
ಇಂಗ್ಲೆಂಡ ನಾವಿಕರಿರಾ – ಕಾಯುವಿರಿ
ನೀವೆಮ್ಮ ಕಡಲುಗಳನು;
ನಿಮ್ಮ ಬಾವುಟ ತಡೆಯಿತೊಂದು ಸಾವಿರ ವರುಷ
ಗಾಳಿಯನು ಕಾಳಗವನು.
ನಿನ್ನೊಮ್ಮೆ ನಿಮ್ಮ ವಿಜಯಧ್ವಜವ ತೂಗಿಬಿಡಿ
ಇನ್ನೊಬ್ಬ ಹಗೆಯ ತಾಗಿ
ಕಡಲಲ್ಲಿ ನಡೆಗೊಳ್ಳಿ-
ಬಿರುಗಾಳಿ ತೀಡುತಿರಲು
ಹಿರಿದಾಗಿ ಕಾಳಗವು ಬೊಬ್ಬಿರಿದು ಹಬ್ಬಿರಲು
ಬಿರುಗಾಳಿ ತೀಡುತಿರಲು.
ನಿಮ್ಮ ಪಿತೃಗಳು ಧೀರರು – ತೆರೆತೆರೆಗೆ
ಹೊಮ್ಮುವರು ಹುರಿಗೊಳಿಸಲು;
ಹಡಗಿನೆಟ್ಟವೆ ಅವರು ಕಾದಿ ಹೆಸರಾದ ಕಣ,
ಕಡಲ ಸುಳಿ ಹೂಳಿದ ಕುಳಿ.
ಎಲ್ಲಿ ಬ್ಲೇಕ್ ನೆಲ್ಸನರು ಚೆಲ್ಲಿ ನೆತ್ತರ ಕೆಡೆದ
ರಲ್ಲಿ ನಿಮಗೆದೆ ಕನಲದೆ,
ಕಡಲಲ್ಲಿ ನಡೆವಲ್ಲಿ?-
ಬಿರುಗಾಳಿ ತೀಡುತಿರಲು,
ಹಿರಿದಾಗಿ ಕಾಳಗವು ಬೊಬ್ಬಿರಿದು ಹಬ್ಬಿರಲು,
ಬಿರುಗಾಳಿ ತೀಡುತಿರಲು.
ಕೋಟೆಗಳು ಕೊತ್ತಳಗಳು-ಬೇಡದೆ ಬ್ರಿ
ಟಾನಿಯಳು ಹದುಳವಿಹಳು;
ಬೆಟ್ಟದೆರೆಗಳ ತಲೆಯ ಮೆಟ್ಟುವಳು ದಾಳಿಯಲಿ.
ಕಡಲು ಮನೆಯಾಗಿರುವಳು
ಗುಡುಗಿ ತನ್ನಡವಿಗಳ ತೇಗುಮರದೊಡಲಿಂದ,
ಅಡಗಿಸುವಳಡಿಯ ಹೊನಲ
ಕರೆಯಲ್ಲಿ ಮೊರೆವಲ್ಲಿ-
ಬಿರುಗಾಳಿ ತೀಡುತಿರಲು,
ಹಿರಿದಾಗಿ ಕಾಳಗವು ಬೊಬ್ಬಿರಿದು ಹಬ್ಬಿರಲು,
ಬಿರುಗಾಳಿ ತೀಡುತಿರಲು.
ಇಂಗ್ಲೆಂಡ ಧ್ವಜಪಟವದು – ರೌದ್ರದಲಿ
ಧೂಮಕೇತುವೊಲುರಿವುದು;
ಬಿಗಿದ ಭೀತಿಯ ನಿಶಿಯ ಕಾರೊಡ್ಡು ಕರಗುತ್ತ
ನಗುವನಕ ಶಾಂತಿಯರಿಲು.
ಆಗ ಆಗುತ್ಸವದಿ, ಸಾಗರದ ವೀರರಿರ,
ಬೀಗುವೆವು, ಕೀರ್ತಿಸುವೆವು
ನಿಮ್ಮಗಳ ಹಮ್ಮುಗಳ-
ಬಿರುಗಾಳಿ ತೀಡಿ ನಿಲಲು,
ಘೋರಕದನದ ಬೊಬ್ಬೆ ತೂರಿ ಮೊರೆವುದು ನಿಲಲು,
ಬಿರುಗಾಳಿ ತೀಡಿ ನಿಲಲು.
*****
CAMPBELL (1777 – 1844) : Ye Mariners of England














