Home / ಕಥೆ / ಕಾದಂಬರಿ / ಅವಳ ಕತೆ – ೧೬

ಅವಳ ಕತೆ – ೧೬

ಅಧ್ಯಾಯ ಹದಿನಾರು

ಆಚಾರ್ಯರೂ, ರನ್ನಳೂ ಸುದ್ದಿಯನ್ನು ತಿಳಿದು ಗಾಬರಿಗಾಬರಿಯಾಗಿ ಆಶ್ರಮಕ್ಕೆ ಓಡಿಬಂದರು. ಆಚಾರ್ಯರು ನೋಡುತ್ತಾರೆ. ಯತಿ ಇನ್ನಾರೂ ಅಲ್ಲ. ಶಾಂಭವಾನಂದ.

ಅಲ್ಲಿ ಆಚಾರ್ಯರನ್ನು ಕಂಡು ಅವರಿಗೂ ಆಶ್ಚರ್ಯವಾಯಿತು. “ಇದೇನು ಶಾಮಣ್ಣ ; ಇಲ್ಲಿ ಬಂದಿರುವೆ ? ಎಂದು ವಿಶ್ವಾಸದಿಂದ ಕೇಳಿದರು. ಆ ವೇಳೆಗೆ ಚಿನ್ನಳು ಎದ್ದು ಕುಳಿತಿರುವುದನ್ನು ಕಂಡು ಧೈರ್ಯಗೊಂಡು ಹೇಳಿದರು. “ನೀನು ಹೇಳಿದ್ದಹಾಗೆ ಗೋಲ್ಕೊಂಡದವರಿಗೂ, ವಿಜಯನಗರದವರಿಗೂ ಸಂಧಿಯಾಗಿದೆ. ಆ ಸಂಧಿಯನ್ನು ಸಾಧಿಸುವುದಕ್ಕಾಗಿ ನಾವೆಲ್ಲ ಗೋಲ್ಕೊಂಡಕ್ಕೆ ಹೋಗಿದ್ದೆವು.”

“ಹಾಗಾದರೆ ಈಕೆ?”

“ನಮ್ಮ ಚಿನ್ನಮ್ಮ.”

ಶಾಂಭವಾನಂದರು ಕಣ್ಮುಚ್ಚಿ ಕೊಂಡು ಒಂದುಗಳಿಗೆ ಕುಳಿತುಕೊಂಡಿದ್ದು ಗಹಗಹಿಸಿ ನಕ್ಕುಬಿಟ್ಟರು ; ಹುಚ್ಚರಹಾಗೆ ಎದ್ದು ಕುಣಿದಾಡಿದರು. ಯಾರಿಗೂ ಇದು ಏಕೆ ಎಂಬುದು ಅರ್ಥವಾಗಲೊಲ್ಲದು.

ಹಾಗೆ ಅನಂದೋನ್ಮತ್ತರಾಗಿ ಒಂದುಗಳಿಗೆಯಿದ್ದು, “ಚಿನ್ನಮ್ಮನೇ “ ಎನ್ನುತ್ತ, “ಶಾಮಣ್ಣ, ಇನ್ನು ಮೇಲೆ ಈಕೆ ಚಿನ್ನಮ್ಮ ನಲ್ಲ. ತಾಯಮ್ಮ! ನೀನೂ ತಾಯಮ್ಮ ಎಂದೇ ಕರೆ. ಈಕೆಯು ಎಂತಹ ಅದ್ಭುತಕಾರ್ಯವನ್ನು ಸಾಧಿಸುವಳೋ ನೋಡುವೆ. ತಾಯಮ್ಮ, ಇದೋ, ಈ ಭಸ್ಮವನ್ನು ಬಾಯಿಗೆ ಹಾಕಿಕೊಂಡು ಈ ಕುಂಕುಮವನ್ನು ಹಣೆಗೆ ಹಚ್ಚಿಕೊ. ನಿನಗೆ ಮೊದಲಿನಂತೆ ಶಕ್ತಿಯು ಬರುವುದು ಈಗ ಎಲ್ಲರೂ ಮಂಗಳಾರತಿ ಮಾಡಿ ಕೊಂಡು ಹೋಗಿ. ಅಲ್ಲಿ ಮಲ್ಲಿಕಾರ್ಜುನನು ನಿಮ್ಮ ಪೂಜೆಗೆ ಕಾದಿರುವನು. ಇನ್ನು ಮೂರುದಿನ ಮಲ್ಲಿಕಾರ್ಜುನನ ಪೂಜೆಯನ್ನು ಮನಸಾರ ಮಾಡಿಬಿಡಿ. ಆ ದೇವನು ನಿಮಗೆ ಒಲಿದಿರುನನು. ಹೋಗಿಬನ್ನಿ. ನಾಳೆಯ ದಿನ ಬೆಳಿಗ್ಗೆ ಒಂದು ಝಾವದ ಹೊತ್ತಿಗೆ, ಶಾಮಣ್ಣ, ಇವರನ್ನೆಲ್ಲ ಇಲ್ಲಿಗೆ ಪೂಜೆಗೆ ಕರೆದುಕೊಂಡು ಬಾ. ನೀವಿರುವ ಮೂರುದಿನವೂ ನಿತ್ಯವೂ ಪೂಜೆಗೆ ಬನ್ನಿ” ಎಂದರು.

