ಅಧ್ಯಾಯ ಹನ್ನೊಂದು
೧೯೫೭ರಲ್ಲಿ ತೆರೆಕಂಡ ‘ಸ್ಕೂಲ್ ಮಾಸ್ಟರ್’ ಚಿತ್ರವು ಅನೇಕ ರೀತಿಯಲ್ಲಿ ಹೊಸ ಪರಂಪರೆಗೆ ನಾಂದಿ ಹಾಡಿದ ಚಿತ್ರ. ಆ ವೇಳೆಗೆ ‘ಸಂಸಾರ ನೌಕ’, ‘ಮೊದಲ ತೇದಿ’ಯ ನಂತರ ಸಮಕಾಲೀನ ಸಮಾಜದ ವಸ್ತುವನ್ನೊಳಗೊಂಡ ಚಿತ್ರಗಳು ನಿರ್ಮಾಣಗೊಂಡಿದ್ದೇ ಕಡಿಮೆ. ಪೌರಾಣಿಕ, ಭಕ್ತಿ ಮತ್ತು ಜನಮಾನಸಕ್ಕೆ ಪರಿಚಿತವಾದ ಜಾನಪದ ಕತೆಗಳನ್ನು ಆಧರಿಸಿದ ಚಿತ್ರಗಳೇ ಹೆಚ್ಚು ತಯಾರಾಗುತ್ತಿದ್ದ ಕಾಲವದು. ಪ್ರೇಕ್ಷಕರ ಮನಸ್ಸು ಸಹ ಅಂತಹ ಚಿತ್ರಗಳ ಸ್ವೀಕಾರಕ್ಕೆ ಅಣಿಯಾಗಿತ್ತು. ಸಾಮಾಜಿಕ ಚಿತ್ರಗಳು ಸಹ ಹೆಚ್ಚು ಕಡಿಮೆ, ಪೌರಾಣಿಕ ಚಿತ್ರಗಳ ವಿಭಿನ್ನ ಆವೃತ್ತಿಯಂತಿದ್ದವು. ಅತಿಯಾದ ಭಾವುಕತೆ, ದೀರ್ಘ ಸಂಭಾಷಣೆ, ನಿಯತವಾಗಿ ಇಣುಕುವ ಹಾಡುಗಳು, ನಾಟಕೀಯ ತಿರುವುಗಳಿಂದಾಗಿ ಅವು ಸಾಮಾಜಿಕವಾಗಿರಲೀ, ಪೌರಾಣಿಕವಾಗಿರಲೀ ಏಕ ಎರಕದಲ್ಲೇ ತಯಾರಾದ ಮೂರ್ತಿಯಂತಿದ್ದವು. ಅಂತಹ ಸಂದರ್ಭದಲ್ಲಿ ಪಂತುಲು ಅವರ ‘ಸ್ಕೂಲ್ ಮಾಸ್ಟರ್’ ಮೊದಲ ಬಾರಿಗೆ ತನ್ನ ‘ಸಾಮಾಜಿಕ ವಾಸ್ತವ’ ನಿರೂಪಣೆಯೊಡನೆ ಪ್ರೇಕ್ಷಕರಿಗೆ ಹೊಸ ಅನುಭವಲೋಕವನ್ನೇ ತೆರೆದಿಟ್ಟಿತು.
ಇಲ್ಲಿ ‘ಸಾಮಾಜಿಕ ವಾಸ್ತವ’ ಎನ್ನುವ ಪರಿಕಲ್ಪನೆಯನ್ನು ಅದರ ಮೂಲ ಅರ್ಥದಿಂದ ಭಿನ್ನವಾದ ನೆಲೆಯಲ್ಲಿ ಅನ್ವಯಿಸಿ ಹೇಳುತ್ತಿದ್ದೇನೆ. ಸೋಷಿಯಲ್ ರಿಯಲಿಸಂ ಅಥವಾ ಸೋಷಿಯೋ ರಿಯಲಿಸಂ ಎನ್ನುವ ವಾದ ಅಥವಾ ಸಿದ್ಧಾಂತ ಯುರೋಪ್ ರಾಷ್ಟ್ರಗಳ ಕಾಣಿಕೆ. ಇದು ಹುಟ್ಟಿಕೊಂಡಿದ್ದು ಪ್ರಮುಖವಾಗಿ ಚಿತ್ರಕಲೆಯಲ್ಲಿ. ರೂಢಿಗತ ಪರಂಪರೆಗಳಿಗೆ ಪ್ರತಿರೋಧವೊಡ್ಡಿ ಹೊಸ ಸಾಮಾಜಿಕ ಭಾಷ್ಯ ಬರೆಯಲು ಆವಿರ್ಭವಿಸಿದ ಹೊಸ ಮಂತ್ರವದು. ಯುರೋಪಿನ ರೋಮ್ಯಾಂಟಿಕ್‌ವಾದಿಗಳು ಪ್ರಮುಖವಾಗಿ ಚಿತ್ರಕಲೆಯಲ್ಲಿ ತೇಲಿಬಿಟ್ಟ ಅತಿಯಾದ ಆದರ್ಶ ಮತ್ತು ಅತಿಶಯೋಕ್ತಿಯ ಶೈಲಿಗಳ ಪ್ರತಿರೋಧವಾಗಿ ಸಾಮಾಜಿಕ ವಾಸ್ತವ ಶೈಲಿ ಬೆಳೆಯಿತು. ಕೈಗಾರಿಕಾ ಕ್ರಾಂತಿಯಿಂದಾಗಿ ನಗರಗಳು ಬೆಳೆದವು. ನಗರಗಳಲ್ಲಿ ಕೊಳಚೆ ಪ್ರದೇಶಗಳು ವೃದ್ಧಿಯಾದವು. ಆಸ್ತಿ ಸಂಚಯನ ಕೆಲವೇ ಜನರಲ್ಲಿ ನಡೆಯಿತು. ಬಹುಸಂಖ್ಯಾತರು ಬಡತನದಲ್ಲಿ ಬೇಯುತ್ತಿದ್ದರು. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲೋಲ ಕಲ್ಲೋಲವುಂಟಾಯಿತು. ಗ್ರಾಮೀಣ ಪರಿಸರದ ಮಾನವ ಸಂಬಂಧಗಳು ಬಿರುಕುಬಿಟ್ಟವು. ವಲಸೆ, ನಿರುದ್ಯೋಗ ಶೋಷಣೆ ಇತ್ಯಾದಿಗಳಿಂದ ಮನುಷ್ಯ ಸಂಬಂಧಗಳು ಛಿದ್ರಗೊಂಡವು. ಕಲಾವಿದರು ಒಂದು ಬಗೆಯ ಸಾಮಾಜಿಕ ಪ್ರಜ್ಞೆಗೆ ನಿಷ್ಠರಾಗಿ ಸೌಂದರ್ಯೋಪಾಸನೆಗೆ ಮೀಸಲೆನಿಸಿದ್ದ ಕಲಾಪ್ರಕಾರದ ಮೂಲ ಉದ್ದೇಶಗಳನ್ನೇ ನಿರಾಕರಿಸಿದರು. ಕಣ್ಣಿಗೆ ಕಂಡ ಸಾಮಾಜಿಕ ಘಟನೆ, ವೃತ್ತಾಂತಗಳನ್ನು ಸಮಕಾಲೀನ ಇತಿಹಾಸದ ಹಿನ್ನೆಲೆಯಲ್ಲಿ ಬಿಡಿಸುತ್ತಾ ಹೋದರು. ಹಾಗಾಗಿ ಉಳ್ಳವರ, ಮಹಲಿನಲ್ಲಿ ವಾಸವಿದ್ದವರ ಸೌಂದರ್ಯವನ್ನು ಮತ್ತು ನಿಸರ್ಗ ಶ್ರೀಮಂತಿಕೆಯ ಸೊಬಗನ್ನು ಸೆರೆಹಿಡಿಯುತ್ತಿದ್ದ ಕಲೆಯು ನಿಧಾನವಾಗಿ ರಕ್ತಮಾಂಸ ತುಂಬಿಕೊಂಡು ಸಹಜ ಸ್ಥಿತಿಯಲ್ಲಿ ಬದುಕುವ ಜನಸಾಮಾನ್ಯರ ನೋವು, ಬೆವರು, ಉಸಿರಾಟಗಳನ್ನು ದಾಖಲಿಸಲಾರಂಭಿಸಿತು. ಸಾಮಾನ್ಯ ಜನರ ಬದುಕು ವಿಶಾಲ ಭಿತ್ತಿಯಲ್ಲಿ ಸ್ಥಾನ ಪಡೆಯಲಾರಂಭಿಸಿತು. ಶ್ರೀಸಾಮಾನ್ಯರ ಕತೆಯೇ ಈ ಪಂಥದ ಕಲಾವಿದರಿಗೆ ಆರಾಧನೆಯಾಯಿತು. ಇದು ಕ್ರಮೇಣ ಇತರೆ ಸೃಜನಶೀಲ ಪ್ರಕಾರಗಳಲ್ಲಿಯೂ ಸ್ಥಾನ ಪಡೆಯಲಾರಂಭಿಸಿತು. ಹಾಗೆ ನೋಡಿದರೆ ಇಟಲಿಯ ವಿಟೋರಿಯೋ ಡೀಸಿಕಾ ನಿರ್ದೇಶಿಸಿದ ’ಷೂ ಶೈನ್’ (೧೯೪೬), ‘ದಿ ಬೈಸಿಕಲ್ ಥೀಫ್’ (೧೯೪೮) ಚಿತ್ರಗಳು ಚಲನಚಿತ್ರರಂಗದಲ್ಲಿ ನವವಾಸ್ತವತೆಯನ್ನು ಹುಟ್ಟುಹಾಕುವ ಮುನ್ನವೇ ಹಾಲಿವುಡ್‌ನ ಜಾನ್‌ಫೋರ್ಡ್ ‘ಗ್ರೇಪ್ಸ್ ಆಫ್ ರಾತ್’ (೧೯೪೦) ಚಿತ್ರದ ಮೂಲಕ ಸಾಮಾಜಿಕ ವಾಸ್ತವತೆಯ ಚಿತ್ರಗಳನ್ನು ಉದ್ಘಾಟಿಸಿದ್ದರು.
ಆ ಇತಿಹಾಸ ಅತ್ತ ಇರಲಿ, ಬಿ.ಆರ್.ಪಂತುಲು ಅವರು ಪ್ರಜ್ಞಾಪೂರ್ವಕವಾಗಿ ಒಂದು ಹೊಸ ಪಂಥದ ಹರಿಕಾರರಾಗಲು ‘ಸ್ಕೂಲ್ ಮಾಸ್ಟರ್’ ಚಿತ್ರ ತೆಗೆದರು ಎಂದು ಹೇಳಲು ಪುರಾವೆಗಳು ದೊರೆಯುವುದಿಲ್ಲ. ಆದರೆ ಸಮಕಾಲೀನ ಸಂದರ್ಭದ ಒತ್ತಡಗಳು ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿರಲೂಬಹುದು. ಜೊತೆಗೆ ‘ಸಂಸಾರ ನೌಕ’ ಸಾಮಾಜಿಕ ನಾಟಕ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಅವರಿಗೆ ಸಾಮಾಜಿಕ ಚಿತ್ರಗಳ ಬಗ್ಗೆ ಮೊದಲಿನಿಂದಲೂ ಒಲವಿತ್ತೆಂಬುದು ಅವರು ನಿರ್ಮಿಸಿರುವ ಚಿತ್ರಗಳಿಂದಲೇ ತಿಳಿಯುತ್ತದೆ. ಬಾಕ್ಸ್ ಆಫೀಸ್ ದೃಷ್ಟಿಯಿಂದಲೇ ಅವರು ಬಹುತೇಕ ಚಿತ್ರಗಳನ್ನು ನಿರ್ಮಿಸಿದ್ದರೂ ಸಾಮಾಜಿಕ ಸಮಸ್ಯೆಗಳ ಬಗೆಗಿನ ಅವರ ತಹತಹ ಆರಿರಲಿಲ್ಲ ಎಂಬುದಕ್ಕೆ ಅವರು ತಮ್ಮ ಕೊನೆಯ ದಿನಗಳಲ್ಲಿ ಟಾಲ್‌ಸ್ಟಾಯ್‌ರವರ ಕಾದಂಬರಿ ‘ರಿಸರಕ್ಷನ್’ ಕೃತಿಯನ್ನು ಆಧರಿಸಿ ತೆಗೆದ ‘ಒಂದು ಹೆಣ್ಣಿನ ಕತೆ’ (೧೯೭೨) ಚಿತ್ರವೇ ಸಾಕ್ಷಿ. ಜೊತೆಗೆ ಪಂತುಲು ಅವರು ವ್ಯಾಸಂಗದ ನಂತರ ವೃತ್ತಿ ಜೀವನ ಆರಂಭಿಸಿದ್ದೇ ಶಾಲಾಮಾಸ್ತರರಾಗಿ. ಹಾಗಾಗಿ ಶಾಲಾಮಾಸ್ತರನ ಬದುಕನ್ನು ಆಧರಿಸಿ ಚಿತ್ರ ಮಾಡುವ ಯೋಚನೆ ಅವರಲ್ಲಿ ಸಹಜವಾಗಿ ಮೂಡಿರಬಹುದು.

