ಅಧ್ಯಾಯ ಎಂಟು
ವಿಜಯನಗರದ ಅರಮನೆಯಲ್ಲಿ ಓಡಾಟಿಪೋ ಓಡಾಟ. ಮಂತ್ರಿ ಗಳೆಲ್ಲರೂ ಗುಸಗುಸ ಪಿಸಪಿಸವಾಡುತ್ತಿದ್ದಾರೆ. ಅಷ್ಟರಲ್ಲಿಯೇ ಸಮ್ಮುಖಕ್ಕೆ ಬರಬೇಕೆಂದು ಅಪ್ಪಣೆಯಾಯಿತು. ಎಲ್ಲರೂ ಒಬ್ಬರೊಬ್ಬರಾಗಿ ರಾಯರ ಸನ್ನಿಧಿಗೆ ಬಂದು ಕಾಣಿಸಿಕೊಂಡು ಭಯಭಕ್ತಿಗಳಿಂದ ನಮಸಕಾರಮಾಡಿ ಕುಳಿತುಕೊಂಡರು.
ನಗರರಕ್ಷಕ ದಳದ ಅಧ್ಯಕ್ಷನು ರಾಜಾಜ್ಞೆಯಿಂದ ಬಂದು ಹಿಂದಿನ ದಿನ ನಡೆದುದು ಎಲ್ಲವನ್ನೂ ಮಂತ್ರಿಸಭೆಗೆ ತಿಳಿಸಿದರು. ಅದೇ ಸಂಬಂಧದಲ್ಲಿಯೇ ನೂರಾರು ಜನರನ್ನು ಹಿಡಿದುಹಾಕಿರುವುದಾಗಿಯೂ ಅರಿಕೆಮಾಡಿದನು. ರಾಜ ಧಾನಿಯಲ್ಲಿಯೇ, ಸಮ್ರಾಜರ ಪ್ರಾಣಹರಣ ಪ್ರಯತ್ನವು ನಡೆದುದನ್ನು ಕೇಳಿ ಎಲ್ಲರೂ ಅವಾಕ್ಕಾದರು.
ಬಿಜಾಪುರದಿಂದ ರಾಯಭಾರಿಯು ಕಳುಹಿಸಿದ ಪತ್ರವೂ ಮಂತ್ರಿ ಮಂಡಲದ ಮುಂದೆ ಬಂತು. “ಬಿಜಾಪುರದವರಿಗೆ ಯುದ್ಧವನ್ನು ಆರಂಭಿಸಲು ಹೆದರಿಕೆ. ಆದರೆ ಅಹಮ್ಮದ್ ನಗರ, ಬಿದರೆ, ಬೀರಾರಿನ ಸುಲ್ತಾನರು ಬಿಜಾಪುರದ ಸುಲ್ತಾನನ ಪ್ರಾಣ ಹಿಂಡುತ್ತಿದ್ದಾರೆ. ಉತ್ತರದಿಂದ ಸೈನ್ಯವು ಹೊರಟುಬಿಟ್ಟಿತು ಎಂಬ ಸುದ್ದಿ ದಿನದಿನವೂ ಬರುತ್ತಿದೆ. “ಈ ಸಲ ಯುದ್ಧ ವಾದರೆ ದಳವಾಯಿಗಳು ಮೊದಲಾದ ಮುಖಂಡರಮೇಲೆಯೇ ಬೀಳುವುದು. ಸಣ್ಣ ಪುಟ್ಟ ಸೈನಿಕರ ತಂಟೆಗೆ ಹೋಗುವುದಿಲ್ಲ’ ಎಂದು ಇನ್ನೊಂದು ಸುದ್ದಿ. ಎಲ್ಲದಕ್ಕಿಂತ ಹೆಚ್ಚಾಗಿ “ಹೊರಗಿನವರು ವಿಜಯನಗರದಲ್ಲಿ ಬೇಕಾದ ಹಾಗೆ ಸೇರಿಕೊಂಡಿದ್ದಾರೆ. ಸೇನೆಯು ಅಲ್ಲಿಂದ ಹೊರಟಕೂಡಲೇ ರಾಜಧಾನಿಯನ್ನು ಲೂಟಿ ಮಾಡುತ್ತಾರೆ’ ಎಂಬ ಸುದ್ದಿ ಬಹಳ ಬಲವಾಗಿದೆ. ಆ ಮೂರು ರಾಜ್ಯದವರು ಸುಲ್ತಾನರ ಹತ್ತಿರ ಬಂದು ಹೋಗುವುದು ಬಹಳ ಹೆಚ್ಚಾಗಿದೆ. ನಾವು ಸುಲ್ತಾನರ ದರ್ಶನವನ್ನು ಅಪೇಕ್ಷಿಸಿದರೆ ಕಾರಣಗಳನ್ನು ಹೇಳದೆಯೇ ಮುಂದಕ್ಕೆ ತಳ್ಳುತ್ತಿದ್ದಾರೆ. ಉತ್ತರದ ಮೂರು ಜನ ಸುಲ್ತಾನರ ಪ್ರತಿನಿಧಿಗಳು. ಗೋಲ್ಕೊಂಡಕ್ಕೆ ಹೋಗಿದ್ದಾರೆ. ಅಲ್ಲಿ ಅವರು ಗೆದ್ದರೆ, ಯುದ್ಧವು ತಪ್ಪುವ ಹಾಗಿಲ್ಲ” ಎಂಬುದು ಆ ಪತ್ರದ ಸಾರಾಂಶ.
————————————–
೯೮-೧೧೩ ಪುಟಗಳು ಲಭ್ಯವಿಲ್ಲ.
————————————–
ಅದೆಲ್ಲ ಮುಗಿದಮೇಲೆ ಯಜಮಾನ್ ವೀರಪ್ಪಸೆಟ್ಟರು ತಂದಿರುವ ಸಂಧಿಯಪತ್ರದ ವಿಚಾರವೂ ಬಂತು. ಸಚಿವರಲ್ಲಿ ಎರಡು ಪಕ್ಷಗಳಾಯಿತು. “ಈಗಲೇ ಯುದ್ಧವಾಗುವುದೇ ಸರಿ, ಯಾವತ್ತಾದರೂ ಆಗಲೇ ಬೇಕಾಗಿರುವ ಯುದ್ಧ ಇವತ್ತೇ ನಡೆಯುವುದೇ ಒಳ್ಳೆಯದು. ಬಿಜಾಪುರ, ಗೋಲ್ಕೊಂಡ ಗಳನ್ನು ಗೆದ್ದು ಕೊಂಡು, ಗೋದಾವರಿಯವರೆಗೂ ನಮ್ಮ ಮೇರೆಗಳನ್ನು ಒತ್ತಿಯೇ ಬಿಡಬೇಕು” ಎಂದು ಒಂದು ಪಕ್ಷ. “ಈಗ ಅವರೆಲ್ಲ ಸಿದ್ದವಾಗಿ ದ್ಥಾರೆ. ಅಲ್ಲದೆ ಡೆಲ್ಲಿಯ ಕಡೆಯಿಂದಲೂ ಅವರಿಗೆ ಸಹಾಯ ಬರುವುದಾಗಿ ವದಂತಿಯಿದೆ. ಅದರಿಂದ ಈ ಗೋಲ್ಕೊಂಡದವರ ಸಂಧಿಪತ್ರವನ್ನು ಒಪ್ಪಿಕೊಳ್ಳುವ ನೆಪದಲ್ಲಿ ಯುದ್ಧವನ್ನು ತಳ್ಳೋಣ ಪಶ್ಚಿಮದಲ್ಲಿ ಇನ್ನೂ ಕೆಲವು ದುರ್ಗಗಳನ್ನು ಕಟ್ಟಿಕೊಂಡು ಪುಣ್ಯನಗರದನರೆಗೂ ನಮ್ಮ ಪ್ರಭಾವ ವನ್ನು ಬೆಳೆಸಿಕೊಂಡು, ನಂತರ ಯುದ್ಧಮಾಡಿ ಈ ಇವರು ಸುಲ್ಲಾನರ ನಡು ಮುರಿದುಹಾಕಿಬಿಡುವುದು ಎಂದು ಇನ್ನೊಂದು ಪಕ್ಷ. ಎರಡು ಪಕ್ಷದವರೂ ತಮ್ಮ ತಮ್ಮ ವಾದಗಳನ್ನು ರಾಯರ ಮಹಾಪಾದಗಳಲ್ಲಿ ಬಿನ್ನವಿಸಿದರು.
