ಅಧ್ಯಾಯ ಹದಿನೇಳು
ಆಂದಿನ ದಿನದ ಸಮಾರಾಧನೆಯನ್ನು ಹೊಗಳದವರಿಲ್ಲ. ಎಲ್ಲರೂ ಯಥೇಚ್ಛವಾಗಿ ಊಟಮಾಡಿ ತೃಪ್ತಿಯನ್ನು ಹೊಂದಿದ್ದಾರೆ. ತೃಪ್ತಿಯನ್ನು ಹೊಂದಿರುವುದು ಕೇವಲ ಮಾನವಗಣ ಮಾತ್ರವಲ್ಲ. ರಾತ್ರಿಂಚರರಾಗಿ ಅಲ್ಲಿಗೆ ಬರಬಹುದಾದ ವನ್ಯಮೃಗಗಳಿಗೂ ತೃಪ್ತಿಯಾಗುವಷ್ಟು ಎಲೆಗಳಲ್ಲಿ ಬಿಟ್ಟಿದ್ದಾರೆ. ಕಾಗೆ, ಹದ್ದು ಜಲಾ ಖೇಚರಗಳಂತೂ ತಿಂದು ತಿಂದು ತೃಪ್ತಿಯಾಗಿ ಬಿಟ್ಟು ಹೋಗುತ್ತಿವೆ. ನಾಯಿಗಳೂ ಕಟ್ಟರೆಯಾಗುವಷ್ಟು ತಿಂದು ಮೇಲಕ್ಕೆದ್ದು ಹೋಗಲಾರದೆ ಅಲ್ಲಿಯೇ ಮಲಗಿಬಿಟ್ಟಿವೆ.
ಅಂದಿನ ರಾತ್ರಿ ಉತ್ಸನವೂ ಅಷ್ಟೆ! ಸ್ವಾಮಿಯನ್ನು ನೋಡಿದರೆ ಮಾತನಾಡಿಸುವವರಿದ್ದರೆ ಮಾತನಾಡುವದಕ್ಕೆ ಸಿದ್ಧವಾಗಿದ್ದೇನೆಯೆಂದು ಹೇಳುವಂತೆ ಸ್ವಾಮಿಯು ನಗುನಗುವಂತಿವೆ. ಇನ್ನೂ ಕಣ್ಣಿಟ್ಟು ನೋಡಿದರೆ ಉತ್ಸವಮೂರ್ತಿಗಳು ಎರಡೂ ಪಾರ್ವತಿಪರಮೇಶರರಿಬ್ಬರೂ ಏನೋ ಪರಸ್ಪರ ಮಾತನಾಡಿಕೊಳ್ಳುವಂತಿದೆ. ಅರ್ಚಕನಿಗೆ. “ಇವೊತ್ತು ಮೂರ್ತಿ ಗಳು ಇಷು, ಸೊಗಸಾಗಿ ಕಾಣುತ್ತಿದ್ದಾರೆ. ಎಷ್ಟು ಜನರ ಕಣ್ಣು ತಗಲು ವುದೋ? ಹೋಗುತ್ತಲೂ ಎರಡು ಸಲ ಕುಂಭಾರತಿ ಮಾಡಿಸಬೇಕು” ಎಂದು ಯೋಚನೆ ಮಾಡುತ್ತಿದ್ದಾನೆ
ಭಜನೆಯಂತೂ ಅದ್ದುತವಾಗಿದೆ. ಗ್ರಾಮಾಂತರಗಳಿಂದ ಬಂದಿರುವ ಜನ ಅವರಷ್ಟು ಕಲಾಪ್ರೌಢರಲ್ಲ. ಆದರೂ ಅವರಿಗೆ ಏನೋ ಒಂದು ಅಭೂತಪೂರ್ವವಾದ ಆನಂದ. ಎಲ್ಲೂ ಇಲ್ಲದ ಉತ್ಸಾಹ. ಭಜನೆ ಮಾಡುತ್ತಿರುವವರಿಗೆಲ್ಲ ಎಲ್ಲೂ ಇಲ್ಲದ ಭಕ್ತಿ. ಎಂದೂ ಇಲ್ಲದ ಸಂಭ್ರಮ ಆಚಾರ್ಯರೇ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ.“ಇದೇನು, ಈ ಅಪರೂಪ ನನ್ನ ಬಾಯಲ್ಲಿ ಯಾವೊತ್ತೂ ನುಡಿದಿರಲಿಲ್ಲವಲ್ಲ” ಎಂದು ತಾವೇ ಆಶ್ಚರ್ಯ ಪಡುತ್ತಾರೆ. ಅದೇ ಆಶ್ಚರ್ಯಭಾವ ರಾಯನಿಗೂ, ರನ್ನಳಿಗೂ ಇದೆ.