‘ಸ್ಕೂಲ್ ಮಾಸ್ಟರ್’ ಚಿತ್ರವು ಶಿರವಾಡ್ಕರ್ ಅವರ ಮರಾಠಿ ಸಣ್ಣ ಕತೆ ’ವೈಷ್ಣವಿ’ಯನ್ನು ಆಧರಿಸಿದ ಚಿತ್ರ. ಸ್ವಾತಂತ್ರ್ಯ ಬಂದ ಹನ್ನೆರಡು ವರ್ಷಗಳ ನಂತರ ಬಿಡುಗಡೆಯಾದ ಚಿತ್ರ. ನೆಹರೂರವರ ಆರ್ಥಿಕ ಸಾಮಾಜಿಕ ನೀತಿಯಂತೆ ಹಳ್ಳಿಗಳಿಗೆ ವಿದ್ಯೆ ವಿಸ್ತರಣೆಯಾಗುವ ನೀತಿಗಳು ಜಾರಿಯಾಗಿದ್ದವು. ಪಟ್ಟಣಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದವು. ವಿದ್ಯಾ ಪ್ರಸಾರವೆಂಬುದು ಆದರ್ಶಗಳನ್ನು ಮೈಗೂಡಿಸಿಕೊಂಡ ನೀತಿಯಾಗಿತ್ತು. ಇಂಥ ಸಂದರ್ಭದಲ್ಲಿ ರಂಗಣ್ಣ ಎಂಬ ಸ್ಕೂಲ್ ಮಾಸ್ಟರ್ ವಿದ್ಯೆಯಿಂದ ವಂಚಿತವಾದ ಹಳ್ಳಿಯೊಂದಕ್ಕೆ ಶಾಲಾಶಿಕ್ಷಕನಾಗಿ ಆಗಮಿಸುತ್ತಾನೆ. ಹಳ್ಳಿಯ ಊಳಿಗಮಾನ್ಯ ಶಕ್ತಿಗಳ ಜೊತೆಯಲ್ಲೇ ಹೋರಾಡುತ್ತಾ ರಂಗಣ್ಣ ಆದರ್ಶ ಶಿಕ್ಷಕನಾಗಿ ವಿದ್ಯಾ ಪ್ರಸಾರದಲ್ಲಿ ತೊಡಗುತ್ತಾನೆ. ಗಂಡು ಮಕ್ಕಳಿಬ್ಬರೂ ವಿದ್ಯಾವಂತರಾಗಿ ಪಟ್ಟಣ್ಣಕ್ಕೆ ತೆರಳುತ್ತಾರೆ. ನಿವೃತ್ತನಾದ ರಂಗಣ್ಣನಿಗೆ ಕಷ್ಟದ ದಿನಗಳು ಆರಂಭವಾಗುತ್ತವೆ. ಯಾವುದರ ಪ್ರಸಾರದಿಂದ ಮಾನವಕಲ್ಯಾಣ ಸಾಧ್ಯ ಎಂದು ರಂಗಣ್ಣ ನಂಬಿದ್ದನೋ ಅದರಿಂದಲೇ ಕೌಟುಂಬಿಕ ವಿಘಟನೆ ಆರಂಭವಾಗುತ್ತದೆ. ಎಲ್ಲರಿಗೂ ವಿದ್ಯೆ ಕಲಿಸಿದ ರಂಗಣ್ಣ ತನ್ನ ಮಕ್ಕಳ ಅನಾದರದಿಂದಲೇ ವಾಸ್ತವಬದುಕಿನ ಬಹುದೊಡ್ಡ ಪಾಠ ಕಲಿಯುತ್ತಾನೆ. ಅದು ತಾನು ಶಾಲಾ ಕೊಠಡಿಯೊಳಗೆ ಕಲಿಸುತ್ತಿದ್ದ ಪಾಠಗಳಿಗಿಂತ ಭಿನ್ನವಾದದ್ದು. ಆದರ್ಶ-ವಾಸ್ತವಗಳ ತಾಕಲಾಟದಲ್ಲಿ ಮಾನವ ಸಂಬಂಧಗಳು ಮುರಿದು ಬೀಳುವ ಘೋರತೆಯನ್ನು ತಣ್ಣಗೆ ಅನುಭವಿಸುತ್ತಾ ಕೊನೆಗೆ ಒಂದು ವಿಚಿತ್ರ ಸನ್ನಿವೇಶದಲ್ಲಿ ಬದುಕಿನ ನೆಮ್ಮದಿ ಕಂಡುಕೊಳ್ಳುತ್ತಾನೆ. ಮತ್ತೆ ಚಿತ್ರ ವಾಸ್ತವದ ಬಿಸಿಲಿನಿಂದ ರೊಮ್ಯಾಂಟಿಕ್ ನೆರಳಿಗೆ ಜಾರಿದಂತೆ ಕಂಡರೂ ಅದು ಆ ಕಾಲಕ್ಕೆ ಎತ್ತಿದ ಪ್ರಶ್ನೆಗಳು, ನಿರ್ವಹಿಸಿದ ರೀತಿ ಇಂದಿಗೂ ತಾಜಾತನದಿಂದ ನಮ್ಮನ್ನು ಚಿಂತೆಗೆ ಹಚ್ಚುತ್ತವೆ.