ರಾಯರು ಎರಡುಗಳಿಗೆ ಸುಮ್ಮನಿದ್ದು ಹೇಳಿದರು. “ನಿನ್ನೆಯದಿನ ಯಜಮಾನ್ ಸೆಟ್ಟರು ಸಂಧಿಪತ್ರವನ್ನು ತರುತ್ತಿದ್ದ ಹಾಗೆಯೇ ನಮ್ಮ ದಳವಾಯಿ ರುಸ್ತುಂಖಾನನನ್ನು ಕರೆಸಿ ಅನನ ಅಭಿಪ್ರಾಯವನ್ನು ಕೇಳಿದೆ. ರುಸ್ತುಮನನ್ನು ಸರ್ವ ಸೇನೆಗಳಿಗೂ ದಳಪತಿಯಾಗಿ ನಿಯಾಮಕ ಮಾಡಿದ್ದ ರಿಂದ ಕೆಲವರಲ್ಲಿ ಅಸಮಾಧಾನ ತಲೆದೋರಿದೆ. ಅವನನ್ನು ಆ ಅಧಿಕಾರದಿಂದ ತೆಗೆದು ನಾನೇ ಸೇನಾಧಿಕಾರವನ್ನು ವಹಿಸಿಕೊಳ್ಳುವುದಾದರೆ, ಈಗಲೇ ಯುದ್ಧ ಮಾಡುವುದುತ್ತಮ : ಇಲ್ಲದಿದ್ದರೆ, ಇನ್ನು ಅಷ್ಟುಕಾಲ ಬಿಟ್ಟು ಸೈನಿಕರೂ ದಳವಾಯಿಗಳೂ ಆತನಲ್ಲಿ ವಿಶ್ವಾಸಪಡುವಹಾಗೆ ಆದಮೇಲೆ ಯುದ ಮಾಡು ವುದು ಒಳ್ಳೆಯದು ಎಂದು ಆತನ ಅಭಿಪ್ರಾಯ. ನಮ್ಮ ಅಭಿಪ್ರಾಯದಲ್ಲಿ ಈಗ ಯುದ್ಧಕ್ಕೆ ಕಾಲ ಸರಿಯಾಗಿದೆ. ಇನ್ನು ಅಷ್ಟು ವರ್ಷಗಳ ಮೇಲೆ ನಮಗೆ ಈಗ ಇರುವ ಉತ್ಸಾಹವು ಹೀಗೇ ಇರುತ್ತದೆ ಎನ್ನುವುದಕ್ಕೆ ಆಗುವು ದಿಲ್ಲ. ಅದರಿಂದ ಯುದ್ಧವೇ ಏಕಾಗಬಾರದು ಎಂದು ನಾವೂ ಯೋಚಿಸು ತ್ರಿದ್ದೇವೆ“ಎಂದರು.
ವೃದ್ಧಮಂತ್ರಿಯು ಎದ್ದು ಕೈಮುಗಿದನು ; “ಮಹಾಸ್ವಾಮಿ ವಿಜಯ ನಗರದ ಮಂತ್ರಿ ಮಂಡಲದಲ್ಲಿ ಇದುವರೆಗೆ ನನ್ನ ಸಲಹೆಗೆ ವಿರೋಧವಾಗಿ ನಡೆದು ದಿಲ್ಲ. ಮಹಾಪಾದಗಳಲ್ಲಿ ಈ ರಾಜಭಕ್ತನು ಮಾಡಿದ ಬಿನ್ನಪಗಳು ಯಾವಾಗಲೂ ಅನುಕೂಲವಾಗಿಯೇ ಪರಿಣಮಿಸಿವೆಯಲ್ಲದೆ ನಿರೋಧವಾಗಿಲ್ಲ. ಅದರಿಂದ ನನ್ನ ಮಾತನ್ನು ಕೇಳಲೇ ಬೇಕು. ಈಗ ಎರಡು ಕಾರಣಗಳಿಂದ ಯುದ್ಧವು ಕೂಡದು. ಮೊದಲನೆಯದು, ಇಲ್ಲಿ ಅರಮನೆಯಲ್ಲಿ ಯಾರಿಗೂ ಸ್ವಾಸ್ಥ್ಯವಿಲ್ಲ. ಮುಂದೆ ಸಿಂಹಾಸನವನ್ನು ಎರುವವರು. ಯಾರು? ಎಂಬ ಪ್ರಶ್ನೆಯು ಇನ್ನೂ ಇತ್ಯರ್‍ಥವಾಗಿಲ್ಲ . ಆ ಪ್ರಶ್ನೆಯು ಇತ್ಯರ್ಥ್ಯವಾಗಿ, ಮುಂದಿನ ಚಕ್ರವರ್ತಿಗಳು ಇಂಥವರು ಎಂಬುದು ಗೊತ್ತಾಗಿ, ಪ್ರತ್ಯಕ್ಷ ಪರೋಕ್ಷಗಳಲ್ಲಿ ಆ ಮೂರ್ತಿಯಲ್ಲಿ ಜನರಿಗೆ ಅನುರಾಗ, ವಿಶ್ವಾಸ, ಭಕ್ತಿಗಳು ಬೇರೂರುವುದಕ್ಕೆ ಅವಕಾಶ ಬೇಕು. ಈಗ ಯುದ್ಧ ವಾದರೆ, ಜನವರ್ಗದ ಅನಿಶ್ಚಿತಭಾವದಿಂದ ಏನೇನಾದರೂ ಅನರ್ಥವಾಗಬಹುದು. ಎರಡನೆಯದಾಗಿ, ಈ ಐವರೂ ಸುಲ್ತಾನರಲ್ಲಿ ಗೋಲ್ಕೊಂಡದವನೇ ಪ್ರಬಲ. ಅತನು ಯುದ್ಧಕ್ಕೆ ಒಪ್ಪಿದ ಹೊರತು ಇನರು ಧೈರ್ಯವಾಗಿ ಯದ್ದಕ್ಕೆ ಬರುವುದಿಲ್ಲ. ಆತನು ಏನೋ ಕಾರಣಾಂತರದಿಂದ ಯುದ್ಧವು ಬೇಡ ಎನ್ನುತ್ತಿರುವಾಗ ಆತನಾಗಿ ಸಂಧಿ ಯನ್ನು ಅಪೇಕ್ಷಿಸುತ್ತಿರುವಾಗ ನಾವು ಈ ಸುಸಮಯವನ್ನು ಕಳೆದುಕೊಳ್ಳು ಪುದು ಸೂಕ್ತವಲ್ಲ. ಅಲ್ಲದೆ ಗೋಲ್ಕೊಂಡದ ನವಾಬನು ದೈವಭಕ್ತ. ಮೋಸಗಾರನಲ್ಲ. ಅದರಿಂದ ಅತನು ಅಪೇಕ್ಷಿಸುವ ಶಾಂತಿಯು, ನಿಜವಾಗಿ ಶಾಂತನಾದವನು ಅಕೃತ್ರಿಮವಾಗಿ ಸಹಜವಾಗಿ ಕೋರುವ ಶಾಂತಿಯೇ ಹೊರತು, ಕಳ್ಳರು ಯುದ್ಧಸನ್ನಾಹಕ್ಕಾಗಿ ಕೋರುವ ಕಾಲಯಾಪನದ ಶಾಂತಿ ಯಲ್ಲ. ಅದರಿಂದ ಮಹಾಸ್ವಾಮಿಯವರು. ಶಾಂತಿಯನ್ನು ಕೋರಿ ಗೋಲ್ಕೊಂಡದನರೊಡನೆ ಸಂಧಿಯನ್ನು ಮಾಡಿಕೊಳ್ಳಿ. ಈ ನಾಲ್ವರೂ ಒಂದು ವೇಳೆ ದುಡುಕಿದರೂ ಗೋಲ್ಕೊಂಡದವರು ನಮ್ಮೊಡನೆ ಇರುವುದರಿಂದ ನಾವು ಇವರನ್ನು ಮುರಿಯುವುದು ಅಷ್ಟು ಕಷ್ಟವಾಗಲಾರದು.“
ಎಲ್ಲರೂ ಮುಖ ಮುಖ ನೋಡಿಕೊಂಡರು. ವೃದ್ಧ ಮಂತ್ರಿಯ ಮಾತುಗಳನ್ನು ಎಲ್ಲರೂ ಗೌರವಿಸಿದರು. ರಾಯರೂ ಯುದ್ಧ್ಧೋತ್ಸಾಹವನ್ನು ಹಿಂದಿಟ್ಟು ಸಂಧಿಪತ್ರಕ್ಕೆ ಸಹಿ ಹಾಕಲು ಮಂತ್ರಿಗಳಿಗೆ ಅಪ್ಪಣೆಯನ್ನಿತ್ತರು.