ಆಚಾರ್ಯರಿಗೂ, ರನ್ನಳಿಗೂ ಆಶ್ಚರ್ಯವಾಯಿತು. ಅವರು ಇನ್ನು ಮೂರುದಿನ ಇಲ್ಲಿದ್ದು ಪೂಜೆಯನ್ನು ಮುಗಿಸಿಕೊಂಡು ರಾಜಧಾರಿಗೆ ಪ್ರಯಾಣ ಮಾಡಬೇಕು ಎಂದು ಮಾತನಾಡಿಕೊಂಡಿದ್ದರು.

ಚಿನ್ನಮ್ಮನು ಪ್ರಕೃತಿಸ್ಥಳಾಗಿದ್ದಳು ಯತಿಗಳು ಪೂಜೆಮಾಡಿ ಮಂಗಳಾರತಿ ಮಾಡಿದರು. ಚಿನ್ನಮ್ಮನನ್ನು ತಾವು ಕುಳಿತಿದ್ದ ಆಸನದಲ್ಲಿ ಕುಳ್ಳಿರಿಸಿ ಬೇಕಾದಹಾಗೆ ಅರಿಸಿನ ಕುಂಕುಮಗಳಿಂದ ಪೂಜೆಮಾಡಿ, “ತಾಯೇ, ಈ ದಿನ ಇಷ್ಟುಸಾಕು. ನಾಳೆಯಿಂದ ಮೂರುದಿನ ತಪ್ಪದೆ ಬಂದು ಪೂಜೆಯನ್ನೊಪ್ಪಿಸಿಕೊಂಡು ನನ್ನನ್ನು ಕೃತಾರ್ಥನನ್ನು ಮಾಡು “ಎಂದು ನಮಸ್ಕಾರಮಾಡಿ ಅಷ್ಟು ದೂರ ಬಂದು ಕಳುಹಿಸಿಕೊಟ್ಟರು.

ಆಚಾರ್ಯರು ಸಪರಿವಾರರಾಗಿ ಶಿಬಿರಕ್ಕೆ ಬಂದರು. ಬರುತ್ತಿದ್ದ ಹಾಗೆಯೇ ಮತ್ತೆ ಚಿನ್ನಳ ಮೇಲೆ ದೇವಿಯ ಸಂಚಾರವಾಯಿತು, ಆಚಾರ್ಯರು ಬಂದು ನಿಂತುಕೊಳ್ಳುತ್ತಿದ್ದಹಾಗೆಯೇ ಹಿಂದೆ ಅವಳ ದೇವರ ಮನೆಯಲ್ಲಿ ಆದಂತೆ ದೇವೀದರ್ಶನವಾಯಿತು. ಚಿನ್ನಮ್ಮನ ಬಾಯಿಂದ “ಶಾಮಣ್ಣ, ನಾಳಿನಿಂದ ಶಂಭುವಿನ ಆಶ್ರಮದಲ್ಲಿ ಸಹಸ್ರ ಸುವಾಸಿನೀ ಪೂಜೆಮಾಡಿಸು. ಮಾಡಿ ಸುತ್ತೀಯಷ್ಟೆ?” ಎಂದು ವಾಣಿಯು ಬಂತು. ಆಚಾರ್ಯರು ಆಗಬಹುದೆಂದು ಮಾತುಕೊಟ್ಟರು. ಹೋಗಿ ಸುವಾಸಿನಿಯರನ್ನು ಕರೆದುಕೊಂಡು ಬರುವವರು ಯಾರು? ತಾನು ಇರುವುದು ಜನವಸತಿಯಿಂದ ದೂರವಾದ ದುರ್ಗಮಪ್ರದೇಶ ದಲ್ಲಿ ಎಂಬುದು ಅವರಿಗೆ ಹೊಳೆಯಲಿಲ್ಲ. ದೇವಿಯೂ ಹೇಳಲಿಲ್ಲ.