ವಿಮರ್ಶಕ ದಿವಂಗತ ಡಿ.ಆರ್.ನಾಗರಾಜ್‌ರವರು ಈ ಚಿತ್ರ ಕುರಿತು ಸುದೀರ್ಘವಾದ ಲೇಖನವನ್ನೇ ತಮ್ಮ ‘ಸಾಹಿತ್ಯ ಕಥನ’ ಕೃತಿಯಲ್ಲಿ ಪ್ರಕಟಿಸಿದ್ದಾರೆ. ಅವರ ಪ್ರಕಾರ ಇದು ಕೌಟುಂಬಿಕ ವಿಘಟನೆಯ ಕನ್ನಡದ ಒಂದು ಮಹಾಕಥನ. ಅವರು ಹೇಳುವುದು ವಸ್ತುವಿನ ಮಟ್ಟಕ್ಕೆ ನಿಜ. ಆ ಲೇಖನ ಅಷ್ಟಕ್ಕೆ ಸೀಮಿತವಾಗಿದೆ. ಆ ಲೇಖನದಲ್ಲಿ ಈ ಚಿತ್ರವು ಸಿನಿಮಾ ಭಾಷೆ, ಅದರ ವ್ಯಾಕರಣ ಹಾಗೂ ಸಿನಿಮಾದ ಪರಿಕರಗಳನ್ನು ಬಳಸಿಕೊಂಡಿರುವ ಮತ್ತು ನಿರ್ವಹಿಸಿರುವ ಬಗ್ಗೆ ಹೆಚ್ಚಿನ ಅಧ್ಯಯನವಾಗಿಲ್ಲ. ಚಿತ್ರಕತೆ, ದೃಶ್ಯ ಸಂಯೋಜನೆ, ಸಂಭಾಷಣೆ, ಹಾಡು ಮತ್ತು ಸಂಗೀತದ ಮೇಲೆ ನಿರ್ದೇಶಕರು ಅಸಾಧಾರಣ ನಿಯಂತ್ರಣ ಸಾಧಿಸಿರುವುದು ಚಿತ್ರವನ್ನು ವೀಕ್ಷಿಸುವಾಗಲೇ ಅನುಭವಕ್ಕೆ ಬರುತ್ತದೆ. ಆ ಊರು ವಿದ್ಯೆಯಿಂದ ವಂಚಿತವಾಗಿದೆ ಎಂಬ ವಾಸ್ತವತೆಯನ್ನು ಶಾಲೆಯ ಜವಾನ (ಬಾಲಕೃಷ್ಣ) ಮತ್ತು ಶಿಕ್ಷಕ (ಪಂತುಲು) ಅವರ ನಡುವಿನ ಸಂಭಾಷಣೆಯೇ ಸೂಚಿಸಿಬಿಡುತ್ತದೆ. ‘ಪಡಸಾಲೆಯಲ್ಲಿ ಗಲಾಟೆ ಮಾಡ್ತವೆ ಅಂತಾ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ’ ಎಂಬ ಜವಾನ(ಬಾಲಣ್ಣ)ನ ಮಾತು ನಗೆಯುಕ್ಕಿಸಿದರೂ ಅದು ಸಮಕಾಲೀನ ಸ್ಥಿತಿಗೆ ಹಿಡಿದ ಕನ್ನಡಿ. ಹಾಗೆಯೇ ಶಾಲೆಯ ಮಕ್ಕಳಿಗೆ ಪ್ರಾರ್ಥನೆಯ ತಿಳಿವಳಿಕೆ ಇಲ್ಲದಿರುವುದು ಮತ್ತು ಮಾಸ್ತರು ಅದನ್ನು ಪರಿಚಯಿಸುವುದು ಅಂದಿನ ಸಾಮಾಜಿಕ ಆಶಯಗಳ ವ್ಯಾಖ್ಯಾನ. ಇಲ್ಲಿನ ಹಾಡುಗಳ ಬಳಕೆ ಚಿತ್ರದ ಓಟಕ್ಕೆ ಪೂರಕವಾಗಿ ಬರುತ್ತದೆಯೇ ಹೊರತು ಎಲ್ಲಿಯೂ ದೃಶ್ಯಗಳಿಗೆ ಅಡ್ಡಿಯಾಗುವುದಿಲ್ಲ. ನರಸಿಂಹರಾಜು ಅವರು ಹಾಡುವ ‘ನಾನೂ ನೀನು ಜೋಡಿ’ ಹಾಡು ಮತ್ತು ಹಾಡಿನ ಹಿನ್ನೆಲೆಯಲ್ಲಿ ರಂಗಣ್ಣನ ಮೂವರು ಮಕ್ಕಳು ಮರಳಿ ಹಳ್ಳಿಗೆ ಬರುವಾಗಿನ ಭಾವ, ವರ್ತನೆ, ಹತಾಶೆಗಳನ್ನು ಮತ್ತು ಅವರು ಆಗಮಿಸುವ ಮೂರು ವಿಧಾನಗಳನ್ನು ಕಟ್ಟಿಕೊಡುತ್ತದೆ. ಆದರೆ ಆ ಹಾಡಿನ ನಂತರವೇ ವಯಸ್ಸಾದ ಜನ್ಮದಾತರ ಜೋಡಿ ಒಡೆದು ಮಕ್ಕಳಲ್ಲಿ ಹಂಚಿ ಹೋಗುವ ದುರಂತ ಘಟಿಸುತ್ತದೆ. ಹಾಡು ಬದುಕಿನ ಕ್ರೂರ ವ್ಯಂಗ್ಯಕ್ಕೆ ಮುನ್ನುಡಿಯಾಗಿ ಬರುವುದು ಚಿತ್ರದ ಸಾರ್ಥಕ ದೃಶ್ಯಗಳಲ್ಲೊಂದು.