ಯಜಮಾನ್ ವೀರಪ್ಪಸೆಟ್ಟರೂ, ನಟರಾಯ ಕಂಠೀರವ ಗೋಪಾಲರಾಯರೂ ಕೂಡಲೇ ಬರಬೇಕೆಂದು ನಿರೂಪವನ್ನು ಕಟ್ಟಿಗೆಯವರು ತೆಗೆದುಕೊಂಡ: ಹೋದರು. ಭರತಾಚಾರ್ಯರೂ, ಚಿನ್ನಾಸಾನಿಯೂ ಬರಬೇಕೆಂದು ಅವರಿಗೆ ಅರಮನೆಯಿಂದ ಕರೆಯು ಹೋಯಿತು.
ಮಧ್ಯಾಹ್ನ ಒಂದು ಝಾವವಾಗಿರಬಹುದು. ನಟರಾಯ ಕಂಠೀರವ ಗೋಪಾಲರಾಯರು ರಾಜಾಜ್ಞೆಯಂತೆ ಬಂದು ಸಮ್ರಾಜರ ದರ್ಶನವನ್ನು ಮಾಡಿದರು. ಸಮ್ರಾಜರು ಹಿಂದಿನ ರಾತ್ರಿಯ ಕಥೆಯನ್ನೆಲ್ಲ ಕೇಳಿದರು. “ಆಯಿತು, ಅಂತು ನಮಗೋಸ್ಕರವಾಗಿ ನೀವು ಹೆಣ್ಣಿನವೇಷ ಕೂಡ ಧರಿಸಬೇಕಾಯಿತು.”
ತಪ್ಪೇನು? ಮಹಾಸ್ತಾಮಿಯನರ ಸೇವೆಗಾಗಿ ಏನಾದರೂ ಮಾಡಲೇ ಬೇಕು ನನ್ನೊಡೆಯ”
“ತಮ್ಮಂತಹ ರಾಜಭಕ್ತರು ಇರುವವರೆಗೂ ವಿಜಯನಗರಕ್ಕೆ ಚ್ಯುತಿಯಿಲ್ಲ.“
“ವಿಜಯನಗರವು ಯಾವಾಗಲೂ ವಿಜಯನಗರವೇ ಆಗಿರಬೇಕೆಂದು ನಮ್ಮ ಕೋರಿಕೆ ಬುದ್ಧಿ.”
“ರಾಯರ ರಾಜಭಕ್ತಿಯು ಅಪಾರವಾದುದು. ನಮ್ಮಿಂದ ಆಗದ ಒಂದು ಕೆಲಸವನ್ನು ಸಾಧಿಸಬೇಕಾಗಿ ತಮ್ಮನ್ನು ಕೋರಿದ್ದೇವೆ ರಾಯರೇ!”
“ಅಪ್ಪಣೆಯಾಗಬೇಕು ಮಹಾಸ್ವಾಮಿ! “
“ಚಿನ್ನಳ ಹಟಮಾರಿತನ ತಮಗೆ ಗೊತ್ತಿದೆ. ಅವಳು ಗೋಲ್ಕೊಂಡಕ್ಕೆ ಹೋಗಿ ಬರಬೇಕು ?
ರಾಯರ ಮುಖ ಕೆಂಪಾಯಿತು. ಏನು ಹೇಳಬೇಕೋ ತೋರದೆ ಧರಿಸಿದ್ದ ರುಮಾಲನ್ನು ಒಂದಕ್ಕೂ ಮುಂದಕ್ಕೂ ಸರಿಸಿದರು. ರಾಯರು ನಗುತ್ತ “ನಮ್ಮ ಅಭಿಮಾನಕ್ಕೆ ಪಾತ್ರವಾದ ವಸ್ತುವಿನಲ್ಲಿ ಸ್ವಾತಂತ್ರ್ಯ ವಹಿಸುವುದು ಕೊಂಚ ಕಷ್ಟ. ಅದರಿಂದ ಆ ಕೆಲಸ ನಿರ್ವಹಿಸಬೇಕೆಂದು ತಮಗೆ ಹೇಳುತ್ತಿದ್ದೇನೆ. ನಮ್ಮ ಅಭಿಮಾನಕ್ಕೆ ಪಾತ್ರವಾದ ವಸ್ತು ಅದು. ಅವಳ ಅಭಿಮಾನಕ್ಕೆ ಪಾತ್ರವಾದ ವಸ್ತು ತಾವು. ಅವಳು ತಮ್ಮ ಮಾತು ಮೀರುವುದಿಲ್ಲ. ಈ ಕಾರ್ಯ,
ಹಿಂದಿನ ರಾತ್ರಿ ತಾವು ಸಾಧಿಸಿದ ಕಾರ್ಯದಷ್ಟೇ ಗುರುತರವಾದುದು ಎಂಬುದನ್ನು ತಾವು ಮನಗಾಣುವಿರಂತೆ. ಈ ತೆರೆಯಹಿಂದೆ ಇರಿ” ಎಂದು ಅವರನ್ನು ತೆರೆಯ ಮರೆಯಲ್ಲಿ ಕುಳ್ಳಿರಿಸಿ, ಯಜಮಾನ್ ವೀರಪ್ಪಸೆಟ್ಟರನ್ನು ಬರಮಾಡಿಕೊಂಡರು. ಆದರದಿಂದ ಗೌರವಿಸಿ ಆಸನದಲ್ಲಿ ಕುಳ್ಳಿರಿಸಿ ವಿಶ್ವಾಸದಿಂದ ಹೇಳಿದರು “ಸೆಟ್ಟರೇ ಪ್ರಜಾವರ್ಗಕ್ಕೆ ತಮ್ಮಿಂದ ಆಗಿರುವ ಉಪಕಾರವು ಅಷ್ಟಿಷ್ಟಲ್ಲ. ನಾವು ಯುದ್ಧವೇ ಸರಿಯೆಂದು ನಿಶ್ಚಯಿಸಿ ಗೋವೆಗೆ ಸೈನ್ಯವನ್ನೂ ಕಳುಹಿಸಿದ್ದೆವು. ಇತ್ತ ಅದವಾನಿಯಲ್ಲಿದ್ದ ಸೈನ್ಯವೂ ಹೊರಡಲು ಸಿದ್ಧವಾಗಿದ್ದುವು. ಮಂತ್ರಿ ಮಂಡಲದಲ್ಲಿಯೂ ಅನೇಕರಿಗೆ ಯುದ್ಧವೇ ಸರಿಯೆಂಬ ಆಭಿಪ್ರಾಯವಿತು.
ಅಲ್ಲಿ ಗೋಲ್ಕೊಂಡದಿಂದ ನಮ್ಮ ರಾಯಭಾರಿಗಳು “ಸುಲ್ತಾನರಿಗೆ ಯುದ್ಧವು ಇಷ್ಟವಿಲ್ಲ. ಶಾಂತಿಗೆ ಸಂಧಾನ ಸಡೆಸುತ್ತಿದ್ದೇನೆ “ಎಂದು ಬರೆದಿದ್ದರು. ತಾವು ಶಾಂತಿಯ ಸಂಧಿಪತ್ರವನ್ನು ತಂದೇ ಬಿಟ್ಟಿರ. ಇದೋ, ಈ ಪತ್ರಕ್ಕೆ ಮಂತ್ರಿಗಳ ರುಜುವಾಗಿದೆ ತಾವೇ ತೆಗೆದುಕೊಂಡು ಹೋಗಿ. ಈ ಸಂಧಿಪತ್ರದ ಜೊತೆಯಲ್ಲಿ ಕಳುಹಿಸುವ ಮರ್ಯಾದೆಗಳನ್ನೆಲ್ಲ ತಾನೇ ತೆಗೆದುಕೊಂಡು ಹೋಗಿ, ಸುಲ್ತಾನರು ಅಪ್ಪಣೆಕೊಡಿಸಿದ ಶುಭವಾಕ್ಯಗಳೆಲ್ಲ ನಮಗೂ ಬಹಳ ಮೆಚ್ಚಿಕೆಯಾದುವು. ಅವುಗಳಂತೆ ನಾವು ನಾವು ನಡೆದುಕೊಳ್ಳಲು ದೇವರು ನಮಗೆ ಸಾಮರ್ಥ್ಯವನ್ನು ಕೊಡಲಿ ಎಂದು ನಾವು ಹಗಲೂ ರಾತ್ರ ಪ್ರಾರ್ಥನೆ ಮಾಡುತ್ತೇವೆಂದು ನಾವೇ ಹೇಳಿದೆವೆಂದು ಅವರಲ್ಲಿ ಅರಿಕೆಮಾಡಿ. ಅವರು ನಮ್ಮಕಡೆ ನೀಡಿದ ಸ್ನೇಹ ಹಸ್ತವನ್ನು ನಾವು ಅಂಗೀಕರಿಸುವುದು ಮಾತ್ರವಲ್ಲ ಅವರು ನಮ್ಮಲ್ಲಿ ಸ್ನೇಹ ಮಾಡಿದರೆಂದು ಇತರರು ಅವರಲ್ಲಿ ನಿರೋಧನಾಗಿ ವರ್ತಿಸಿದರೆ, ವಿಜಯನಗರದ ಸರ್ವಸ್ವವೂ ಅವರ ವಶವರ್ತಿಯಾಗಿರುವುದು ಎದು ಅವರಲ್ಲಿ ಹೇಳಿ. ಇನ್ನು ತಾವು ಗೋಲ್ಕೊಂಡಕ್ಕೆ ಯಾವೂತ್ತು ಹೂರಡುವಿರಿ?”