ದೇವಿಯು ಎಲ್ಲರನ್ನೂ ಹೊರಗೆ ಕಳುಹಿಸಿದಳು. ರಾಯನನ್ನು ಮಾತ್ರ ಕರೆದು, “ನಾನು ಇವಳಲ್ಲಿ ಸಂಚಾರಮಾಡಿದೆನೆಂದು ನೀನು ಇವಳಿಗೆ ದೂರ ವಾಗಕೂಡದು. ಚಿನ್ನಳು ಹೆಂಡತಿಯೆಂದು ಒಪ್ಪಿಕೊಂಡಿರುವುದನ್ನು ಮರೆಯ ಬೇಡ. ಪೂಜೆಯಹೊತ್ತು ಅಷ್ಟುಮಾತ್ರ ಬಿಟ್ಟು ಮಿಕ್ಕ ಹೊತ್ತಿನಲ್ಲೆಲ್ಲ ನೀನು ಇವಳನ್ನು ಸಾಯುವವರೆಗೂ ಬಿಟ್ಟಗಲಕೂಡದು. ಹಾಗೆ ಅಗಲಿದರೆ ನನ್ನ ಆಣೆ” ಎಂದು ದೇವಿಯು ಹೊರಟೇಹೋದಳು. ಆಗ ಚಿನ್ನಳಿಗೆ ಆಯಾಸ ವಾಗಲಿಲ್ಲ. ಇನ್ನು ಅಷ್ಟುಹೊತ್ತಿನೊಳಗಾಗಿ ಆಕೆಯು ಪ್ರಕೃತಿಸ್ಥಳಾದಳು.

ಆಚಾರ್ಯರು ಒಂದು ಗಳಿಗೆ ಯೋಚಿಸಿದರು. “ನಾಳಿನಿಂದ ಸಹಸ್ರ ಸುವಾಸಿನೀ ಪೂಜೆಯಾಗಬೇಕು. ಎಲ್ಲಿಂದ ಕರೆಸುವುದು? ಏನು ಮಾಡಿಸು ವುದು?” ಎಂದು ಯೋಚಿಸುತ್ತಿರುವಾಗಲೇ ರಾಜಾಧಿಕಾರಿಯು ಬಂದು ಕಾಣಿಸಿ ಕೊಂಡನು. ಆಚಾರ್‍ಯರು ಏನು ಎಂದು ವಿಚಾರಿಸಿದರು. “ಸಾವಿರಾರು. ಜನರು ಜಾತ್ರೆಯೆಂದು ಬರುತ್ತಿದ್ದಾರೆ. ಅವರನ್ನು ಕೇಳಿದರೆ “ಇಲ್ಲಿ ವಿಜಯನಗರ ದಿಂದ ಯಾರೋ ಬಂದು ಮಲ್ಲಿಕಾರ್ಜುನನಿಗೆ ಜಾತ್ರೆ ಮಾಡಿಸುತ್ತಿದ್ದಾರೆ. ಬನ್ನಿ ಎಂದು ಹೇಳಿದರು. ಅದರಂತೆ ಬಂದಿದ್ದೇವೆ’ ಎನ್ನುತ್ತಾರೆ. ತಾವೇನಾದರೂ ಹೇಳಿಕಳುಹಿಸಿದ್ದೀರಾ ? ಎಂದು ಕೇಳಲು ಬಂದೆ” ಎಂದು ರಾಜಪುರುಷನು ಅರಿಕೆಮಾಡಿದನು. ಅವರೂ ಯಾವುದೋ ಜ್ಞಾನದಲ್ಲಿ ಹೇಳಿದರು. “ಹೌದು, ನಾಳೆಯಿಂದ ಮೂರು ದಿವಸ ಜಾತ್ರೆ ನಡೆಯಲಿ. ಅಲ್ಲಿ ಆ ಯತೀಶ್ವರರು ಇರುವುದನ್ನು ಬಲ್ಲೆಯೋ ?“

“ಕೇಳಿಬಲ್ಲಿ.”

