂರ ಕರ್ಣನಿಗೂ ಸಂಗಪ್ಪನವರಿಗೂ ಗಂಟು ಹಾಕಿದರು; ಇನ್ನೊಂದು ಕ್ಷಣದಲ್ಲೇ ಧರ್ಮರಾಯನಂಥೋರು ಈ ಸಂಗಪ್ಪ ಎಂದೂ ಘೋಷಿಸಿದರು.

ಮಂತ್ರಿಗಳು ಊಟ ಮಾಡಿ ಹೋದಮೇಲೆ ಪತ್ರ ಸ್ವೀಕಾರ ಮಾಡಿದವರಿಗೆ ಪ್ರತ್ಯೇಕವಾಗಿ ಕುರಿಬಾಡಿನ ಸಮಾರಾಧನೆ ನಡೀತು. ಉಂಡು ಹೋಗುವಾಗ ಪತ್ರ ವಾಪಸ್ ಕೊಟ್ಟು ಸಂಗಪ್ಪ ಕೊಟ್ಟ ಹಣದ ಲಕೋಟೆ ತೆಗೆದುಕೊಂಡು ಹೋದರು; ಸದ್ಯ ಅಲ್ಪಸ್ವಲ್ಪ ಹಣನಾದ್ರೂ ಸಿಗ್ತಲ್ವ ಅನ್ನೊ ಸಮಾಧಾನ, ಸಂತೋಷ ಅವರಿಗೆ, ಅವರ ಬದುಕು ಇನ್ನು ಮೇಲೆ ಯಾವೊತ್ತಿನಂತೆ. ಆದರೆ ಸಂಗಪ್ಪನದು ಹಾಗಲ್ಲ; ಪತ್ರಿಕೆ, ರೇಡಿಯೋಗಳ ಸುದ್ದಿಯಿಂದ ಅವನೀಗ ಅನೇಕರ ಕಣ್ಣಲ್ಲಿ ಧರ್ಮದರ್ಶಿ! ದಾನಶೂರ! ಮಾದರಿ ಮನುಷ್ಯ ಅವನ ಬದುಕು ಬೇರೆ ಥರಾ.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