ಸೆಟ್ಟರು ರಾಯರ ಮುಖವನ್ನು ನೋಡಿ ಸಣ್ಣ ನಗು ನಗುತ್ತ “ಮಹಾಪಾದದ ಅಪ್ಪಣೆಯಾದಾಗ” ಎಂದರು. ರಾಯರು ನಗುತ್ತ, “ಸೆಟ್ಟರೇ ರಾಜ್ಯಗಳನ್ನು ಗೆಲ್ಲಬಹುದು. ರಮಣಿಯರನ್ನು ಗೆಲ್ಲುವುದು ಕಷ್ಟ. ಅರಸರಿಗೆ ಆಜ್ಞಾಭಂಗವಾದೀತು ಎಂಬ ದಿಗಿಲು ಯಾವಾಗಲೂ ಇದ್ದೇ ಇರುವುದು. ಏನು ಮಾಡಬೇಕೋ ತಾವೇ ಅಪ್ಪಣೆ ಕೊಡಿಸಿ” ಎಂದರು.
“ಸನ್ನಿಧಾನದಲ್ಲಿ ಮಾತನಾಡುವಾಗ ಎದೆ ಡವಡವ ಎನ್ನುತ್ತದೆ. ಮಹಾಸ್ವಾಮಿ, ಅಪ್ಪಣೆಯಾದರೆ ಧೈರ್ಯವಾಗಿ ಅರಿಕೆಮಾಡುತ್ತೇನೆ.”
“ಏನೂ ಚಿಂತೆಯಿಲ್ಲ. ನಿಶ್ಚಿಂತೆಯಿಂದ ಅರಿಕೆಮಾಡಿ.”
ಮಹಾಸ್ವಾಮಿ ಜನ ಆಡಿಕೊಳ್ಳುವ ಮಾತು. ಮಹಾಪಾದದಲ್ಲಿ ಅರಿಕೆಯೇನೋ ಮಾಡುತ್ತೇನೆ. ಕ್ಷಮಿಸಬೇಕು ಆ ಚಿನ್ನಾಸಾನಿ ಈ ಲೋಕದಲ್ಲಿ ಯಾರಮಾತಾದರೂ ಕೇಳುವಹಾಗಿದ್ದರೆ, ಅದು ಇಬ್ಬರ ಮಾತಂತೆ ಮಹಾಸ್ವಾಮಿ. ಒಂದು ಭರತಾಚಾರರದು : ಇನ್ನೊಂದು ಗೋಪಾಲ ರಾಯರದು.”
ಚಕ್ರವರ್ತಿಗಳು ಬಾಯಿಬಿಟ್ಟು ಗಹಗಹಿಸಿ ನಕ್ಕು ಬಿಟ್ಟರು. “ಹಾಗಾದರೆ ನಮ್ಮ ಮಾತ್ರ ಅವಳಲ್ಲಿ ನಡೆಯುವುದಿಲ್ಲವಂತೋ ? ಚಿಂತೆಯಿಲ್ಲ. ಜನ ಏನು ಹೇಳುತ್ತಾರೋ ಕೇಳೋಣ. ಹೇಳಿಬಿಡಿ.”
“ಮಹಾಪಾದಗಳು ಎನ್ನುವ ವೀಣೆಯನ್ನು ಅವಳು ಬಲು ಚೆನ್ನಾಗಿ ಬಾರಿಸುತ್ತಾಳೆ ಎಂದು ವದಂತಿ ಪ್ರಭು ”
ರಾಯರು ಆ ಮಾತಿನರ್ಥವನ್ನು ಸಂಪೂರ್ಣವಾಗಿ ಗ್ರಹಿಸಿ, ನಕ್ಕು, ಆ ವಿನೋದವನ್ನು ಆನಂದವಾಗಿ ಅನುಭವಿಸಿ, ಹೇಳಿದರು, “ಸೆಟ್ಟರು ಹೇಳಿದುದು ನಮಗೂ ಗೊತ್ತಿದೆ. ಅದರಿಂದ ಆ ಆನೆಯನ್ನು ಆಳುವ ಅಂಕುಶ ಬೇಕಾದರೆ ಇರಲಿ ಎಂದು ನಾವು ಆಗಲೇ ಸಂಗ್ರಹಿಸಿಟ್ಟಿದ್ದೇವೆ. ನೋಡಿ” ಎಂದು ತಾವೇ ಎದ್ದು ತೆರೆಯನ್ನು ಅತ್ತ ಎಳೆದರು. ಒಳಗೆ ಗೋಪಾಲರಾಯರು. ಸೆಟ್ಟರು ಅದನ್ನು ಕಂಡು ಅವಾಕ್ಕಾಗಿ ಹೋದರು.
ಚಕ್ರವರ್ತಿಗಳು ಸೆಟ್ಟರ ಭಾವಪ್ರಳಯವನ್ನು ಕಂಡು, ಮುಸಿಮುಸಿ ನಗುತ್ತಾ, “ಆಜ್ಞೆಯನ್ನು ನಿರೀಕ್ಷಿಸುತ್ತಿರುವವರು ತಾವು. ಆಜ್ಞೆಯಾದಾಗ ಭಂಗವಾಗದಂತೆ ಕಾಪಾಡುವವರು ಇವರು. ತಾವಿಬ್ಬರೂ ಸೇರಿ ನಮ್ಮ ಕಾರ್ಯವನ್ನು ಮಾಡಬೇಕಾಗಿದೆ. ಸಮ್ಮತವಷ್ಟೇ ?” ಎಂದರು.
ರಾಯರಿಗೆ ಹರಾತ್ತಾಗಿ ಸಂಭವಿಸಿದ ಈ ಘಟನೆಯನ್ನು ನೋಡಿ ನಾಲಗೆಯು ಅಂಗುಳಿಗೆ ಹತ್ತಿ ಹೋಗಿತ್ತು. ಸೆಟ್ಟರು ಬೀಗ ಹಾಕಿದಷ್ಟು ಭದ್ರ ವಾಗಿ ಹಿಡಿದುಕೊಂಡಿದ್ದ ನಾಲಗೆಯನ್ನು ಬಹು ಕಷ್ಟದಿಂದ ಸಡಲಿಸಿಕೊಂಡು ಹೇಳಿದರು, “ಮಹಾಸ್ತಾಮಿ. ಸಮಯಕ್ಕೆ ಒದಗಲಿ ಎಂದು ನಾನೂ ಅಷ್ಟು ಕಾಣಿಕೆ ಕಟ್ಟದೇನೆ.” “ಹಾಗೆಂದರೆ ?”
“ಮೊದಲನೆಯ ಸಲ್ಲ ಮಹಾಪಾದದಲ್ಲಿ ವಜ್ರದಗಣಿಯ ವಿಚಾರ ಮಾತನಾಡುವುದಕ್ಕೆ ಒಂದು ದಿವಸ ಬೇಕು ಎಂದು ಚಿನ್ನಾಸಾನಿಯ ಮನೆಗೆ ಹೋಗಿ ಇಪ್ಪತ್ತೈದುಸಾವಿರ ರೂಪಾಯಿನ ವಜ್ರಗಳನ್ನು ಕೊಟ್ಟು ಇದು ನಮ್ಮದಾಗಿ ನಿಮ್ಮಲ್ಲಿರಲಿ ಎಂದು ಹೇಳಿಬಂದೆ ಮಹಾಸ್ವಾಮಿ. ಆ ದಾಕ್ಷಿಣ್ಯ ಒಂದು ದಿನವಲ್ಲದಿದ್ದರೆ ಇನ್ನೊಂದು ದಿನವಾದರೂ ಕಾರ್‍ಯಕಾರಿಯಾದೀತು ಎಂದು ನಂಬಿಕೆ.”
