ಬೆಂಗಳೂರೆಂಬ ದೊಡ್ಡ ಪಟ್ಟಣದಲ್ಲಿ ಬಲು ದೊಡ್ಡ ಮಠವಿತ್ತು. ಒಂದು ದಿನ ಒಬ್ಬ ಸನ್ಯಾಸಿ ಮಠದೊಳಕ್ಕೆ ಐದಾರು ಶಿಷ್ಯರೊಂದಿಗೆ ಗೂಳಿ ನುಗ್ಗಿದಂತೆ ನುಗ್ಗಿ ಬಂದ, ಮಠದಲ್ಲಿದ್ದವರೆಲ್ಲ ಗಾಬರಿಯಾದರು.
“ಸ್ವಾಮಿಗಳೆ ತಾವು ಯಾರು? ನಿಮಗ್ಯಾರು ಬೇಕಾಗಿತ್ತು? ನಿಮಗೇನಾಗ ಬೇಕಾಗಿತ್ತು?” ಎಂದು ಮಠದ ಮರಿಸ್ವಾಮಿಗಳೆಲ್ಲ ಆ ಸನ್ಯಾಸಿಯನ್ನು ವಿಜ್ಞಾಪಿಸಿದರು.
“ನಾನೊಬ್ಬ ದೇವದೂತ. ನಿಮಗೇನು ಬೇಕೆಂದು ಕೇಳಿಕೊಳ್ಳಿರಿ. ನನಗೇನು ಬೇಕಾಗಿಲ್ಲ. ನಿಮ್ಮ ಹಿರಿಸ್ವಾಮಿಯನ್ನು ನನ್ನಲ್ಲಿಗೆ ಕರೆದುಕೊಂಡು ಬನ್ನಿ” ಎಂದು ಸನ್ಯಾಸಿ ಅಲ್ಲಿದ್ದವರನ್ನೆಲ್ಲ ಜೋರು ಜೋರು ಮಾಡಿದ.
ಮಠದ ಮರಿಸ್ವಾಮಿಗಳೆಲ್ಲ ಒಳಗೆ ಓಡಿದರು. ಹಿರಿಸ್ವಾಮಿಗಳಿಗೆ ಸುದ್ದಿ ಮುಟ್ಟಿಸಿದರು. ಹಿರಿಸ್ವಾಮಿಗಳು ಗಾಬರಿ ಬಿದ್ದರು.
ಹಿರಿಸ್ವಾಮಿಗಳು ಏಳಲಾರದೆ ಬೇಗ ಎದ್ದು ಅವಸರದಿ ಸನ್ಯಾಸಿ ಬಳಿಗೆ ಬಂದರು. “ಸ್ವಾಮಿಗಳೆ ತಮ್ಮ ಹೆಸರು, ಊರು, ಯಾವ ಮಠದವರು ? ತಮಗೆ ನಮ್ಮಿಂದೇನಾಗಬೇಕು?” ಎಂದು ಕೇಳಿದರು.
“ನನ್ನ ಹೆಸರು ಮೃತ್ಯುವೆಂದು. ಎಲ್ಲರೂ ಭಯಭಕ್ತಿಯಿಂದ ಮೃತ್ಯುಂಜಯ ಮಹಾಸ್ವಾಮಿಗಳೆಂದು ಕರೆಯುವರು. ನಮ್ಮದು ಬಲು ಎತ್ತರದ ಊರು! ಉತ್ತರ ಭಾರತದ ಹಿಮಾಲಯದ ತಪ್ಪಲಿನಿಂದ ಬಂದವರು! ಸಿದ್ಧಿ ಪ್ರಸಿದ್ಧಿ ಸಾಧಕರು! ನಿಮಗೇನಾದರು ಬೇಕಿದ್ದರೆ ಹೇಳಿ. ನಿಮ್ಮಿಂದ ನಮಗೆ ಪೂಜಾ ಏರ್ಪಾಡು, ಉಳಿಯಲು ವಾರದ ಮಟ್ಟಿಗೆ ವಸತಿ, ಪ್ರಸಾದದ ವ್ಯವಸ್ಥೆಯಾಗಬೇಕೆಂದು” ಜೋರು ಮಾಡಿದರು.
ಇದೇನು ಸ್ವಾಮಿಗಳೆ ನಿಮ್ಮದೇ ಮಠವೇನೋ ಶಾಖ ಮಠವೆಂಬಂತೆ ನಮ್ಮನ್ನು ನಿಮ್ಮ ಕಿರಿಸ್ವಾಮಿ ಎಂಬಂತೇ ಜೋರು ಜೋರು… ಮಾಡುತ್ತಿರುವಿರಲ್ಲಾ? ಇದೇನು ತೋಟದಪ್ಪನ ಪುಣ್ಯ ಛತ್ರವೆಂದು ತಿಳಿದಿರೇನು? ನೀವ್ಯಾರೋ… ನಮಗೇ ತಿಳಿಯದು ದಯಮಾಡಿ ಮುಂದೆ ಹೋಗಿ” ಎಂದು ಹಿರಿಸ್ವಾಮಿಗಳು ಅಂದರು.