“ಇನ್ನೂ ಮೂರುದಿನ, ದಿನದಿನವೂ ಸಹಸ್ರ ಸುವಾಸಿನಿಯರಿಗೆ ಸುವಾಸನೀ ಪೂಜೆಯನ್ನು ಕೊಡಬೇಕು. ಸಮಾರಾಧನೆ ಚೆನ್ನಾಗಿ ನಡೆಯಲಿ. ಇದನ್ನು ಸರ್ಕಾರಕ್ಕೆ ಖರ್ಚು ಹಾಕಬೇಡಿ. ಇದೋ ತೆಗೆದುಕೊಳ್ಳಿ. ಇದಿಷ್ಟೂ ಸರ್ವ ಪ್ರಕಾರದಿಂದಲೂ ಏನಾದರೂ ಮಾಡಿ ತೀರಿಸಿಬಿಡಿ. ಮತ್ತೆ ಸಾಲದು ಎಂದು ಬರುವ ಹಾಗೆ ಖರ್ಚುಮಾಡಿ” ಎಂದು ಹೇಳಿ ಒಂದು ಲಕ್ಷ ರೂಪಾಯಿ ಕೊಟ್ಟರು.

ಆ ವೇಳೆಗೆ ಸಂಜೆಯಾಗಿ ಹೋಗಿತ್ತು. ಮಲ್ಲಿಕಾರ್ಜುನನ ದೇವಾಲಯ ದಿಂದ “ಪೂಜೆಯೆಲ್ಲ ನಡೆದಿದೆ. ಮಂಗಳಾರತಿಗೆಂದು ಕಾಯಲಾಗಿದೆ ಎಂದು ಸುದ್ದಿ ಬಂತು. ಚಿನ್ನಳು ತಂಗಿಯನ್ನು ಏಕಾಂತವಾಗಿಕರೆದು “ರನ್ನಾ, ಇವೊತ್ತು ಸ್ವಾಮಿಗೆ ಒಂದು ಲಕ್ಷ ರೂಪಾಯಿ ಒಪ್ಪಿಸಿಬಿಡಲೇನೇ ?” ಎಂದಳು. ರನ್ನಳು “ಅಕ್ಕಾ ನೀನು ದೊಡ್ಡವಳು. ತಾಯಿತಂದೆ ಎಲ್ಲವೂ ನೀನೆ. ನೀನು ನನ್ನನ್ನು ಕೇಳಬೇಕೆ ?” ಎಂದಳು. ತಂಗಿಯನ್ನು ತಬ್ಬಿಕೊಂಡು ಮುತ್ತಿಟ್ಟುಕೊಂಡು “ತಂಗಮ್ಮ, ನೀನು ಹೆಸರಿಗೆ ಮಾತ್ರ ರನ್ನಳಲ್ಲ. ನಾನು ಚಿನ್ನ ನೀನು ರನ್ನ. ಏನೋ ಆಸೆಯಾಗಿದೆ. ಈ ಗೋಲ್ಕೊಂಡದಲ್ಲಿ ಬಂದುದೆಲ್ಲಾ ಶ್ರಶೈಲಕ್ಕೆ ಆಗಿ ಹೋಗಲಿ. ತಪ್ಪಿಲ್ಲವಲ್ಲಾ !” ಎಂದಳು. ತಂಗಿಯು ಒಪ್ಪಿದಳು.

ಆ ವೇಳೆಗೆ ರಾಯನು ಅಲ್ಲಿಗೆ ಬಂದು ಆ ಮಾತುಗಳನ್ನು ಕೇಳಿ “ನನ್ನ ಪಾಲೂ ಸೇರಿದೆ ತಾನೇ?”ಎಂದು ಕೇಳಿದನು. ಚಿನ್ನಳು ತಂಗಿಯಿರುವುದನ್ನೂ ಲಕ್ಷಿಸದೆ, ಅವನ ಕಪಾಳವನ್ನು ಕೈಯಿಂದ ಹಾಗೆಂದು “ಯಜಮಾನ ಎಂದ ಮೇಲೆ ನಿಂತುಕೊಂಡು ಎಲ್ಲವನ್ನೂ ನೀನೇ ಖರ್ಚುಮಾಡು” ಎಂದು ತಂಗಿಯ ಮುಖನನ್ನು ನೋಡಿದಳು. ತಂಗಿಯು ಸರಿಸರಿ ಎನ್ನುವಂತೆ ಮುಸಿಮುಸಿ ನಕ್ಕಳು.