ಚಿನ್ನಮ್ಮನಿಗೆ ಅರ್‍ಧಜ್ಞಾ ನ. ಯಾವುದೋ ಕನಸು ಕಾಣುತ್ತಿರು ವಂತಿದೆ. ಆ ಕನಸಿನಲ್ಲಿ ಚಕ್ರವರ್ತಿಗಳು ಬಂದಿದ್ದಾರೆ. ತಾನೆಲ್ಲಿಗೋ ಪ್ರಯಾಣ ಹೊರಟದ್ದಾಳೆ. ಚಕ್ರವರ್ತಿಗಳನ್ನು ಹೋಗಿಬರಲು ಅಪ್ಪಣೆಕೊಡಬೇಕೆಂದು ಕೇಳುತ್ತಾಳೆ. ಅವರು, “ನನ್ನನ್ನು ಬಿಟ್ಟುಹೋಗುವುದ್ದೇಗೆ ? ಅದೆಲ್ಲ ನಡೆಯದ. ಮಾತು“ಎನ್ನುತ್ತಾರೆ. ಇವಳು ಹತ್ತಿರಹೋಗಿ ಸೋಟೆ ತಿವಿದು “ಅಯ್ಯೋ ಪೆದ್ದಂಭಟ್ಟ. ಹೋಗಬೇಕು ಎನ್ನುವವರು ಬೇಡ ಅಂದರೆ ನಿಲ್ಲುತ್ತಾರೆಯೇ ? ಹೋಗುತ್ತೇವೆ ಎಂದರೆ ಹೋಗಿ ಎನ್ನಬೇಕು” ಎನ್ನುತ್ತಾಳೆ. ಮಗ್ಗುಲಲ್ಲಿ ತಿರುಗಿದರೆ ಮಲ್ಲಿಕಾರ್ಜುನನು ಬಂದಿದ್ದಾನೆ. ಇಷ್ಟು ದಿವಸವೂ ತಾನು ಅಖಂಡಭಕ್ತಿಯಿಂದ ಸೇವಿಸಿದ ಪಂಪಾನಾಥನೂ ಮಗ್ಗುಲಲ್ಲಿ ನಿಂತಿದ್ದಾನೆ. ಅವರ ಮಗ್ಗುಲಲ್ಲಿ ಒಂದು ವಿಚಿತ್ರವಾಗಿ ಅಲಂಕೃತವಾಗಿರುವ ಪುಷ್ಪರಥ ವೊಂದಿದೆ. ಪಂಪಾಪತಿ, ಮಲ್ಲಿಕಾರ್ಜುನ ಇಬ್ಬರೂ ತನಗೆ ಹಸ್ತಲಾಘವವನ್ನು ಕೊಟ್ಟು ಪುಷ್ಪರಥಕ್ಕೆ ಹತ್ತಿಸುತ್ತಾರೆ. ಹತ್ತಿಹೋದರೆ ಅಲ್ಲಿ ಭುವನೇಶ್ವರಿಯು ಕುಳಿತಿದ್ದಾಳೆ. “ಬಾರೆ ತಾಯಿ. ನೀನು ಬರಲಿ ಎಂದು ಕಾದಿದ್ದೆ. ನಡೆ, ನಾವೆಲ್ಲರೂ ಹೊರಡೋಣ” ಎನ್ನುತ್ತಾಳೆ. ಹಾಗೇ ನೋಡಿದರೆ ಆಕೆ ಭ್ರಮರಾಂಭೆಯಾಗಿದ್ದಾಳೆ. “ನಿನ್ನ ಮೂರು ದಿನದ ಪೂಜೆ ನಮ್ಮ ಮನಸ್ಸಿಗೆ ಬಂತು. ಬಹು ಸಂತೋಷವಾಯಿತು. ಬಾ. ತಾಯಿ” ಎನ್ನುತ್ತಾಳೆ. ಆಕೆಯು ಆಲಿಂಗನವನ್ನು ಕೊಡುತ್ತಾಳೆ. ಆಲಿಂಗನದ ಭಾರದಿಂದ ಆದ ಸಂತೋಷದಲ್ಲಿ ಯಾರು ಎಂದು ನೋಡಿದರೆ ಗೋಪಾಲ. “ಗೋಪಾಲ, ನೋಡಿದೆಯೋ ? ನಿನಗೆ ಹೇಳದೆ ಹೊರಟುಹೋಗುತ್ತಿದ್ದೆನಲ್ಲ. ಹೋಗಿಬರಲೆ ?”ಎಂದು ತಾನು ಆಲಿಂಗಿಸುತ್ತಾಳೆ. ಅವಳ ನೀಡಿದ ಕೈಗಳು ಮುಂದೆ ಇದ್ದ ರನ್ನಳನ್ನು ಹಿಡಿದು ಕೊಂಡವು. ಅವಳು ಹಿಂತಿರುಗಿ ನೋಡಿದಳು. ಆ ವೇಳೆಗೆ ಅವಳಿಗೂ ಎಚ್ಚರವಾಯಿತು. ಏನಕ್ಕ ಎಂದು ಕೇಳಿದಳು. ನಾಚಿಕೆಗೊಂಡು ನಗುತ್ತಾ, ಇನ್ನೂ ಸ್ವಪ್ನವೃತ್ತಿಯಿದ್ದರೂ ಅದನ್ನು ಮುಚ್ಚಿಕೊಳ್ಳುತ್ತಾ, ಕಾಲು ಎಡವಿತು. ಆಷ್ಟೇ ಎಂದಳು.
