ಹಾಳುಬಿದ್ದ ಗೋಡೆಗಳ ಮೇಲೆ
ಬೆಳೆದಿದ್ದ ಹುಲ್ಲುಗರಿಕೆ
ಬಣ್ಣಗೆಟ್ಟ ಬಾಗಿಲು
ಸರಳ ಚೌಕಟ್ಟು ಕುಸರಿಲ್ಲ
ಕೆತ್ತನೆ ಕಲಾತ್ಮಕತೆಯಿಲ್ಲ
ಬೋಳು ಬೋಳಾದ ಬಾಗಿಲು
ಬಿಸಿಲು, ಮಳೆಗೆ ಕಪ್ಪಿಟ್ಟ ಕದಗಳು
ಬಡಿದಿದ್ದ ಪಟ್ಟಿಗಳು
ಈಗೋ ಆಗೋ ಉದುರುವ
ತುಕ್ಕುಹಿಡಿದ ಮಳೆಗಳೊಂದಿಗೆ
ನೇತಾಡುತ್ತದೆ ದೊಡ್ಡ ಬೀಗ
ಕೌತಕದಿಂದ ನಿರೀಕ್ಷಿಸುತ್ತಿದ್ದೆ
ಬಾಗಿಲು ತೆಗೆಯಬಹುದೇನೋ
ಯಾರಾದರೂ ಬರಬಹುದೇನೋ
ಬೀಗ ತೆಗೆಯಬಹುದೇನೋ
ಮುಚ್ಚಿದ ಬಾಗಿಲೊಳಗೆ
ಗೋರಿಗಳ ಬಿಕ್ಕಳಿಕೆ
ರಕ್ತಮಾಂಸದ ಹೊದಿಕೆ
ಒಳಗೆ ಮಿಸುಕುವ ಜೀವ
ಬದುಕಿದ್ದಾಳೆ ಅವಳು
ಬೇಡದ ಮಕ್ಕಳಿಗೆ
ಜನ್ಮ ನೀಡುತ್ತಿರುವ
ತವರಿಲ್ಲದ ಅನಾಥೆ.
ದಂಗೆಯಲಿ ಮುಚ್ಚಿದ
ಅವಳ ಮನೆ ಬಾಗಿಲಿಗೆ
ಹೊರಗಿನಿಂದ ಬೀಗಮುದ್ರೆ
ಒಳಗಿಂದ ಹರಿದು ಬರುವ
ಬಚ್ಚಲ ನೀರಿನ ಹರಿವು
ಸುಳಿವು ನೀಡುತ್ತದೆ
ಒಳಗೆ ಬದುಕಿರುವ
ಅವಳ ಕಥೆ ಹೇಳುತ್ತದೆ.
*****