ಸ್ಫುರ್ಜದೂರ್ಜಸ್ವಿತೆಯ ಚೈತನ್ಯದೊಂದೆಳೆಗೆ
ಜನ್ಮಲಯಲಯಗತಿಯೊಳುಳಿಯೇಟ ಹೊಡೆದು
ಕಾಲ ಬಲುಹಿಂದಣದ ಅದನೆ ಆ ಜೀವವನೆ
ಕಂಡರಿಸಿದೀ ತನುವು ಹೊಸದು ನನ್ನದಿದು;
ಬಗೆಬಗೆಯ ಪರಿಸರದ ವಾಸ್ತವವ್ಯಾಘಾತ-
ದೊಳಗಿರವ ನೆಲೆಗೊಳಿಸಿ ಹದುಳದೊಳು ನಡೆಸಿ
ಜ್ಞಾನಾರ್ಜನೋಪಾಯವೀ ಬುದ್ದಿ ಅಂದಿನದು
ವರ್ತಿಸಿಹುದೆನ್ನೊಳಗೆ ತಾ ನವ್ಯವೆನಿಸಿ.
ಶ್ರೀಮೂರ್ತಿಪದಕೆರಗುತೀ ಸನಾತನಜೀವಮೀ ಸನಾತನ ಚಿತ್ತನೀತಂ
ಪಡೆಯುತಿಹ ದಿವ್ಯಾನುಭೂತಿಯಿದು ಅನುಭೂತಮನನುಭೂತಂ.
*****


