ನಮ್ಮ ಅನುಗ್ರಹವನ್ನು ಪಡೆದ ಚಿನ್ನಾಸಾನಿಯು ನಮ್ಮ ಮಾತನ್ನು ನಡೆಯಿಸದೆ ಹೋದರೆ ನಾವು ಆದನ್ನು ಪ್ರಕಾರಾಂತರವಾಗಿ ಗ್ರಹಿಸಲಾಗು ವುದಿಲ್ಲ. ಗ್ರಹಿಸುವುದೂ ಇಲ್ಲ. ಆದರೆ, ವಿಜಯನಗರ ಸಾಮ್ರಾಜ್ಯದ ಪ್ರಜೆ ಯಾದ ಚಿನ್ನಾಸಾನಿಯೂ ಸಾಮ್ರಾಜ್ಯದ ಹಿತಕ್ಕೋಸ್ಸರ , ಸಮ್ರಾಜರ ಅಪ್ಪಣೆಯನ್ನು ಪಾಲಿಸದಿದ್ದರೆ ಆದು ಗುರುತರವಾದ ಅಪರಾಧವಾದೀತು ಅಕ್ಷಮ್ಯವಾದೀತು. ಅದನ್ನು ಆರಿಯದಷ್ಟು ಅಜ್ಞಾನಳಲ್ಲ ಚಿನ್ನಾಸಾನಿ. ಇರಲಿ. ತಾವಿಬ್ಬರೂ ಒಳಗೆ ಇರಿ. ಈಗ ಭರತಾಚಾರ್ಯರು ದಯಮಾಡುವರು.
ಅವರಿಬ್ಬರೂ ತೆರೆಯ ಮರೆಯನ್ನು ಸೇರುತ್ತಿದ್ದ ಹಾಗೆಯೇ ಕಟ್ಟಿಗೆಯವನು ಭರತಾಚಾರ್ಯರನ್ನು ಕರೆತಂದನು. ಸಮ್ಮುಖದ ಅಧಿಕಾರಿಯು ಆಚಾರ್ಯರನ್ನು ಕರೆದುಕೊಂಡು ಬಂದು ಚಕ್ರವರ್ತಿಗಳ ಸಮೀಪದಲ್ಲಿ ಬಿಟ್ಟನು. ಆಚಾರ್ಯರು ಶಾಸ್ತ್ರೋಕ್ತವಾದ ಅಭಯಮುದ್ರೆಯನ್ನೂ, ವರದಮುದ್ರೆಯನ್ನೂ ಹಿಡಿದು ಸ-ರಾಗವಾಗಿ, ಸ-ತಾಳವಾಗಿ, “ಮಂಗಲಮಾತನೋತು ಸಾ ಶ್ರೀ ಭುವನೇಶ್ವರೀದೇವೀ”ಎಂದು ಆಶೀರ್ವಾದಮಾಡಿ, ಸಮ್ರಾಜನು ತೋರಿಸಿದ ಆಸನವನ್ನು ಅಲಂಕರಿಸಿದರು.
ಚಕ್ರವರ್ತಿಗಳ ಬಾಯಿಂದ ಏನು ಆಜ್ಞೆಯು ಹೊರಟೀತೋ ಎಂದು ಆಜ್ಞೆಯನ್ನು ನಿರೀಕ್ಷಿಸುತ್ತ ಕುಳಿತಿರುವ ಆಚಾರ್‍ಯರನ್ನು ಚಕ್ರವರ್ತಿಗಳೇ ಮೊದಲು ಮಾತನಾಡಿಸಿದರು. ಆ ಮಾತಿನಲ್ಲಿ ತನಗಿಂತ ದೊಡ್ಡವರನ್ನು ಅವರಿಗೆ ಅನುಚಿತವಾದ ಕಾರ್ಯದಲ್ಲಿ ನಿಯೋಜಿಸಬೇಕಾಗಿರುವ ಚಿಕ್ಕವನು ಪಡುವ ಶ್ರಮವೆಲ್ಲ ತುಂಬಿತ್ತು. ಮುಖವನ್ನು ಹಿಂಡಿಕೊಳ್ಳುತ್ತ ಅತ್ತಿತ್ತ ನೋಡುತ್ತ, ಸಂಶಯವೇ ಮೂರ್ತಿಯಾದಂತೆ ತೋರುತ್ತ, ಚಕ್ರವರ್ತಿಗಳು “ಆಚಾರ್ಯರು ನಮ್ಮ ಅಪಚಾರವನ್ನು ಕ್ಷಮಿಸಬೇಕು. ಸಾಮ್ರಾಜ್ಯದ ಹಿತಕ್ಕಾಗಿ ತಮಗೆ ಪ್ರಿಯವಲ್ಲದ ಕಾರ್ಯವೊಂದನ್ನು ಮಾಡಬೇಕಾಗಿ ಬಂದರೆ ದೊಡ್ಡವರು ಏನು ಮಾಡುವರು” ಎಂದು ಕೇಳಿದರು.
ಆಮಾತನ್ನು ಕೇಳಿ ಆಚಾರ್ಯರಿಗೆ ದೊಡ್ಡದಾಗಿ ಅಳು ಬಂದುಬಿಟ್ಟಿತು. ದೊಡ್ಡದಾಗಿ ಬಿಕ್ಕಳಿಸಿ ಅತ್ತುಬಟ್ಟರು. “ಆ ಮಹಾಪ್ರಭು, ಸಾಮ್ಯಾಜ್ಯವು ಶಾಶ್ವತವಾಗಿರುವಂತೆ ಮಾಡುವ ಅವಕಾಶವು ಒಂದು ಸಿಕ್ಕಿತ್ತು. ಅದನ್ನು ಕಳೆದು ಕೊಂಡ ಪರಮಪಾಪಿಯು ನಾನು. ಮತ್ತೆ ಅಂತಹ ಅವಕಾಶವು ಸಿಕ್ಕಿದರೆ, ಶ್ರೀ ಗುರುಚರಣಗಳ ಮೇಲಾಣೆ ಕಳೆದುಕೊಳ್ಳುವುದಿಲ್ಲ. ಏನಾದರೂ ಆಗಲಿ ಸಾಧಿಸುವೆನು” ಎಂದರು. ಅವರಾಡಿದ ಮಾತು ಅಸತ್ಯವಲ್ಲ ಎಂಬುದನ್ನು ನಿಜ ಎಂದು ಹೇಳಬೇಕೆಂದೋ ಎಂಬಂತೆ, ಕಣ್ಣುಗಳಿಂದ ನೀರು ಹನಿಹನಿಯಾಗಿ ಕೆಳಕ್ಕೆ ಇಳಿಯಿತು.
ಆಚಾರರ ಕಣ್ಣಲ್ಲಿ ನೀರು ಧಾರೆಯಾಗಿ ಹರಿದುದನ್ನು ಕಂಡು ರಾಯರಿಗೆ ಆಶ್ಚರ್‍ಯವಾಯಿತು. ಅವರೂ ನೊಂದುಕೊಂಡು ವಿಶ್ವಾಸದಿಂದ ವಿಚಾರಿಸಿದರು. ಆಚಾರ್‍ಯರು ಶಾಂಭವಾನಂದರ ಕತೆಯನ್ನು ಸೂಕ್ಷ್ಮವಾಗಿ ಹೇಳಿದರು. ಆದರೆ ಹತ್ತುವರುಷದ ವಾಯಿದೆಯನ್ನು ಮಾತ್ರ ಹೇಳಲಿಲ್ಲ. ಅದನ್ನು ಕೇಳಿ ರಾಯರಿಗೆ ಆಶ್ಚರವಾಯಿತು. ಅವರಿಗಿಂತಲೂ ಹೆಚ್ಚಾಗಿ ತೆರೆಯ ಮರೆ ಯಲ್ಲಿದ್ದವರು ಆಶ್ಚರ್‍ಯಪಟ್ಟರು. “ಹಾಗಾದರೆ ಕಾಣದ ಕೈಯಾಡಿಸಿ ದೈವವು ತಮ್ಮನ್ನೆಲ್ಲ ಕುಣಿಸುತ್ತಿರುವುದೇನು ? ತಾವು ಮರೆಯಲ್ಲಿ ಸೂತ್ರ ಹಿಡಿದು ಆಡಿಸುತ್ತಿರುವ ಸೂತ್ರಧಾರಿಯ ಕೈಗೊಂಬೆಗಳೇನು ?”ಎಂದು ಎಲ್ಲರೂ ವಿಚಾರಪರರಾದರು.