‘ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿ ಅನೇಕ ಭಾವಪೂರ್ಣ ಸನ್ನಿವೇಶಗಳಿವೆ. ಆದರೆ ಅವೆಲ್ಲವನ್ನೂ ಸಾಕಷ್ಟು ’ಅಂಡರ್‌ಪ್ಲೇ’ ಮಾಡಿದ್ದಾರೆ. ರಂಗಣ್ಣ ನಿವೃತ್ತನಾದ ನಂತರ ಬೀಳ್ಕೊಡುಗೆ ಸಮಾರಂಭದಲ್ಲಿ ಹಾಕಿಸಿಕೊಂಡ ಹಾರದೊಡನೆ ಮನೆಗೆ ಬರುವ ದೃಶ್ಯ; ಸರ್ಕಾರಿ ಉದ್ಯೋಗವು ನಿವೃತ್ತಿಯ ಮೂಲಕ ಬದುಕಿನ ತೀವ್ರಾಸಕ್ತಿಯ ಕಾಯಕಕ್ಕೆ ಹೇರುವ ನಿರ್ಬಂಧವನ್ನು ಅರಿತು ವಿದಾಯದ ಹಾರತುರಾಯಿಯೊಡನೆ ವಿಷಾದವನ್ನು ನುಂಗಿಕೊಂಡ ರಂಗಣ್ಣನ ಒಳತೋಟಿ; ಹೆಂಡತಿಯಿಂದ ಬಂದ ಕಾಗದವನ್ನು ಓದುವ ಅವಸರದಲ್ಲಿ ಕನ್ನಡಕವನ್ನೇ ಒಡೆದುಕೊಂಡ ರಂಗಣ್ಣ, ಒಡೆದ ಗಾಜಿನ ಚೂರಿನಿಂದಲೇ ಪತ್ರವನ್ನು ಓದುವುದು; ಗಂಡ ಹೆಂಡತಿಯರು ರೈಲು ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಭೇಟಿಯಾದಾಗ ಆಲಂಗಿಸಿಕೊಳ್ಳುವ ದೃಶ್ಯ ಸುತ್ತಲಿನ ಪ್ರಯಾಣಿಕರಲ್ಲಿ ಸೋಜಿಗ ತರುವುದು- ಇವೆಲ್ಲವನ್ನೂ ಪಂತುಲು ಅವರು ಭಾವತೀವ್ರತೆಯಿಲ್ಲದೇ ತಣ್ಣನೆ ಗಾಢವಾಗಿ ತಟ್ಟುವಂತೆ ನಿರೂಪಿಸಿದ್ದಾರೆ. ಜೊತೆಗೆ ವಿದ್ಯೆಯ ಫಲಿತಗಳು ಗ್ರಾಮೀಣ ಪರಿಸರಕ್ಕೆ ವಿಮುಖವಾಗುವ, ನಗರ ಪರಿಸರದಲ್ಲಿ ಗ್ರಾಮೀಣ ಚೈತನ್ಯಗಳು ಪಡುವ ಕೀಳರಿಮೆಯ ಬವಣೆ, ಆಗತಾನೆ ಸಾಮಾಜಿಕ ಪಿಡುಗಾಗಿ ತನ್ನ ಬೇರುಗಳನ್ನು ಬಿಡುತ್ತಿದ್ದ ವರದಕ್ಷಿಣೆ ಪದ್ಧತಿ, ನಿವೃತ್ತಿಯ ನಂತರದಲ್ಲಿ ವಯಸ್ಸಾದ ಜನ್ಮದಾತರು ಎದುರಿಸುವ ಪರಕೀಯತೆ ಇವೆಲ್ಲವುಗಳನ್ನೂ ದೃಶ್ಯ ಮಾಧ್ಯಮದಲ್ಲಿ ಸಮುಚಿತವಾಗಿ ಹಿಡಿದಿರುವುದರಿಂದಲೇ ‘ಸ್ಕೂಲ್ ಮಾಸ್ಟರ್’ ಸಾಮಾಜಿಕ ವಾಸ್ತವತೆಯನ್ನು ಗಾಢವಾಗಿ ದಾಖಲಿಸಿದ ಪ್ರಥಮ ಪ್ರಯತ್ನವಾಗಿ ಕಾಣುತ್ತದೆ.
‘ಸ್ಕೂಲ್ ಮಾಸ್ಟರ್’ ಚಿತ್ರವು ಬಿಡುಗಡೆಯಾದ ನಂತರ ಅಪಾರ ಜನಪ್ರಿಯತೆ ಪಡೆಯಿತು. ಮೆಜೆಸ್ಟಿಕ್ ಏರಿಯಾದಲ್ಲಿ ಇದ್ದ ಗೀತಾ (ಮೆಜೆಸ್ಟಿಕ್ ಏರಿಯಾದಲ್ಲಿ ಕೆಡವಲಾದ ಚಿತ್ರಮಂದಿರ) ಟಾಕೀಸ್‌ನಲ್ಲಿ ಮೂವತ್ತಮೂರು ವಾರಗಳ ಕಾಲ ನಡೆದು ಹೊಸ ದಾಖಲೆ ಬರೆಯಿತು. ರಾಷ್ಟ್ರಪ್ರಶಸ್ತಿ ಪುರಸ್ಕಾರವನ್ನು ಸಹಜವಾಗಿಯೇ ಪಡೆಯಿತು.
‘ಸ್ಕೂಲ್ ಮಾಸ್ಟರ್’ ಕೃತಿಯು ಕನ್ನಡ ಚಿತ್ರೋದ್ಯಮ ಭಾರತೀಯ ಚಿತ್ರರಂಗಕ್ಕೆ ಕೊಟ್ಟ ದೊಡ್ಡ ಕೊಡುಗೆಗಳಲ್ಲೊಂದು ಎಂಬ ಬಗ್ಗೆ ಯಾರ ತಕರಾರೂ ಇರದು.