ಆ ವೇಳೆಗೆ ಉತ್ಸವವು ದೇವಸ್ಥಾನದ ಹತ್ತಿರಕ್ಕೆ ಬಂದಿತ್ತು. ಸ್ವಾಮಿ ಯನ್ನು ಎಲ್ಲರೂ ಸೇರಿ ಯಥಾಸ್ಥಾನನನ್ನು ಸೇರಿಸಿದರು.
ಆಚಾರ್ಯರಿಗೆ ಆಯಾಸವಾಗಿತ್ತು. ಒಂದು ಗಳಿಗೆ ಕುಳಿತು ವಿಶ್ರಮಿಸಿ ಕೊಂಡರು. ಎಲ್ಲರೂ ಆಯಾಸಸಟ್ಟದ್ದರೂ ಉತ್ಸಾಹವು ಮಾತ್ರ ಕುಂದಿರಲಿಲ್ಲ. ಎಲ್ಲರೂ ಶಾಂಭವಾನಂದರ ಆಶ್ರಮದ ಕಡೆ ಹೊರಟರು.
ಯತಿಗಳು ನಿರೀಕ್ಷೆಯಲ್ಲಿದ್ದರು. ಬರುತ್ತಿದ್ದ ಹಾಗೆಯೇ ದೇವಿಗೆ ಮಂಗಳಾರತಿಮಾಡಿ ಎಲ್ಲರಿಗೂ ಮಂಗಳಾರತಿಕೊಟ್ಟರು. “ಇದೇ ಕೊನೆಯ ಪೂಜೆ. ಇಂದು ತಾಯಮ್ಮನಲ್ಲದೆ ಇನ್ನು ಯಾರೂ ಇರುವಂತಿಲ್ಲ. ಬೇಕಾದರೆ ಆಚಾರ್ಯರು ಒಬ್ಬರು ಇರಬಹುದು” ಎಂದರು. ಎಲ್ಲರೂ ಬಂದು ಆಶ್ರಮದಿಂದ ಅಷ್ಟುದೂರದಲ್ಲಿ ನಿಂತರು. ಆಚಾರ್ಯರು, ಚಿನ್ನಮ್ಮ ಮಾತ್ರ ಆಶ್ರಮದಲ್ಲಿ ನಿಂತರು.
ಶಾಂಭವಾನಂದರು ನಗುನಗುತ್ತ, ಇಮ್ಮಡಿಸಿದ ಆನಂದ, ಉತ್ಸಾಹ ಸಂಭ್ರಮಗಳಿಂದ ಮಾತೃಪೂಜೆಯನ್ನು ನೆರವೇರಿಸಿದರು. “ಜಗನ್ಮಾತೆ, ನಿನ್ನ ಇಷ್ಟದಂತೆ ಇದುವರೆಗೆ ನಡೆದಿದೆ. ಇನ್ನು ಮುಂದೆ ನಡೆಯಬೇಕಾದುದು ನಿನಗೆ ಸೇರಿದುದು”ಎಂದು ನಮಸ್ಕಾರಮಾಡಿದರು. ತಾಯಮ್ಮನ ಮೇಲೆ ತಾಯಿಯು ಬಂದು “ಧನ್ಯ, ಧನ್ಯ, ಶಂಭು, ಧನ್ಯ”ಎಂದು ಆಚಾರ್ಯರ ಕಡೆ ತಿರುಗಿ, “ಶಾಮಣ್ಣ, ನಿನಗೇನು ಬೇಕು ಕೇಳಿಕೊ” ಎಂದಳು. ಆ ವೇಳೆಗೆ ಆ ಪೂಜಾದರ್ಶನದಿಂದಲೇ ಅರ್ಧಾರ್ಧವಾಗಿ ಸಮಾಧಿಯನ್ನು ಪಡೆದಿದ್ದ ಆಚಾರ್ಯರು “ತಾಯೆ, ನಿನ್ನ ಚರಣಾರವಿಂದಕ್ಕೆ ಸೇರಿಸಿಕೊ. ಇನ್ನು ಏನೂ ಬೇಡ” ಎಂದರು.