ಹಾಗೆಯೇ ಒಂದು ಗಳಿಗೆ ಕಳೆಯಿತು. ರಾಯರು ದೈವದ ಅದ್ಭುತ ವ್ಯಾಪಾರದ ಒಂದಂಶವನ್ನು ಪರ್ಯವಲೋಕಿಸಿ, ತಮ್ಮ ಸಂಕಲ್ಪಗಳೆಲ್ಲ ಅದರ ಪ್ರಚೋದನವೇ ಎಂದು ಮನಸ್ಸಿನಲ್ಲಿ ಭಾವಿಸುತ್ತ “ಹಾಗಾದರೆ ಮಾನವನ ಸ್ಥಾನವೇನು? “ಎಂಬ ಬಗೆಹರಿಯದ, ಮುಳ್ಳುಮುರಿಯದ ಪ್ರಶ್ನಕ್ಕೆ ಬಂದಿದ್ದರು. ಆಚಾರ್ಯರು ಆ ದಿನದ ನೆನಪಿನಲ್ಲಿ ಕರಗಿಹೋಗಿ ತಮ್ಮ ಅಸ್ತಿತ್ವವನ್ನೇ ಮರೆತು ಕುಳಿತಿದ್ದರು.
ಮತ್ತೆ ಆಚಾರ್ಯರಿಗೆ ಪ್ರಜ್ಞೆಯು ಮರಳಿ ಬಂದಂತಾಯಿತು. ಕಣ್ಣೂ ಮೂಗೂ ಒರೆಸಿಕೊಂಡು, ಹೊಸಬರಾದಂತಾಗಿ, ಅರಿಕೆ ಮಾಡಿದರು “ಅಪ್ಪಣೆಯಾಗಬೇಕು. ಮಹಾಪಾದದ ಅಪ್ಪಣೆಯೇ ವೇದವಕ್ಯವೆಂದು ತಲೆಯಮೇಲಟ್ಟುಕೊಂಡು ನೆರವೇರಿಸುತ್ತೇನೆ.
ರಾಯರು ಅನ್ಯಮುನಸ್ವರಾಗದ್ದರು. ಆಚಾರ್ಯರು ತಾವು ಆಡಿದ ಮಾತನು ಇನ್ನೂ ಒಮ್ಮೆ ಆಡಿದರು. ಆಗಲೂ ರಾಯರು, “ಆಗಲಿ. ಹೇಳುತ್ತೇನೆ. ಪಂಪಾಪತಿಯೂ, ಭುವನೇಶ್ವರಿಯೂ ತಮ್ಮದೆಂದು ಪಾಲಿಸುವ ರಾಜ್ಯವನ್ನು ನನ್ನದು ಎಂಬ ಅಹಂಕಾರದಿಂದ ನಾನು ಹಾಳುಮಾಡುತ್ತಿರು ವೆನೋ ಎಂಬ ದಿಗಿಲು ಹುಟ್ಟಿದೆ. ಶ್ರೀ ವಿದ್ಯಾರಣ್ಯಗುರುವರೇಣ್ಯರು ತಮ್ಮ ತಪೋಬಲವನ್ನೆಲ್ಲಾ ದಾನಮಾಡಿ ಸಾವಿಸಿದ ವಿಜಯನಗರದ ಸೇವಕನು ನಾನು, ರಕ್ಷಕನಲ್ಲ, ಎಂಬ ಉದಾತ್ತಭಾವ ನನಗಿದುವರೆಗೂ ಇರಲಿಲ್ಲವಲ್ಲಾ ಎಂದು ವ್ಯಥೆಪಡುತ್ತಿದ್ದೇನೆ. ಯೋಗೀಂದ್ರರು ರಕ್ಷಕರಾಗಿ ತೆರೆಯಮರೆಯಲ್ಲಿ ಇರುವಾಗ,ಕೈಗೆ ಸಿಕ್ಕಿದುದನ್ನು ಕೊಳ್ಳೆ ಹೊಡೆಯುವ ಪಾಳೆಗಾರನ ದುರ್ಬುದ್ದಿಯು ನನಗೆ ಬಂತಲ್ಲಾ ! ಎಂದು ಸಂಕಟಪಡುತ್ತಿದ್ದೇನೆ. ದೈವ, ಅದರ ಸಂಕಲ್ಪವನ್ನು ಅರಿತು ಅದರಂತೆ ವರ್ತಿಸುವ ದೈವ ಸಮಾನರಾದ ತಪಸ್ವಿಗಳು, ಇವರು ವಹಿಸಿರುವ ಜಗತ್ತಿನ ಯೋಗಕ್ಷೇಮಭಾರವನ್ನು ನಾನೇ ಏಕಾಕಿಯಾಗಿ ವರಿಸಿರುವಂತೆ ಭಾವಿಸಿಕೊಂಡು ಕುರೋಹಟ್ಟಿಯ ಗೂಳಿಗಿಂತ ಕಡೆಯಾಗಿ ಮೆರೆಯುತ್ತಿರುವೆನಲ್ಲಾ ಎಂದು ಕೊರಗು ಹತ್ತಿದೆ. ಆಚಾರ್ಯ, ತಮ್ಮ ಕಥೆಯು ಇಂದು ನನಗೆ ಹೊಸ ಕಣ್ಣು ತಂದಿದೆ. ಇದ್ದ ಕಣ್ಣು ಬಿಡಿಸಿದೆ. ಇನ್ನು ಹೊಸ ಮನುಷ್ಯನಾಗಲ, ಪ್ರಯತ್ನಿಸುತ್ತೇನೆ” ಎಂದು ಸಮಾಧಾನ ವಾಗಿ, ನಿಧಾನವಾಗಿ, ಮಾತು ಮಾತು ಎಣಿಸಿ ಈಚೆಗೆ ಇಡುವವರಂತೆ ನುಡಿದರು.
ಇನ್ನೂ ಒಂದು ಗಳಿಗೆ ಹಾಗೆಯೇ ಮೌನ, ಸ್ವಚ್ಛತೆಯು ಆ ದರ್ಶನ ಮಂದಿರವನ್ನು ಆವರಿಸಿತ್ತು. ರಾಯರು ಆ ಸ್ತಬ್ಧತೆಯನ್ನು ಪ್ರಯತ್ನ ಪೂರ್ವಕವಾಗಿ ಪರಿಹರಿಸುವವರಂತೆ ಥಟ್ಟನೆದ್ದು, “ಜೈ ಪಂಪಾಪತೇ ! ಪ್ರಕೃತ ಮನುಸರಾಮಃ”ಎಂದು ನಗುತ್ತಾ, ಕಣ್ಣಿನಲ್ಲಿದ್ದ ಒಂದು ತೊಟ್ಟು ನೀರನ್ನು ಒರೆಸಿಕೊಳ್ಳುತ್ತಾ, “ನಿಜ, ವಿದ್ಯಾರಣ್ಯರು ಹೇಳಿದ್ದು ನಿಜ. ಜ್ಞಾನಿನಾ ಚರಿತುಂ ಶಕ್ಯಂ ಸಮ್ರಗ್ರಾಚ್ಯಾದಿ ಕೌಶಲಂ’ ರಾಜ್ಯವನ್ನು ಕೌಶಲ್ಯದಿಂದ ಆಳಬೇಕಾದರೆ ಜ್ಞಾನಿಗೊಬ್ಬನಿಗೇ ಶಕ್ಯ. ಶ್ರೀ ಕೃಷ್ಣದೇವರಾಯರು ವ್ಯಾಸರಾಯ ಗುರುಗಳನ್ನು ಆಶ್ರಯಿಸಿದ್ದುದು ಸುಮ್ಮನಲ್ಲ. ನಾವು ನಮ್ಮ ಅಹಂಕಾರದಲ್ಲಿ ಅವರನ್ನೆಲ್ಲಾ ಕಡೆಗಣಿಸಿ ವಿಜಯನಗರಕ್ಕೆ ಮೃತ್ಯುಗಳಾದೆವು” ಎಂದು ಮನಸ್ಸಿನ ಸಂಕಟವನ್ನು ಅಷ್ಟು ಹೊರಗೆಡಹಿ, “ಆಚಾರ್ಯ, ಹಾಗಾದರೆ ನಮ್ಮ ಮಾತು ನಡೆಯಿಸಿಕೊಡುವಿರಷ್ಟೆ ?”ಎಂದು ವಿನಯವಾಗಿ ಕೇಳಿದರು.