ಇವರು ದೇವಸ್ಥಾನಕ್ಕೆ ಹೊರಡಬೇಕು ಎನ್ನುವುದರೊಳಗಾಗಿ ಯಜಮಾನ್‌ ಸೆಟ್ಟರು ಬಂದಿರುವರು ಎಂದು ವರ್ತಮಾನ ತಿಳಿಯಿತು. ಅಕ್ಕನು ತಂಗಿಯನ್ನು ಕರೆದು “ಗೋಪಾಲ, ರನ್ನಳಿಗೆ ದಿಕ್ಕಿಲ್ಲವಲ್ಲ. ನಾನು ಕಣ್ಮುಚ್ಚಿ ಕೊಂಡರೆ ನನ್ನ ಕಂದಮ್ಮನನ್ನು ಕಾಯುವವರಿಲ್ಲವಲ್ಲ ಎಂದು ಸಂಕಟ ಪಡುತ್ತಿದ್ದೆ. ಅಂತಹ ಕಾಲ ಬಂದರೆ ನಿನ್ನ ಕೈಯಲ್ಲಿಟ್ಟು ಪ್ರಾಣ ಬಿಡುವುದು ಎಂದಿದ್ದೆ. ಈ ಸೆಟ್ಟಿ ಇಲ್ಲಿಗೆ ಬಂದನೆಂದಮೇಲೆ ಮನಸ್ಸು ನಿರಾಳವಾಯಿತು. ಮಲ್ಲಿಕಾರ್ಜುನನೇ ಅವರನ್ನು ಕರೆತಂದ? ಎಂದಳು.

ರಾಯನಿಗೆ ಇದೇಕೆ ಇವಳು ಹೀಗೆ ಪ್ರಾಣಬಿಡುವ ಯೋಚನೆಯಲ್ಲಿದ್ದಾಳೆ ಎಂದು ಯೋಚನೆಯಾಯಿತು. ಆದರೂ ಮರ್ಮವನ್ನು ಬಿಡದೆ, “ಇರಲಿ. ಗೃಹಕೃತ್ಯಗಳನ್ನೆಲ್ಲ ನಿಧಾನವಾಗಿ ಮಾತನಾಡಿಕೊಳ್ಳೋಣ. ಮೊದಲು ದೇವಸ್ಥಾನಕ್ಕೆ ಹೋಗಿಬರೋಣ” ಎಂದು ಹೊರಟರು. ಬಂದು ಮಲ್ಲಿಕಾರ್ಜುನನಿಗೆ ಚಿನ್ನಾಸಾನಿಯು ತನ್ನ ಭಕ್ತಿಯ ಕಾಣಿಕೆ ಯೆಂದು ಒಂದುಲಕ್ಷವನ್ನು ಅರ್ಪಿಸಿದಳು. ಮರುದಿನ ಒಂದು ಜಾತ್ರೆಯು ನಡೆಯುವುದೆಂದು ಏರ್ಪಾಡಾಯಿತು. ಆದಿನ ಅಲ್ಲಿ ಚಿನ್ನಾಸಾನಿಯ ಸ್ತೋತ್ರಪಾಠವನ್ನು ಕೇಳುವುದಕ್ಕೆ ನೂರಾರು ಜನರು ಸೇರಿದ್ದರು.