“ನಿಮಗೆ ನಮ್ಮ ಮಹಿಮೆ ತಿಳಿಯದು. ದೇವರು ನಿಮಗೆ ನೀಡಿದ್ದನ್ನು ನಮ್ಮಂಥಾ ಸನ್ಯಾಸಿಗೆ ನೀಡುವುದರಲ್ಲಿ ತಪ್ಪಿಲ್ಲವಲ್ಲಾ? ಎಲ್ಲ ದೇವರ ಕೊಡುಗೆಯಲ್ಲವೇ? ಹೀಗಾಗಿ ಈ ಮಠದ ಮೇಲೆ ನನಗೂ ಹಕ್ಕಿದೆ. ಪಾಲಿದೆ” ಎಂದ ಸನ್ಯಾಸಿ.
“ನಿಮ್ಮಂಥ ಸನ್ಯಾಸಿಗಳು ನಿತ್ಯ ನೂರಾರು ಜನ ಬಂದು ಹೋಗುವರು ನಿಮ್ಮ ರೀತಿ ವರ್ತಿಸಿದ್ದು ನಾ ಕಾಣೆ. ನೀವ್ಯಾರೋ ಕೆಟ್ಟ, ಕಪಟ ಸ್ವಾಮಿ ಇರಬೇಕು” ಎಂದ ಮಠದ ಹಿರಿಯ ಸ್ವಾಮಿ.
“ಏ ನೀ ನನ್ನ ಅನುಮಾನಿಸುತ್ತೀಯಾ? ನನ್ನ ವೇಷಭೂಷಣ ಶಿಷ್ಯರ ನೋಡಿದರೆ ನಿನಗೆ ಜ್ಞಾನೋದಯವಾಗಬೇಕಾಗಿತ್ತು!! ಆದರೆ ನಿನಗೆ ನೂರಾರು ವರ್ಷ ವಯಸ್ಸಾಗಿದೆ. ಬುದ್ಧಿ ಬಲಿತಿಲ್ಲ” ಎಂದ ಸನ್ಯಾಸಿ.
“ನಾವು ಇಲ್ಲಿ ಈ ಮಠದಲ್ಲಿ ೫೦ ವರ್ಷದಿಂದ ಇದ್ದೇವೆ! ನಮಗೆ ತಿಳಿದಿದೆ ಯಾರು ನಿಜದ ಸ್ವಾಮಿಗಳೆಂದು… ಬರಿಯ ಕಾವಿ ತೊಟ್ಟರೆ ಕಾಮ ಹೋಗುವುದಿಲ್ಲ! ಕರ್ಮ ಕಳೆದುಕೊಂಡು ನಮ್ಮಲ್ಲಿಗೆ ಬಾ… ಹೋಗು” ಎಂದ ಹಿರಿಸ್ವಾಮಿ.
“ನನ್ನ ಏಕವಚನದಲ್ಲಿ ಮಾತನಾಡಿಸುತ್ತೀಯಾ? ನೀನು ನರಕಕ್ಕೆ ಹೋಗುವೆ ಪಾಪಿ! ನಿನಗೆ ಜಾತಿಯ ಮದ, ಅಧಿಕಾರದ ಹಮ್ಮು, ಜನಬಲದ ಸೊಕ್ಕು ಹಣದ ದುರಂಕಾರ, ಜಾಸ್ತಿಯಾಗಿದೆ ನಾನಿನ್ನು ಬರುತ್ತೇನೆ” ಎಂದು ಹೊರಡಲನುವಾದ.
ಹಿರಿಸ್ವಾಮಿಗಳು ಸುಮ್ಮನೆ ಬಿಟ್ಟಾರೆಯೇ?
“ಏ ಇವನನ್ನು ಹಿಡಿಯಿರಿ ಮಠದಿಂದ ಎಳೆಯಿರಿ ನಾಲ್ಕು ಭಾರಿಸಿ…” ಎಂದು ಕೂಗಿಯೇ ಬಿಟ್ಟರು. ಶಿಷ್ಯರಿಗೆ ಇಷ್ಟೇ ಸಾಕಾಯಿತು!
ಅಲ್ಲಿದ್ದ ಇವರ ಶಿಷ್ಯರೆಲ್ಲ ಮೃತ್ಯುಂಜಯ ಸ್ವಾಮಿಯನ್ನು ಮುತ್ತಿದರು. ಮಠದಿಂದ ಹೊರಗೆ ಎಳೆದರು. ಚೆನ್ನಾಗಿ ಬಿಸಿ ಮುಟ್ಟಿಸಿದರು. ಇನ್ನೆಂದೂ ಮಠದತ್ತ ಇಣಕಿ ನೋಡದಂತೆ ಮಾಡಿದರು.
*****

