ಆಚಾರ್ಯರು ರಾಯರೆದ್ದಾಗಲೇ ಎದ್ದಿದ್ದರು. ಅವರ ಬಾಯಿಂದ ಹೊರಟ ಒಂದೊಂದು ಮಾತೂ ತಾನು ಹುಟ್ಟದೆಡೆಯಲ್ಲಿದ್ದ ಸಂಕಟವನ್ನು ಅವರ ಕಿವಿಗೂ ತಂದಿಟ್ಟು ಅದನ್ನು ಅವರ ಎದೆಗೆ ತುಂಬಿದೆ. ಈಗ ಇಬ್ಬರೂ ಸಮಾನದುಃಖಿಗಳಾಗಿದ್ದಾರೆ. ಆಚಾರ್‍ಯರು ಆ ತುಂಬಿದ ಮನದಲ್ಲಿ ಬೇರೆ ಯೋಚನೆಯೇ ಮಾಡದೆ, ತಡ ಇಲ್ಲದೆ ಕೂಡಲೇ ಹೇಳಿದರು, “ಅಪ್ಪಣೆ ಯಾಗಲಿ ಪ್ರಭು.”
“ಗೋಂಡದ ಸುಲ್ತಾನರು ಸಂಗೀತಪ್ರಿಯರು. ಚಿನ್ನಾಸಾನಿಯ ಸಂಗೀತವನ್ನು ತನ್ನ ದರ್ಬಾರಿನಲ್ಲಿ ನಡೆಸುವುದಕ್ಕಾಗಿ ತಮ್ಮ ಬಂಧುಗಳಾದ ಷಾಹಿ ಸುಲ್ತಾನು ದ್ವೇಷವನ್ನು ಕಟ್ಟಿಕೊಳ್ಳುವುದಕ್ಕೂ ಸಿದ್ಧರಾಗಿದ್ದಾರೆ. ನಾವು ಇದುವರೆಗೆ ಬೆಕ್ಕಿನ ಮೇಲೆ ನಾಯಿ, ನಾಯಿಯ ಮೇಲೆ ಬೆಕ್ಕು ಹಾಕಿ, ಅವವೇ ಕಾದಾಡಿಕೊಳ್ಳುವಂತೆ ಮಾಡಿ ನಮ್ಮ ರಾಜ್ಯವನ್ನು ರಕ್ಷಿಸಿ ಕೊಂಡಿದ್ದೇವೆ. ಈಗ ದೈವಾಯತ್ತವಾಗಿ ಗೋಲ್ಗೊಂಡದ ಸುಲ್ತಾನರ ಶಾಂತಿ ಸಂಧಾನಪ್ರಯತ್ನ ನಡೆದಿದೆ. ಅದರಲ್ಲಿ ಒಂದು ನಿರ್ಬಂಧವಿದೆ. ಅದು ಚಿನ್ನಳು ಅಲ್ಲಿಗೆ ಹೋಗಿ ಸಂಗೀತದ ಕಛೇರಿಮಾಡಬೇಕು. ಅವಳು ಹೋಗ ಬೇಕಾದರೆ ತಾವೂ ಹೋಗಬೇಕು. ಅಲ್ಲಿ ತಮ್ಮ ಮನಸ್ಸಿಗೆ ವಿರುದ್ದವಾಗಿ ಮೇಚ್ಛರೊಡನೆ ವ್ಯವಹಾರಮಾಡಬೇಕು. ತಮ್ಮನ್ನು ಆ ಕೆ ಲ ಸ ಕ್ಕೆ ನಿಯೋಜಿಸಲೂ ಆರೆ : ಹಾಗೆಂದು ಸುಮ್ಮನೆ ಇರಲೂ ಆರೆ. ಇದು ನನ್ನ ಧರ್ಮಸಂಕಟ.”
ಆಚಾರ್ಯರು ನಿಟ್ಟುಸಿರುಬಿಟ್ಟು ಹೇಳಿದರು, “ಮಹಾಪ್ರಭು, ಶಾಂಭವಾನಂದರು ಬಂದುಹೋದಮೇಲೆ ನನಗೆ ಜ್ಞಾನೋದಯವಾಗಿದೆ. ನಾವು ಈಶ್ವರನನ್ನು ಪೂಜೆ ಮಾಡುವಾಗ ಜಗದೀಶ್ವರ ಎನ್ನುತ್ತೇನೆ. ಆ ಈಶ್ವರನು ಈಶ್ವರನಾಗಿರುವ ಜಗತ್ತಿನಲ್ತಿ ಮ್ಲೇಚ್ಛನೂ ಸೇರಿಲ್ಲವೆ ? ಆ ಬ್ರಹ್ಮಾಂಹ ಭಾಂಡೋದರನೆಂಬ ಮಹಾಪ್ರಭುವಿನ ಜಗತ್ತಿನಲ್ಲಿ ಆಣುರೇಣುತೃಣಕಾಷ್ಟಗಳು ಅವನೇ ಎನ್ನುವ ನಾವು ಮ್ಲೇಚ್ಚನಲ್ಲಿ ಅವನನ್ನು ಕಾಣದಿದ್ದರೆ ಅದು ನಮ್ಮ ತಪ್ಪೇ ಹೊರತು ಆದು ಸ್ವಾಮಿಯ ದ್ರೋಹವಲ್ಲ. ಆಲ್ಲಿ ಮಹಾಪ್ರಭು, ವ್ಯಕ್ತಿವ್ಯಕ್ತಿಯೆಂಬ ಸಾಮಾನ್ಯ ದೃಷ್ಟಿಯಿಂದ ನೋಡಿಕೊಂಡು ಖಂಡ ಪ್ರಜ್ಞೆಯಲ್ಲಿ ಭೇದವನ್ನು ಒಪ್ಪಿಕೊಳ್ಳಲೇಬೇಕಾದರೂ ಅಲ್ಲಿರುವ ವಿಶೇಷಗಳನ್ನು ಕಂಡಾಗ ಆ ವಿಶೇಷಳೆಲ್ಲವೂ ಸ್ವಾಮಿಯದೇ ಎಂದು ಆಂಗೀಕರಿಸಬೇಕಲ್ಲವೇ ? ಯದ್ಯದ್ವಿಭೂತಿಮತ್ಸತ್ವಂ ಶ್ರೀ ಮದೂರ್ಜತಮೇವವಾ
ತತ್ತದೇವಾವ ಗಚ್ಛತ್ವಂ ಮಮತೇಜೋಂಶಸಂಭವಂ
ಎಂದು ಎಲ್ಲಿ ಏನು ವಿಶೇಷವನ್ನು ಕಂಡರೂ ಅದು ನನ್ನ ಅಂಶ ಎಂದು ತಿಳಿ ಎಂದು ಸ್ವಾಮಿಯೇ ಅಪ್ಪಣೆ ಕೊಡಿಸಿರುವಾಗ, ಭೇದ, ಅಭೇದ ಎರಡನ್ನೂ ಒಪ್ಪಿ ಕೊಳ್ಳುವುದೇ ಸರಿ ಎಂದು ನನಗೆ ತೋರುತ್ತಿದೆ. ಮಹಾಸ್ವಾಮಿ. ಅಚಾರನಿಷ್ಟೆಗಳಲ್ಲ ವ್ಯವಹಾರಗಳಲ್ಲಿ ಅವರೂ ನಾವೂ ಬೇರೆಯೇ ನಿಜ. ನಾವು ಏತಿ ಎಂದರೆ ಅವರು ಪ್ರೇತಿ ಎನ್ನುವುದೂ ನಿಜ. ಆದರೂ ಅವರೂ ದೇವರ ಮಕ್ಕಳೇ ಎಂಬ ಭಾವನೆ ಸತ್ಕುಲಪ್ರಸೂತರೂ, ಸತ್ಸಂಪ್ರದಾಯದಲ್ಲಿ ಸುಶಿಕ್ಷಿತರೂ ಆದ ನಮಗೆ ಬರದಿದ್ದರೆ ಅದು ನಿಜವಾಗಿಯೂ ದ್ರೋಹ ಎನ್ನಿಸುತ್ತಿದೆ. ಮಹಾಸ್ತಾಮಿ, ಅದರಿಂದ ಇದುವರೆಗೂ ಇದ್ದ ಹಟವನ್ನು ಬಿಟ್ಟುಕೊಟ್ಟಿದ್ದೇನೆ. ಇನ್ನುಮೇಲೆ ಎಲ್ಲಿ ಯಾರಿಗೆ ಕೈ ಮುಗಿದರೂ ಅಲ್ಲಿ ಆ ನಮಸ್ಕಾರವನ್ನು ಪರಿಗ್ರಹಿಸುವವನು