ಹೊಳೆ ಬೆಳಗಿ ಜಾರುವುದು,
ಗಿಳಿ ನೆಗೆದು ಹಾರುವುದು.
ಬೆಳೆದ ಹೊಲ ಬಿಸಿಲಲ್ಲಿ ಮಲಗಿರುವುದು;
ತಿಳಿಯಾದ ಬಾನಿನಲಿ
ಬಿಳಿಮುಗಿಲು ತೇಲುವುದು,
ಮಳೆಸೋತ ದಳದಂತೆ ಕದ್ದಡಗಿತು!
ಕರೆಯ ಹೊಂಗೆಯ ಮರದ
ನೆರಳ ಸೋಂಪಿನೊಳೊರಗಿ
ಕುರುಬಹಯ್ದನು ಕೊಳಲನೂದುತಿರಲು,
ಕೊರಳೆತ್ತಿ, ಮೈಮರೆತು,
ಹರಡಿದೆಳಹಸುರಾದ
ಗುರುಕೆಯನು ಮೇಯದೆಯೆ ಮುಂದೆ ಇಹುದು.
ಎಳೆಮುದಿಯರೊಂದಾಗಿ
ಕಲೆತು ಹೊಲಗೆಯ್ಮೆಯೊಳು
ನಲಿದುಲಿವ ನಗೆಮಾತು ಕಿವಿಗೆಸೆವುದು.
ಮಲೆಯಲ್ಲಿ ಬಯಲಲ್ಲಿ
ನೆಲದಲ್ಲಿ ಜಲದಲ್ಲಿ
ತಲೆದೋರಿತಾನಂದವೆಲ್ಲೆಲ್ಲಿಯೂ!
*****
WORDSWORTH (1770 – 1850) : Written in March
















