ಬಹಳ ಹಿಂದೆ- ಭವ್ಯ ಭಾರತ ಕಂಡ ಅಪ್ರತಿಮ ಅಧ್ಯಾತ್ಮಿಕ ತತ್ವ ಸಿದ್ಧಾಂತಿ ಮಹಾ ಸಿದ್ಧಿ ಸಾಧಕರೊಬ್ಬರಿದ್ದರು. ಅವರ ಹೆಸರು- ರಮಣ ಮಹರ್ಷಿಗಳೆಂದು. ಅವರಿಗೆ ಬಹಳ ಜನ ಶಿಷ್ಯರಿದ್ದರು. ಅವರಲ್ಲಿ ಮರುಳ ಸಿದ್ದಯ್ಯ, ಬಸಪ್ಪಯ್ಯ ವಲಿಯ, ಸೀನ, ಮೃತ್ಯುಂಜಯ, ರಾಜ, ಕೊಟ್ರಯ್ಯ… ಎಂದೂ ಇದ್ದರು.
ಒಮ್ಮೆ- ಉಪದೇಶದ ಮಧ್ಯೆ ರಮಣ ಮಹರ್ಷಿಗಳು “ಅಯ್ಯಾ ಸತ್ಯ ಯಾವುದು? ನಿಮ್ಮಲ್ಲಿ ಯಾರು ಹೇಳ ಬಲ್ಲಿರಿ?” ಎಂದು ಅಲ್ಲಿದ್ದ ತಮ್ಮ ಶಿಷ್ಯರೆಲ್ಲರನೂ… ಒಂದು ಕಡೆಯಿಂದ ಕೇಳುತ್ತಾ ಹೋದರು. ಆಗ ಶಿಷ್ಯರೆಲ್ಲರು ತಲೆ ಕೆರೆಯುತ್ತಾ ಕುಳಿತರು.
“ಸ್ವಾಮಿಗಳೆ… ನಾವು ಕಾಣುವುದೆಲ್ಲ ಸತ್ಯ! ಉಳಿದ್ದಿದ್ದೆಲ್ಲ ಮಿಥ್ಯ” ಎಂದು ಮರುಳ ಸಿದ್ಧಯ್ಯ ಸ್ವಾಮಿಗಳು ಅಂದರು.
ಮೃತ್ಯುಂಜಯ ಎದ್ದು ನಿಂತು- “ಸ್ವಾಮಿಗಳೆ ಯಾವುದು ಸತ್ಯವಲ್ಲ! ಸತ್ಯವಿದ್ದರೆಲ್ಲವೇ ಸತ್ಯವೆನ್ನುವುದು! ಮಿಥ್ಯವನ್ನು ನಾವು ಸತ್ಯವೆಂದು ನಂಬಿದ್ದೇವೆ. ಕಾಣುವುದೆಲ್ಲ ಮಿಥ್ಯ ಸತ್ಯ ಇಲ್ಲದೇ ಇಲ್ಲ…” ಎಂದು ವಾದ ಮಾಡುತ್ತಾ ನಿಂತ.
ರಮಣ ಮಹರ್ಷಿಗಳು- “ಶಿಷ್ಯ ಮೃತ್ಯುಂಜಯ ಕೇಳಿದಕ್ಕೆ ಮಾತ್ರ ಉತ್ತರಿಸು ನೀ ಕುಳಿತುಕೋ.” ಎಂದು ಮೃತ್ಯುಂಜಯನ ಮೇಲೆ ಸಿಟ್ಟಾದರು.
ಸೀನ ಎದ್ದು ನಿಂತು “ಸ್ವಾಮಿಗಳೆ ಸತ್ಯ ಮಿಥ್ಯ ಎರಡು ಕಣ್ಣಿಗೆ ಹತ್ತಿರ. ಯಾವುದು ಸತ್ಯ ಯಾವುದು ಮಿಥ್ಯ ಕಣ್ಣಿಗೆ ತಿಳಿಯದ ಸಂಗತಿಗಳು” ಎಂದ.
“ಸ್ವಾಮಿಗಳೆ… ನಾನು ಮೃತ್ಯುಂಜಯ ಹಾಗೂ ಸೀನ ಹೇಳಿದ್ದನ್ನೇ ಅನುಮೋದಿಸುತ್ತೇನೆ. ನನಗೇನು ಹೆಚ್ಚಿಗೆ ತಿಳಿಯದು” ಎಂದು ವಲಿಯ ಹೇಳಿ ಕುಳಿತ.
ಬಸಪ್ಪಯ್ಯ ಎದ್ದು ನಿಂತು- “ಸ್ವಾಮಿಗಳೆ ನನಗೇನು ಹೊಳೆಯದು. ನನಗೆ ಎರಡು ದಿನ ಕಾಲಾವಕಾಶ ನೀಡಿದಲ್ಲಿ ಅಧ್ಯಯನ ಮಾಡಿ ಬಂದು ಅರುಹುವೆ” ಎಂದ.
ಅಲ್ಲಿದ್ದ ರಾಜ, ಕೊಟ್ರಯ್ಯ ತಲೆ ತಗ್ಗಿಸಿ- “ಮೌನಂ ಸರ್ವತ್ರ ಸಾಧನಂ…” ಎಂದು ಕುಳಿತ್ತಿದ್ದರು.
“ಅಯ್ಯಾ ಶಿಷ್ಯರೆ.. ನಾ ಎನ್ನುವ ಪ್ರಜ್ಞೆಯಷ್ಟೇ ಸತ್ಯಾಸ್ಯ ಸತ್ಯ! ಉಳಿದಿದ್ದೆಲ್ಲ ಮಿಥ್ಯಸ್ಯಾ ಮಿಥ್ಯ… ನೋಡಿ ಎಷ್ಟು ಸರಳ ಸುಂದರವಾಗಿದೆ” ಎಂದು ರಮಣ ಮಹರ್ಷಿಗಳು ಅಂದರು.
ಅಲ್ಲಿಗೆ ಅಂದಿನ ಕಾರ್ಯಕ್ರಮವು ಮುಗಿಯಿತು. ಶಿಷ್ಯರೆಲ್ಲ ಎದ್ದು ಹೊರಟರು. ಸ್ವಾಮಿಗಳು ಧ್ಯಾನಸ್ಥರಾದರು.
*****


