ಸ್ವಾಮಿಯೇ! ಸ್ವಾಮಿಗಲ್ಲದೆ ಇನ್ನು ಇತರರು ಯಾರಿಗೂ ನಮಸ್ಕಾರ ಸ್ವೀಕಾರ ಮಾಡಲು ಅರ್ಹತೆಯಿಲ್ಲ ಎಂದುಕೊಂಡು ಅದೇ ನಂಬಿಕೆಯಿಂದ ಕಕೈ ಮುಗಿಯು ತ್ತೇನೆ. ಇಲ್ಲಿ ತಮ್ಮ ಉಪ್ಪು ತಿಂದು ಬೆಳೆದವನಾದ್ದರಿಂದ, ತಾವು ಏನು ಕೆಲಸ ಮಾಡಿಕೊಂಡು ಬಾ ಎಂದರೆ ಅದನ್ನು ಮಾಡುತ್ತೇನೆ. ಇನ್ನು ಮುಂದೆ ನನ್ನ ಅಹಂಕಾರವನ್ನು ಮುರಿದು ಒಟ್ಟುತ್ತೇನೆ. ಇದುವರೆಗೆ ಧರ್ಮದ ಹೆಸರಿನಲ್ಲಿ ನಾನು ಮೋಸಕೊಂಡದು ಸಾಕು ಇನ್ನು ಎಲ್ಲೆಲ್ಲೂ ಇರುವನೆಂದು ಬಾಯಲ್ಲಿ ಹೇಳುತ್ತಿದ್ದ ಮಾತು ನಿಜವಾಗಲೆಂದು ಆ ನನ್ನ ಈಶ್ವರನನ್ನು ಎಲ್ಲೆಲ್ಲೂ ಕಾಣಲು ಯತ್ನಿಸುತ್ತೇನೆ. ಈ ದೃಷ್ಟಿಯಿಂದ, ವಾಸನಾತ್ ವಾಸುದೇವಸ್ಯವಾಸಿತಂ ತೇ ಜಗತ್ತ್ರಯಂ ! ಸರ್ವಭೂತನಿವಾಸೋ ಸಿ ವಾಸುದೇವ ನಮೋಸ್ತುತೇ
ಎಂದು ಎಲ್ಲರಿಗೂ ಕೈ ಮುಗಿಯುತ್ತೇನೆ. ಆದರಿಂದ, ಗೋಲ್ಕೊಂಡಕ್ಕೆ ಹೋಗಿಬರುವುದು. ನನ್ನ ಪ್ರತಿಜ್ಞೆಗೆ ವಿರೋಧವಲ್ಲ. ಅಪ್ಪಣೆಯಾಗಲಿ” ಎಂದು ಕೈ ಮುಗಿದರು.
ರಾಯರಿಗೆ ಹೃದಯದ ಭಾರವೆಲ್ಲ ಇಳುಹಿದಂತಾಗಿ ನೆಮ್ಮದಿಯ ನಿಟ್ಟುಸಿರು ಬಂತು. ನಿಟ್ಟುಸಿರು ಕರೆದು, “ಆಚಾರ್ಯ, ತಾವು ಇಷ್ಟು ಸುಲಭ ವೆಂದು ನಾನು ಭಾವಿಸಿರಲಿಲ್ಲ. ತಾವು ನಮಗೆ, ನಮ್ಮ ರಾಜ್ಯಕ್ಕೆ, ನಮ್ಮ ಪ್ರಜಾ ವರ್ಗಕ್ಕೆ ಬಲುದೊಡ್ಡ ಉಪಕಾರ ಮಾದಿದಿರಿ. ಈ ಉಪಕಾರ ನಮಗಿಂತಲೂ ನಮ್ಮ ಮುಂದಿನ ಪೀಳಿಗೆಯವರ ಹೆಚ್ಚಾಗಿ ಹೊಗಳುವರು. ತಾವು ಒಂದು ಯುದ್ಧವನ್ನು ತಪ್ಪಿಸಿದಿರಿ. ಬಂದಿದ್ದ ಮಾರಿಯನ್ನು ಹೊರಕ್ಕೆ ನೂಕಿದಿರಿ” ಎಂದು ಬಹುವಾಗಿ ಉಪಚಾರಮೂಡಿ, ಕೊನೆಯ ಮಾತಾಗಿ, “ಅಯಿತು, ತಮ್ಮ ಶಿಷ್ಯಳು ಏನೆನ್ನುವಳೋ ? ಅವಳು ಜಪ್ಪಯ್ಕಾ ಎಂದರೆ ಒಪ್ಪುವವಳಲ್ಲವಲ್ಲ! ಅದನ್ನು ಹೇಗೆ ಮಾಡುವುದು ? ಅವಳನ್ನು ಒಪ್ಪಿಸುವುದು ಹೇಗೆ?” ಎಂದು ಕೇಳಿದರು.
ಆಚಾರ್ಯರು ಚಿನ್ನಳ ಹೆಸರನ್ನು ಕೇಳುತ್ತಲೇ ಬಿಸಿ ಹಾಲಿನಲ್ಲಿ ಅದ್ದಿದ ರೊಟ್ಟಿಯಂತೆ ಮೃದುವಾಗಿ ಹೋದರು. “ಮಹಾಪ್ರಭು, ಎಪ್ಟೇ ಆಗಲಿ ಹೆಂಗಸು ಅಲ್ಲದೆ ಏಕಾಂತದಲ್ಲಿ, ಅಂತಃಪುರದಲ್ಲಿ ಲೋಕವ್ಯವಹಾರ ಜ್ಞಾನ ವಿಲ್ಲದೆ ಬೆಳೆದವಳು. ಆಶ್ರಿತರ ಮೇಲೆ ಪ್ರಭುವಿಗೆ ಅಪಾರವಾದ ಮಮತೆ ಯಿಲ್ಲದಿದರೆ ಅವರು ಉಳಿಯುವುದಾದರೂ ಹೇಗೆ? ಮಹಾಪ್ರಭುಗಳು ಈ ವಿಚಾರದಲ್ಲಿ ಮಾತೃವಿಗಿಂತ ಹೆಚ್ಚು ವಾತ್ಸಲ್ಯವನ್ನು ತೋರಿಸಬೇಕು. ಅವಳು ಹಟ ಹಿಡಿದರೂ ನಯಭಯಗಳಿಂದ ಒಪ್ಪಿಸಬೇಕು. ದೇವರು ಮನಸ್ಸು ಮಾಡಬೇಕು. ಸನ್ನಿಧಾನದ ಅಪ್ಪಣೆಗೆ ಅವಳು ಎಂದಿಗೂ ವಿರೋಧವಾಗಿ ಹೋಗಲಾರಳು. ಅಲ್ಲದೆ ರಾಜ್ಯಕ್ಷೇಮಕ್ತಾಗಿ ಈ ಕೆಲಸವೆಂದರೆ ಆತ್ಮಾರ್‍ಪಣ ಮಾಡುವುದಕ್ಕೂ ಸಿದ್ಧರಾಗಿರುವವರು ತಾನೇ ತಮ್ಮ ಪ್ರಜೆಗಳೆಲ್ಲ!”ಎಂದು ವಿನಯವಾಗಿ ಹೇಳಿದರು.
ಆಚಾರ್ಯರ ಶಿಷ್ಯವಾತ್ಸಲ್ಯ, ಅವಳನ್ನು ವಹಿಸಿಕೊಂಡು ಅವರು ನುಡಿಯುವ ರೀತಿ, ಮೊದಲಾದವೆಲ್ಲ ಅವರ ಮನಸ್ಸಿಗೆ ಬಹಳ ಹಿಡಿಯಿತು. ಆ ಮೃದುವಾದ ಭಾವದಲ್ಲಿ ಅವರಿರುವಾಗ, ಆಚಾರ್ಯರು “ಮಹಾಸ್ವಾಮಿ ಯವರು ಆಕೆಯನ್ನು ಕರಿಸೋಣವಾಗಲಿ. ಏನು ಹೇಳುವಳೋ ನೋಡೋಣ “ ಎಂದರು
ಚಕ್ರವರ್ತಿಗಳ ಅಪ್ಪಣೆಯಾಯಿತು; ಚಿನ್ನಾಸಾನಿಯು ಸಮ್ಮುಖಕ್ಕೆ ಬಂದಳು.
*****
ಮುಂದುವರೆಯುವುದು


















