
ಅಳಿದರೇ ಹಾ ಧೀರರು!
ಕಳೆದುಹೋದರೆ ಧೀರರು!
ತಮ್ಮ ನಾಡಿನ ಕರೆಯೊಳೆಲ್ಲರು
ಮುಳುಗಿ ಹೋದರು ತೆರೆಯೊಳು.
ಎಂಟುನೂರ್ವರು ಧೀರರು,
ಕಂಡ ಕೆಚ್ಚಿನ ಧೀರರು,
ಒಂದು ಮಗ್ಗುಲಿಗೆಳೆದು ಬಗ್ಗಿಸಿ
ಒರಗಿಸಿದ್ದರು ಹಡಗನು.
ನೇಣುಗಳ ನೆಲಗಾಳಿ ಕುಲುಕಿತು.
ಹಡಗು ತಲೆಕೆಳಕಾಯಿತು.
ಹೋಯ್ತು ರಾಯಲ್ ಜಾರ್ಜು ತಳಗಡೆ
ಗೊಬ್ಬನುಳಿಯದೆ ದಳದೊಳು.
ಅಳಿದರಾಹ ಧೀರರು!
ಹೋದ ಕೆಂಪೆನ್‌ಫೆಲ್ಟನು!
ಅವನ ಕಡೆ ಹೋರಾಟ ಹೋರಿತು,
ಅವನ ಸಾಹಸ ತೀರಿತು.
ಕಾಳಗದೊಳದು ಆಗಲಿಲ್ಲ;
ಗಾಳಿ ಎರಗಿ ಒದರಲಿಲ್ಲ;
ಒಡಕು ಕಿತ್ತುದು ಮುಳುಗಲಿಲ್ಲ;
ಅಡಗಿದರೆಯನು ಹಾಯಲಿಲ್ಲ.
ಒರೆಯೊಳಿದ್ದುದು ಅವನ ಕತ್ತಿ.
ಬೆರಳಲಿದ್ದುದು ಬರೆವ ಕಡ್ಡಿ,
ತಳಕೆ ಕೆಂಪೆನ್‌ಫೆಲ್ಟು ಹೋದಾ
ಗೆರಡು ನಾನೂರ್‌ದಳದಲಿ.
ಎತ್ತಿ ಮೇಲಕೆ ಹಡಗನು!
ನಮ್ಮ ಹಗೆಯೆದೆನಡುಗನು!
ಕುಡಿತ ಮೆರೆತದಿ ಬಿಡದೆ, ಇಂಗ್ಲೆಂಡ್,
ಸಲಿಸು ಕಂಬನಿಕಡವನು.
ಹಡಗುಮರ ಕೆಡದಿರುವುದು.
ತೇಲಬಲ್ಲುದು ಮತ್ತದು.
ಹೇರಿಕೊಂಡಿಂಗ್ಲೆಂಡ ಗುಡುಗನು
ದೂರದಾಳವನುಳುವುದು.
ಹೋದ ಕೆಂಪೆನ್‌ಫೆಲ್ಟನು!
ಆದುವಾತನ ಜಯಗಳು!
ಅವನು ಅವನಾ ಎಂಟುನೂರ್ವರು
ತೆರೆಯನಿನ್ನುಳಲಾರರು!
*****
COWPER (1731- 1800) : Loss of the Royal George














