ಮಧ್ಯರಾತ್ರಿಯಲ್ಲಿ,
ಭೂಮಧ್ಯಸಮುದ್ರದ ಮಧ್ಯದಲ್ಲಿ
ತೇಲುತಿಹ ಹಡಗದಲ್ಲಿ ನಿದ್ರಿಸುತ
ಸವಿಗನಸು ಕಂಡು ಕಣ್ದೆರೆದು ನೋಡೆ,-
ಆಹಾ! ಎನಿತು ನಿಚ್ಚಳವಿಹುದು!
ನೆರೆದಿಹುದು ಮುಗಿಲಿನಲ್ಲಿ ತಾರೆಗಳ ನಿಬ್ಬಣವು.
ಕೋಟಿ ನಕ್ಷತ್ರಗಳು ಕಣ್ಣುಬಿಡುತಿವೆ ನಭದಿ:
ಬಿಳಿಮುಸುಕನೋಸರಿಸಿ ನೋಡುತಿಹಳಿದೊ! ಇದೊ!
ಆಕಾಶಗಂಗೆ!
ಅವಳ ಕೇಶಕಲಾಪದಲ್ಲಿ ಕಣ್ಣೆವೆಯಿಕ್ಕಿ
ತೆರೆಯುತಿದೆ ನೋಡು ಕೃತ್ತಿಕೆಯ ಮೊಗ್ಗೆಮಾಲೆ!
ಕಾದಲನಿಗಾಗಿ ದಾರಿಕಾಯುವಳು,-
ದಾರಿಕಾಯುವಳು ಆಕಾಶಗಂಗೆ!
ಓ! ಸಮುದ್ರರಾಜ! ಬರಿ ಹಸುಳ ನಾನು!
ನಿನ್ನ ಪ್ರಣಯಮುಹೂರ್ತವನು ಕಂಡೆನೆಂದು
ಕೋಪಿಸಬೇಡ ಕಂಡೆಯಾ!
ಪರಮ ಪಾವಿತ್ರ್ಯವನು ಪಡೆದಿದೆ ನನ್ನ ಕಣ್ಣಿನಲ್ಲಿ,-
ನಿಮ್ಮೀರ್ವರ ನಗ್ನ ಸೌಂದರ್ಯವಿದು!
*****


