ಮರುದಿನ ಬೆಳಿಗ್ಗೆ ಆಚಾರ್ಯರು ಸಶಿಷ್ಯರಾಗಿ ಶಾಂಭವಾನಂದರ ಆಶ್ರಮಕ್ಕೆ ಬಂದರು. ಯತಿಗಳು ಎಲ್ಲರನ್ನೂ ವಿಶ್ವಾಸದಿಂದ ಬರಮಾಡಿ ಕೊಂಡರು. ಅವರಿಗೂ ದೇವಿಯು ಆಚಾರ್ಯರಿಗೆ ತಾನು ಮಾಡಿರುವ ಅಪ್ಪಣೆಯನ್ನು ತಿಳಿಸಿದ್ದಳು. ಅವರು ಚಿನ್ನಮ್ಮ, ಅಲ್ಲ, ತಾಯಮ್ಮನನ್ನು ಕೂರಿಸಿ ಸಹಸ್ರನಾಮಗಳಿಂದ ಪೂಜೆಮಾಡಿದರು. ಆ ವೇಳೆಗೆ ಆಗಲೇ ಅಲ್ಲಿ ಸಾವಿರಾರು ಜನರು ನೆರೆದಿದ್ದಾರೆ. ರಾಜಪುರುಷರು ಬಂದು ಅವರನ್ನೆಲ್ಲ ಕ್ರಮವಾಗಿ ಸಾಲುಸಾಲಾಗಿ ಕುಳ್ಳಿರಿಸಿದರು. ಶಾಂಭವಾನಂದರು ತಾಯಮ್ಮ ನನ್ನು ಮುಂದೆಮಾಡಿಕೊಂಡು ಹೊರಟರು. ಪ್ರತಿಯೊಬ್ಬ ಸುವಾಸಿನಿಗೂ ಒಂದೊಂದು ಸೀರೆ, ಒಂದೊಂದು ರವಿಕೆಯಕಣ, ಮೊರದ ಬಾಗಿನವೊಂದು, ಹತ್ತುರೂಪಾಯಿ ದಕ್ಷಿಣೆ, ಎಂದು ಗೊತ್ತುಮಾಡಿ, ಒಬ್ಬೊಬ್ಬರಿಗೂ ಕ್ರಮವಾಗಿ ಪೂಜೆಮಾಡಿದರು. ಇತ್ತ ಶಾಂಭವಾನಂದರು ಅರಿಶಿನಕುಂಕುಮದ ತಟ್ಟೆಯನ್ನು ಹಿಡಿದುಕೊಂಡಿದ್ದಾರೆ. ಆಚಾರ್ಯರು ಹೂವುಗಂಧಗಳನ್ನೊಪ್ಪಿಸುತ್ತಿದ್ದಾರೆ. ಅತ್ತ ಸೆಟ್ಟರು ಹಣದಚೀಲ ಇಟ್ಟುಕೊಂಡು ದಕ್ಷಿಣಾ ದ್ರವ್ಯವನ್ನು ಕೊಡು ತ್ತಿದ್ದಾರೆ. ರನ್ನಮ್ಮನು ಮೊರದ ಬಾಗನಗಳನು ತೆಗೆದುಕೊಡುತ್ತಿದ್ದಾಳೆ. ಗೋಪಾಲರಾಯನು ಸೀರೆ ರವಿಕೆಕಣಗಳನ್ನು ಒಪ್ಪಿಸುತ್ತಿದ್ದಾನೆ.