***
ಸೈಡ್ ರೀಲ್
* ‘ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿ ಹಳ್ಳಿ ಶಾಲೆಗೆ ಬರುವ ರಂಗಣ್ಣ ಅಲ್ಲಿಯ ವಿದ್ಯಾರ್ಥಿಗಳಿಗೆ ಪ್ರಾರ್ಥನೆಯ ಪರಿಚಯವಿಲ್ಲದೇ ಇರುವುದನ್ನು ಮನಗಾಣುತ್ತಾನೆ. ಅದಕ್ಕಾಗಿ ಶಾಲೆಯ ಮೊದಲ ದಿನದಂದೇ ಸೋಸಲೆ ಅಯ್ಯಾಶಾಸ್ತ್ರಿಗಳು ರಚಿಸಿದ ‘ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ’ ಗೀತೆಯನ್ನು ಹಾಡಿಸುತ್ತಾನೆ. ಈ ಗೀತೆ ಹಳೇ ಮೈಸೂರಿನ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿ ಜನಪ್ರಿಯವಾಗಿತ್ತು. (ಇದು ಸೋಸಲೆ ಅಯ್ಯಾಶಾಸ್ತ್ರಿಯವರ ರಚನೆಯೆಂಬುದು ಆಮೆಲೆ ತಿಳಿಯಿತು). ಮಕ್ಕಳ ಮಗ್ಗಿ ಪುಸ್ತಕದಲ್ಲಿಯೂ ಈ ಗೀತೆ ಶಾಲೆಯ ಪ್ರಾರ್ಥನೆ ಎಂದೇ ಮುದ್ರಣವಾಗುತ್ತಿತ್ತು. ಹೀಗೆ ಕನ್ನಡದ ಸಂಸ್ಕೃತಿಯ ಭಾಗವಾಗಿದ್ದ ಗೀತೆಯೊಂದನ್ನು ಸ್ವತ: ಸ್ಕೂಲ್ ಮಾಸ್ಟರ್ ಆಗಿಯೇ ವೃತ್ತಿ ಬದುಕು ಆರಂಭಿಸಿದ್ದ ಪಂತುಲು ಅಳವಡಿಸಿದ್ದು ವಿಶೇಷವೆನಿಸಿತ್ತು.
* ಈ ಚಿತ್ರದಲ್ಲಿ ಮಕ್ಕಳು ಅಭಿನಯಿಸುವ ’ಲಂಕಾದಹನ ನಾಟಕ’ವನ್ನು ಪಂತುಲು ಅಳವಡಿಸಿದ್ದಾರೆ. ಪಂತುಲು ಅವರು ಬೆಳ್ಳಾವೆಯವರ ನಾಟಕದ ಸಂಭಾಷಣೆ, ಕಂದ ಪದ್ಯಗಳನ್ನೇ ಬಳಸಿಕೊಂಡಿದ್ದಾರೆ. ನಾಟಕದಲ್ಲಿ ಸೀತಾನ್ವೇಷಣೆ ಮತ್ತು ಅದೇ ವೇಳೆ ಊರಿನ ಪಂಚಾಯ್ತಿ ಅಧ್ಯಕ್ಷ ನಾಗಪ್ಪ (ಡಿಕ್ಕಿ ಮಾಧವರಾವ್) ಅಪಹರಿಸಿದ ಶಾಲಾ ಹಣವನ್ನು ಪತ್ತೆಮಾಡುವ ಪ್ರಕರಣಗಳನ್ನು ಅಲ್ಲಿ ಜೋಡಿಸಿ ನಿರೂಪಣೆಯಲ್ಲಿ ನಾವಿನ್ಯ ತೋರಿದ್ದಾರೆ.
* ವಿಚಿತ್ರವೆಂದರೆ ಅಮಿತಾಭ್ ಬಚ್ಚನ್ ಮತ್ತು ಹೇಮಾಮಾಲಿನಿ ಜೋಡಿಯ ಯಶಸ್ವಿ ಚಿತ್ರ ‘ಬಾಗ್‌ಬಾನ್’ ನಮ್ಮ ‘ಸ್ಕೂಲ್ ಮಾಸ್ಟರ್’ ಕತೆಯನ್ನೆ ಆಧರಿಸಿದೆ. ಆದರೆ ಅದರ ಶೀರ್ಷಿಕೆಯಲ್ಲಿ ಎಲ್ಲಿಯೂ ಪ್ರಸ್ತಾಪವಿಲ್ಲ. ಹಿಂದೀ ಚಿತ್ರದಲ್ಲಿ ಸ್ಕೂಲ್ ಮಾಸ್ಟರ್ ಪಾತ್ರಕ್ಕೆ ಬದಲು ಲೆಕ್ಕಾಧಿಕಾರಿಯೊಬ್ಬನ ಪಾತ್ರವನ್ನು ಸೃಷ್ಟಿಸಲಾಗಿದೆ. ವರದಕ್ಷಿಣೆಯ ಸಮಸ್ಯೆ ಕೈಬಿಡಲಾಗಿದೆ. ಮಕ್ಕಳಿಂದ ದೂರವಾದ ನಂತರ ವಿಚಿತ್ರ ಸಂದರ್ಭದಲ್ಲಿ ಒಂದಾಗುವ ಗಂಡ ಹೆಂಡತಿಯರಿಗೆ ಆಸರೆ ನೀಡುವವನು ಬಾಲ್ಯದಲ್ಲಿ ಉಪಕೃತನಾದ ಬಾಲಕನ ಕತೆಯು ಸ್ವಲ್ಪ ಮಾರ್ಪಾಟಿನೊಂದಿಗೆ ಹಾಗೆಯೇ ಉಳಿದಿದೆ. ಒಡೆದ ಕನ್ನಡಕದ ಗಾಜಿನಿಂದ ಹೆಂಡತಿಯ ಪತ್ರವನ್ನು ಓದುವ ದೃಶ್ಯವನ್ನು ಹಾಗೆಯೇ ಅಳವಡಿಸಲಾಗಿದೆ.