ತಾಯಿಯುನಕ್ಕಳು! “ಭಕ್ತ, ಇಲ್ಲಿ ಕೊಡು. ಆ ಮಾರ್ಜನಪಾತ್ರೆ ಯನ್ನು ಇತ್ತತಾ” ಎಂದಳು. ಯತಿಗಳು ಒಪ್ಪಿಸಿದರು. ಪದ್ಮಾಸನನನ್ನು ಹಾಕಿಕೊಂಡು ಕುಳಿತರು. ತಾಯಿಯು ಎಲ್ಲೆಲ್ಲಿಯೂ ಮಂತ್ರೋದಕವನ್ನು ಚಿಮುಕಿಸಿದಳು. ಪೂರ್ಣಾಹುತಿಯ ಪಾತ್ರವನ್ನು ಎತ್ತಿ ಅದರಲ್ಲಿದ್ದ ಆಜ್ಯ ವನ್ನು ಪೂರ್ಣವಾಗಿ ಅಗ್ನಿಕುಂಡಕ್ಕೆ ಆಹುತಿಮಾಡಿದಳು. ಯಜ್ಞೇಶ್ವರನು ಧಗಧಗಾಯಮಾನವಾಗಿ ಪ್ರಜ್ವಲಿಸಿದನು. ಆಕೆಯುಟ್ಟಿದ್ದ ಸೀರೆಯನ್ನೂ ಮುಟ್ಟಿಕೊಂಡು ಗುಡಿಸಲಿನ ಛಾವಣಿಯವರೆಗೂ ನೆಗೆದನು. ಗುಡಿಸಲು ಹತ್ತಿಕೊಂಡು ಉರಿಯು ಕಾಣಿಸಿತು. ತಾಯಿಯು ತನ್ನ ಸೀರೆಯು ಬೇಯು ತ್ತಿರುವುದರ ಅರಿವೇ ಇಲ್ಲದೆ, ನೇರವಾಗಿ ಏನೂ ಆಗದಿದ್ದವಳಂತೆ ಗುಡಿಸಲಿನ ಬಾಗಿಲಿನಕಡೆಗೆ ಬಂದು ಹೊರಕ್ಕೆ ಬಂದ್ಕು ಬಾಗಿಲನ್ನು ಸೇರಿಸಿಕೊಂಡು ಈಚೆಗೆ ಬಂದಳು.
ದೂರದಲ್ಲಿದ್ದ ರಾಯ ಮೊದಲಾದವರು ಅಲ್ಲಿಂದ ಓಡಿಬಂದರು.
ಉರಿಯುತ್ತಿದ್ದ ಸೀರೆಯಲ್ಲಿ ನಿದಾನವಾಗಿ ನಡೆದುಬರುತ್ತಿರುವ ಚಿನ್ನಳನ್ನು ಕಂಡು ಅಯ್ಯೋ! ಅಯ್ಯೋ ಎಂದು ಅತ್ತಕಡೆ ಓಡಿದರು. ಅವರು ಓಡುವುದ ರೊಳಗಾಗಿ ಸೀರೆ ಉರಿದೇಹೋಯಿತು. ಚಿನ್ನಳು ಕೆಳಕ್ಕೆ ಬಿದ್ದಳು. ರಾಯನು ತನಗೆ ಬರುವ ಆಪತ್ತಿನ ಲಕ್ಷ್ಯವೂ ಇಲ್ಲದೆ ಹೋಗಿ ಅವಳನ್ನು ಹಿಡಿದುಕೊಂಡನು. ಅವಳ ಆಸೆ ಪೂರ್ಣವಾಗಿ ನೆರವೇರಿತು.
*****
ಮುಗಿಯಿತು

