ಸಂಜೆಯಲ್ಲಿ ಮಲ್ಲಿಕಾರ್ಜುನನಿಗೆ ರುದ್ರಾಕ್ಷ ಮಂಟಪದ ಉತ್ಸವವಾ ಯಿತು. ಆಚಾರ್‍ಯರು ಸಶಿಷ್ಯರಾಗಿ ತಂಬೂರಿಯನ್ನು ತೆಗೆದುಕೊಂಡು ಉತ್ಸವ ದಲ್ಲಿ ಭಜನೆ ಮಾಡುತ್ತ ಹೊರಟರು. ಚಿನ್ನರನ್ನೆಯರು ತಾಳವನ್ನು ತೆಗೆದು ಕೊಂಡರು. ರಾಯನು ಮೃದಂಗನನ್ನು ತೆಗೆದುಕೊಂಡನು. ಸೆಟ್ಟರು ಧೂಪ ದೀಪಗಳ ಮೇಲ್ವಿಚಾರಣೆ ನೋಡುತ್ತಿದ್ದಾರೆ. ನೋಡುವವರು ತಮ್ಮ ಕಣ್ಣನ್ನು ನಂಬಲಾರರು. ಸ್ವಾಮಿಯ ಹಿಂದೆ ಮುಂದೆ ಆಗುತ್ತಿರುವ ವೇದ ಘೋಷಗಳೇನು? ಅದ್ಭುತವಾಗಿವೆ. ಎಷ್ಟೋ ವರ್ಷಗಳಿಂದ ಆ ಬೆಟ್ಟಕ್ಕೆ ದೊಡ್ಡ ಜಾತ್ರೆಗೆ ಬರುತ್ತಿದ್ದವರು. “ನಾವು ನಮ್ಮ ಜನ್ಮದಲ್ಲಿ ಇಂತಹ ವೈಭವವನ್ನು ಕಂಡಿಲ್ಲ. ಇಂದು ದೇವಾದಿ ದೇವತೆಗಳೆಲ್ಲರೂ ಬಂದಿರಬೇಕು. ಈ ಪರ್ವತದಲ್ಲಿ ತಪಸ್ಸುಮಾಡಿಕೊಂಡಿರುವ ಋಹಿಮಹರ್ಷಿಗಳೆಲ್ಲರೂ ಬಂದಿರ ಬೇಕು. ಪರಶಿವನೇ ಈ ಜಾತ್ರೆಯನ್ನು ಮಾಡಿಸಿಕೊಳ್ಳಬೇಕೆಂದು ಮನಸ್ಸು ಮಾಡಿರಬೇಕು” ಎಂದ: ಆನಂದತುಂದಿಲರಾಗಿ ಯಥೇಚ್ಛವಾಗಿ ಹೊಗಳು ತ್ತಿದ್ದಾರೆ.

ಮೂರುದಿನವೂ ಹಾಗೆಯೇ ನಡೆಯಿತು. ಮೂರನೆಯ ದಿನ ಶಾಂಭವಾನಂದರು ಹೇಳಿದರು. “ಶಾಮಣ್ಣ, ಇಂದು ರಾತ್ರಿ ಮೊದಲನೆಯ ಝಾವವಾದಮೇಲೆ ನಾನು ಒಂದು ಪೂರ್ಣಾಹುತಿ ಮಾಡಬೇಕಾಗಿದೆ. ಇಷ್ಟವಿದ್ದರೆ ನೀನು ಬರಬಹುದು. ತಾಯಮ್ಮನಂತೂ ಬಂದೇಬರಬೇಕು. ಆಕೆಯು ಪೂರ್ಣಾಹುತಿಕಾಲದಲ್ಲಿ ಇರುವುದಕ್ಕೆ ಇಷ್ಟಪಟ್ಟರೆ ಬಹಳಸಂತೋಷ. ಇಲ್ಲದಿದ್ದರೆ ಪೂಜೆಯಾದ ಮೇಲೆ ಹೊರಟು ಹೋಗಲಿ”ಎಂದರು. ಆಚಾರ್ಯರು ಪೂರ್ಣಾಹುತಿಯ ವಿಚಾರವಾಗಿ ಏನೋ ಕೇಳಹೋದರು. ಅವರು ನಗು ನಗುತ್ತ, “ನೀನು ಏನೂ ಕೇಳಬೇಡ. ನಿನಗೆ ಇಷ್ಟವಿದ್ದರೆ ಬರಬಹುದು. ಇಲ್ಲದಿದ್ದರೆ ಇಲ್ಲ” ಎಂದು ಅಷ್ಟುಮಾತ್ರ ಹೇಳಿ ಹಲ್ಲುಬಿಟ್ಟರು. ಹಿಂದಿನ ಪೂರ್ಣಾಹುತಿಯ ನೆನಪಾಗಿ, ಆಚಾರ್ಯರಿಗೆ ಮುಂದೆ ಕೇಳುವ ಧೈರ್ಯ ವಾಗಲಿಲ್ಲ. ಆದರೂ ಬಹು ಧೈರ್ಯಮಾಡಿ, “ಅಲ್ಲಿ ಸ್ವಾಮಿಗೆ ಉತ್ಸವವಾದ ಮೇಲೆ ತಾನೇ?” ಎಂದರು.

“ಹೌದು, ಹೌದು. ಪೂರ್ಣಾಹುತಿಗೆ ಬರುವವರು ಊಟಮಾಡದೆ ಬನ್ನಿ. ಇಲ್ಲಿ ಪ್ರಸಾದ ಪೂರ್ಣವಾಗಿ ಸಿಕ್ಕುತ್ತದೆ” ಎಂದು ಉತ್ತರ ಬಂತು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್