* ಮತ್ತೂ ವಿಚಿತ್ರವೆಂದರೆ ವಿಜಯಲಕ್ಷಿ ಸಿಂಗ್ ಅವರ ನಿರ್ದೇಶನದ ‘ಈ ಬಂಧನ’ ಚಿತ್ರವೂ ಸಹ ‘ಬಾಗ್‌ಬಾನ್’ನ ಮರುಸೃಷ್ಟಿಯೇ. ಆದರೆ ಈ ಚಿತ್ರವೂ ಮೂಲವನ್ನು ಸ್ಮರಿಸಲು ಯಾಕೋ ಹಿಂಜರಿದಿದೆ!
* ಬಿ.ಆರ್.ಪಂತುಲು ಅವರು ಶಿಷ್ಯ ಪುಟ್ಟಣ್ಣ ಕಣಗಾಲರಿಂದ ತಮ್ಮ ನಿರ್ಮಾಣದ ಚಿತ್ರವೊಂದನ್ನು ನಿರ್ದೇಶಿಸಬೇಕೆಂದು ಆಶಿಸಿದ್ದರು. ಬದುಕಿದ್ದಾಗ ಅವರ ಆಸೆ ನೆರವೇರಲಿಲ್ಲ. ಆದರೆ ಅವರ ನಿಧನಾನಂತರ ಕಣಗಾಲರು ಬಿ.ಜಿ.ಎಲ್.ಸ್ವಾಮಿ ಅವರ ಕೃತಿಯಾಧರಿಸಿ ‘ಕಾಲೇಜು ರಂಗ’ ಚಿತ್ರವನ್ನು ಪದ್ಮಿನಿ ಪಿಕ್ಚರ್ಸ್ ಸಂಸ್ಥೆಗಾಗಿ ನಿರ್ದೇಶಿಸಿದರು. ಇದು ಸಹ ಕಾಲೇಜು ಶಿಕ್ಷಕನೊಬ್ಬನ ಬದುಕು ಕುರಿತ ಚಿತ್ರ. ‘ಸ್ಕೂಲ್ ಮಾಸ್ಟರ್’ ಬದುಕು ಮತ್ತು ವಿದ್ಯೆಯನ್ನು ಕುರಿತ ಚಿತ್ರವಾದರೆ, ‘ಕಾಲೇಜು ರಂಗ’ ಒಂದು ಶಿಕ್ಷಣ ಸಂಸ್ಥೆಯ ರಾಜಕೀಯ ಕುತಂತ್ರ, ಅಧಿಕಾರಶಾಹಿಯ ಕಪಟಗಳನ್ನು ಬಿಂಬಿಸಲು ಮಾಡಿದ ಪ್ರಯತ್ನ. ಪುಟ್ಟಣ್ಣನವರು ಜನಪ್ರಿಯತೆಯ ಶಿಖರದಲ್ಲಿರುವಾಗಲೇ ತೆಗೆದ ಈ ಚಿತ್ರ ಯಾವುದೇ ಘನೋದ್ದೇಶವನ್ನಿಟ್ಟುಕೊಂಡ ಚಿತ್ರವೆನಿಸಲೇ ಇಲ್ಲ. ಕಾಲೇಜು ಪ್ರೊಫೆಸರ್ ಒಬ್ಬರು ಪ್ರಾಥಮಿಕ ಶಾಲೆಯ ಮಾಸ್ತರರ ಮುಂದೆ ಮಂಡಿಯೂರಿದ ಚಿತ್ರ ಮೂಡುತ್ತದೆ- ಎರಡೂ ಚಿತ್ರಗಳನ್ನೂ ಹೋಲಿಸಿದರೆ.
* ಪದ್ಮಿನಿ ಪಿಕ್ಚರ್ಸ್ ಮತ್ತು ಬಿ.ಆರ್.ಪಂತುಲು ಎಂದ ತಕ್ಷಣ ನೆನಪಾಗುವುದು ‘ಸ್ಕೂಲ್ ಮಾಸ್ಟರ್’. ಪಂತುಲು ಅವರು ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರ ನಿರ್ಮಿಸಿದ್ದಾರೆ. ಕನ್ನಡದ ‘ಶ್ರೀಕೃಷ್ಣದೇವರಾಯ’, ತಮಿಳಿನ ‘ಕಪ್ಪಲೋಟ್ಟಿಯ ತಮಿಳನ್’, ‘ವೀರಪಾಂಡ್ಯ ಕಟ್ಟಾಬೊಮ್ಮನ್’ ಮತ್ತು ‘ಕರ್ಣನ್’ನಂಥ ಬಹು ತಾರಾಗಣದ ಅದ್ಧೂರಿ ಚಿತ್ರಗಳನ್ನು ನಿರ್ಮಿಸಿದ್ದರೂ ಅವರು ಚಿರಸ್ಥಾಯಿಯಾಗಿರುವುದು ‘ಸ್ಕೂಲ್ ಮಾಸ್ಟರ್’ ಚಿತ್ರದಿಂದಲೇ. ಅದೊಂದು ಆಧುನಿಕ ಅಭಿಜಾತ ಕೃತಿ.

