ಕ್ಷುಬ್ಧ ಸಾಗರದಂತೆ ಅಲ್ಲೋಲಕಲ್ಲೋಲ
ನನ್ನಂತರಂಗದಲ್ಲಿ ಹೃದಯವಿಂದು
ಕುದಿಯುತಿದೆ ಉಕ್ಕುತಿದೆ ಬತ್ತುತಿದೆ ಒಂದೊಂದು
ನನ್ನಾತ್ಮ ಬಿಂದು
ಯಾವ ತಪ್ಪಿಗೆ ಯಾವ ಶಿಕ್ಷೆಯಿದೊ ಕಾಣೆನು
ಸರ್‍ವ ಕ್ಷಮೆ ಯಾಚಿಸಲು ನಾನಿಂದು ಸಿದ್ಧನು
ಏನ ಮಾಡಲು ಹೊರಟು ಏನಾಯಿತೋ ತಿಳಿಯೆ
ಕೈ ತಪ್ಪೊ ಸಂಕಲ್ಪ ತಪ್ಪೊ ಅರಿಯೆ
ನುಡಿನುಡಿದು ಮನಃಸಾಕ್ಷಿ ಸೊರಗಿ ಹೋಗಿರುವುದು
ಒಡಕು ಕನ್ನಡಿಯಲಿ ಮುಖ ಸಹಸ್ರಾಕ್ಷ
ತೆರೆದರೂ ಮುಚ್ಚಿದರು ದೃಷ್ಟಿ ಕೈವಶವಿಲ್ಲ
ಕೇಳಿದರು ಅರ್‍ಥವಿಪ ಶಕ್ತಿ ಕಿವಿಗಿಲ್ಲ
ಭಾವಗಳ ಪ್ರಕಟಿಸಲು ಮಾತುಗಳೆ ಈಗಿಲ್ಲ
ನೆನಪುಗಳ ಕಣಜವೂ ಬರಿದಾಗಿದೆ
ಬೆಟ್ಟದಲಿ ಸುತ್ತಿದೆನು ಮರುಭೂಮಿಯಲ್ಲಿ ಅಲೆದೆನು
ಬಿಸಿಲಲ್ಲಿ ಬೆಂದೆನು ಬಯಲಲ್ಲಿ ಕಾದೆನು
ಜೀವ ನಿನ್ನದು ದೇಹ ನಿನ್ನದು ಮನವು ನಿನ್ನದು ಆದರೆ
ಪುಣ್ಯ ನಿನ್ನದು ಪಾಪ ನಿನ್ನದು ನನ್ನದಿನ್ನೇನಿದೆ
*****


