* ಪಂತುಲು ನಿರ್ಮಿಸಿ ನಿರ್ದೇಶಿಸಿದ ಶಿವಾಜಿ ಗಣೇಶನ್- ಚಂದ್ರಬಾಬು ಜೋಡಿಯ ’ಶಭಾಷ್ ಮೀನಾ’ (೧೯೫೮) ತಮಿಳು ಚಿತ್ರವು ಅಪಾರ ಯಶಸ್ಸು ಕಂಡ ಚಿತ್ರ. ಸಾಹುಕಾರನ ಮಗ ಮತ್ತು ಬಡ ಸ್ನೇಹಿತ ತಮ್ಮ ಸ್ಥಾನಗಳನ್ನು ಅದಲು ಬದಲು ಮಾಡಿಕೊಂಡು ಪಡಿಪಾಟಲು ಪಡುವ ಸಂಪೂರ್ಣ ಹಾಸ್ಯಮಯ ಚಿತ್ರ. ಇದನ್ನೇ ಅವರು ’ಅಳಿಯ-ಗೆಳೆಯ’ (೧೯೭೧) ಎಂಬ ಹೆಸರಿನಲ್ಲಿ ಕನ್ನಡದಲ್ಲಿ ತಯಾರಿಸಿದರು. (ನಾಯಕನ ಪಾತ್ರಕ್ಕಿಂತ ಪೋಷಕ ಪಾತ್ರವೇ ಹೆಚ್ಚು ಪ್ರಧಾನವಾಗಿದ್ದ ಕಾರಣ ಶಿವಾಜಿ ಗಣೇಶನ್ ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ವಹಿಸಲು ರಾಜ್ ನಿರಾಕರಿಸದರೆಂಬ ವದಂತಿಗಳಿದ್ದವು. ಹಾಗಾಗಿ ಗಂಗಾಧರ್ ನಾಯಕರಾದರು) ಆದರೆ ತೊಂಬತ್ತರ ದಶಕದಲ್ಲಿ ಇದೇ ಕತೆಯನ್ನು ಅಲ್ಪ ಬದಲಾವಣೆಗಳೊಡನೆ ತಮಿಳಿನಲ್ಲಿ ’ಉಳ್ಳತ್ತೈ ಅಳ್ಳಿತ್ತಾ’ ಎಂಬ ಚಿತ್ರವನ್ನು ಕಾರ್ತಿಕ್, ಗೌಂಡಮಣಿ ತಾರಾಗಣದಲ್ಲಿ ತಮಿಳಿನಲ್ಲಿ ತಯಾರಿಸಿದರು. ಅದನ್ನೇ ಆಧರಿಸಿ ಎಸ್. ನಾರಾಯಣ್ ಅವರು ’ಗಡಿಬಿಡಿ ಅಳಿಯಂದಿರು’ ಚಿತ್ರವನ್ನು ನಿರ್ದೇಶಿಸಿದರು!
* ತಮ್ಮ ಚಿತ್ರಗಳಲ್ಲಿ ದಾಸರ ಪದಗಳನ್ನು ಬಳಸುವುದು ಪಂತುಲು ಅವರಿಗೆ ಪ್ರಿಯವಾದ ವಿಷಯ. ಹಾಗಾಗಿ ಅನೇಕ ದಾಸರ ಪದಗಳು ಅವರ ಚಿತ್ರದಲ್ಲಿ ಸಮುಚಿತವಾಗಿ ಅಳವಡಿಕೆಯಾಗಿವೆ. ’ಯಾರಿಗೆ ಯಾರುಂಟು ಎರವಿನ ಸಂಸಾರ…’ (ಗಾಳಿಗೋಪುರ), ‘ಮತಿಬೇಕು ಸುಗಣವತಿಬೇಕು…’ (ದುಡ್ಡೇ ದೊಡ್ಡಪ್ಪ), ’ಧರ್ಮವೆ ಜಯವೆಂಬ ದಿವ್ಯಮಂತ್ರ…’ (ಅಮ್ಮ), ’ಕೃಷ್ಣನ ಹೆಸರೇ ಲೋಕಪ್ರಿಯ…’ ’ಅಪರಾಧಿ ನಾನಲ್ಲ…’ ’ನಗೆಯು ಬರತಿದೆ, ಎನಗೆ ನಗೆಯು ಬರುತಿದೆ…’ (ಶ್ರೀಕೃಷ್ಣದೇವರಾಯ), ‘ಮಣ್ಣಿಂದ ಕಾಯ ಮಣ್ಣಿಂದ…’ (ಅಳಿಯ ಗೆಳೆಯ) ಮುಂತಾದ ಚಿತ್ರಗಳಲ್ಲಿ ದಾಸರ ಪದಗಳನ್ನು ಅಳವಡಿಸಿದ್ದಾರೆ. ದಾಸರ ಪದದ ಧಾಟಿಯ ಹಾಡುಗಳನ್ನು ’ಸ್ಕೂಲ್ ಮಾಸ್ಟರ್’ (ಭಾಮೆಯ ನೋಡಲು ತಾ ಬಂದ…), ’ಸಾಕುಮಗಳು’ (ಬಾಬೇಗ ಮನಮೋಹನ…) ಹಾಗೂ ಅಕ್ಕನ ವಚನವನ್ನು ’ಕಿತ್ತೂರು ಚೆನ್ನಮ್ಮ’ (ತನು ಕರಗದವರಲ್ಲಿ…) ಚಿತ್ರದಲ್ಲಿ ಅಳವಡಿಸಿದ್ದಾರೆ.
* ಪದ್ಮಿನಿ ಪಿಕ್ಚರ್ಸ್‌ರವರ ಮೊದಲ ಚಿತ್ರ ’ಮೊದಲ ತೇದಿ’ ಚಿತ್ರದ ಮೂಲಕ ಚಿ. ಉದಯಶಂಕರ್ ಅವರು ಸಹಾಯಕ ನಿರ್ದೇಶಕ ಮತ್ತು ನಟರಾಗಿ ಚಿತ್ರರಂಗ ಪ್ರವೇಶಿಸಿದರು. ಅದೇ ಚಿತ್ರದಲ್ಲಿ ತಮಿಳು ನಟ ಶಿವಾಜಿ ಗಣೇಶನ್ ಸಣ್ಣ ಪಾತ್ರ ನಿರ್ವಹಿಸಿದ್ದರು.ಮುಂದೆ ಪಂತುಲು ನಿರ್ದೇಶನದ ’ಮಕ್ಕಳ ರಾಜ್ಯ’ ಮತ್ತು ‘ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿಯೂ ಶಿವಾಜಿ ಅಭಿನಯಿಸಿದ್ದರು. ಅಲ್ಲದೆ ಸಂಗೀತ ನಿರ್ದೇಶಕ ಟಿ.ಜಿ. ಲಿಂಗಪ್ಪ ಮತ್ತು ಪಂತುಲು ಅವರ ದೀರ್ಘ ಕಾಲದ ಬೆಸುಗೆ ಆರಂಭವಾದದ್ದೇ ಈ ಚಿತ್ರದ ಮೂಲಕ.
*****



















